
- ಸೆಪ್ಟೆಂಬರ್ 30ಕ್ಕೆ ತೆರೆ ಕಾರಣಲಿದೆ ಪೊನ್ನಿಯಿನ್ ಸೆಲ್ವನ್
- ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿ
ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ʼಪೊನ್ನಿಯಿನ್ ಸೆಲ್ವನ್ʼ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಟೀಸರ್ ಮತ್ತು ಟ್ರೈಲರ್ಗಳ ಮೂಲಕವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರ, ಸೆಪ್ಟೆಂಬರ್ 30ಕ್ಕೆ ತೆರೆಗೆ ಬರಲಿದೆ. ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಗುರುವಾರ ಬೆಂಗಳೂರಿಗೆ ಆಗಮಿಸಿದ್ದು, ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದೆ.
ಪೊನ್ನಿಯಿನ್ ಸೆಲ್ವನ್ನಲ್ಲಿ ಆದಿತ್ಯ ಕರಿಕಾಳನ್ ಪಾತ್ರ ನಿಭಾಯಿಸಿರುವ ಸ್ಟಾರ್ ನಟ ಚಿಯಾನ್ ವಿಕ್ರಮ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಕಾರ್ತಿ ಮತ್ತು ಜಯಂ ರವಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಆದಿತ್ಯ ಕರಿಕಾಳನ್ ಪಾತ್ರಕ್ಕಾಗಿ ತಾವು ನಡೆಸಿದ ತಯಾರಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ವಿಕ್ರಮ್, "ಚೋಳ ಸಾಮ್ರಾಜ್ಯದ ಕಥೆಯನ್ನು ಕೇಳಿಕೊಂಡೇ ನಾವು ದೊಡ್ಡವರಾಗಿದ್ದೇವೆ. ಆದರೆ, ಆದಿತ್ಯ ಕರಿಕಾಳನ್ ಪಾತ್ರವನ್ನು ನಾನು ತುಂಬಾನೇ ಇಷ್ಟಪಟ್ಟು ಮಾಡಿದ್ದೇನೆ. ಇಡೀ ಸಾಮ್ರಾಜ್ಯದಲ್ಲಿ ಎಲ್ಲರೂ ಪಟ್ಟಕ್ಕಾಗಿ ಕಿತ್ತಾಡುತ್ತಿದ್ದರೇ, ಆದಿತ್ಯ ಕರಿಕಾಳನ್ ಮಾತ್ರ ಯಾವ ಐಶ್ವರ್ಯ, ಸಂಪತ್ತುಗಳನ್ನು ಲೆಕ್ಕಿಸದೆ ಪ್ರೀತಿಯಲ್ಲಿ ಮುಳುಗಿರುತ್ತಾನೆ. ಆತನದ್ದು ಒಂತರದ ದುರಂತ ಕಥೆ. ಹೀಗಾಗಿ ಆದಿತ್ಯ ಕರಿಕಾಳನ್ ಪಾತ್ರವನ್ನು ನಿಭಾಯಿಸುವುದು ನನಗೆ ಇಷ್ಟದ ಕೆಲಸವಾಗಿತ್ತು. ಅದರಲ್ಲೂ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಹೆಚ್ಚು ಖುಷಿ ನೀಡಿತು. ಆದಿತ್ಯ ಕರಿಕಾಳನ್ ಒಬ್ಬ ಶಿವಭಕ್ತನಾದ ಕಾರಣ ಪಾತ್ರಕ್ಕೆ ಹೋಲುವಂತೆ ದಟ್ಟವಾಗಿ ಕೂದಲು ಬೆಳೆಸಲು ನಿರ್ದೇಶಕರು ಸೂಚಿಸಿದ್ದರು. ಪಾತ್ರಕ್ಕೆ ಬೇಕಿದ್ದ ಎಲ್ಲವನ್ನೂ ಮಾಡಿದ್ದೇನೆ. ಈ ನೆಲದ ಐತಿಹಾಸಿಕ ಕಥೆಯ ಭಾಗವಾದ ಹೆಮ್ಮೆ ನನಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
All set to meet you guys in Bengaluru! #PS1 pic.twitter.com/OcFTVGwHqj
— His Highness Vanthiyathevan (@Karthi_Offl) September 22, 2022
ನಂತರ ಮಾತನಾಡಿದ ನಟ ಕಾರ್ತಿ, "ಚಿತ್ರದಲ್ಲಿ ನಾನು ವಂಡಿಯದೇವನ್ ಪಾತ್ರವನ್ನು ನಿಭಾಯಿಸಿದ್ದೇನೆ. ತುಂಬಾ ಸೀರಿಯಸ್ ಎನ್ನಿಸುವ, ಆಗಾಗ ಹಾಸ್ಯಮಯವೂ ಎನ್ನಿಸುವ ಪಾತ್ರ ನನ್ನದು. ಪಾತ್ರಕ್ಕಾಗಿ ಹೆಚ್ಚಿನ ತಯಾರಿ ನಡೆಸುವ ಅವಶ್ಯಕತೆ ಏನೂ ಇರಲಿಲ್ಲ. ಕಲ್ಕಿ ಕೃಷ್ಣಮೂರ್ತಿಯವರು ಬರೆದ ಪೊನ್ನಿಯಿನ್ ಸೆಲ್ವನ್ ಕಥೆಯನ್ನು ಆಧರಿಸಿ ಈ ಚಿತ್ರ ಸಿದ್ಧಗೊಂಡಿದೆ. ನಾನು ಚಿಕ್ಕಂದಿನಿಂದಲೂ ಈ ಕಥೆಯನ್ನು ಬಲ್ಲವನಾದ್ದರಿಂದ ಪಾತ್ರ ನಿರ್ವಹಣೆ ಸುಲಭವಾಯಿತು. ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಮಣಿರತ್ನಂ ಅವರು ನೆರವಾಗುತ್ತಿದ್ದರೂ ಹೀಗಾಗಿ ನನ್ನ ಪಾತ್ರವನ್ನು ಅಂದುಕೊಂಡ ಹಾಗೆ ನಿಭಾಯಿಸಲು ಸಾಧ್ಯವಾಗಿದೆ" ಎಂದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕೇವಲ ಚೋಳ ಸಾಮ್ರಾಜ್ಯ ಮಾತ್ರವಲ್ಲದೆ ಕರ್ನಾಟಕದ ರಾಷ್ಟ್ರಕೂಟ ಮತ್ತು ಪಲ್ಲವ ಸಾಮ್ರಾಜ್ಯದ ಎಳೆಯೂ ಇರಲಿದೆ. ಅದಕ್ಕಾಗಿಯೇ ಮೈಸೂರು, ಮೇಲುಕೋಟೆ ಭಾಗದಲ್ಲೂ ಪೊನ್ನಿಯಿನ್ ಸೆಲ್ವನ್ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.