32 ವರ್ಷಗಳ ಬಳಿಕ ಶುರುವಾದ ಶ್ರೀನಗರದ ಮಲ್ಟಿಪ್ಲೆಕ್ಸ್‌ನಲ್ಲಿ ʻಪೊನ್ನಿಯಿನ್‌ ಸೆಲ್ವನ್‌ʼ ಪ್ರದರ್ಶನ

srinagar multiplex
  • ಸೆಪ್ಟೆಂಬರ್‌ 20ರಂದು ಉದ್ಘಾಟನೆಯಾಗಿದ್ದ ಶ್ರೀನಗರದ ಮಲ್ಟಿಪ್ಲೆಕ್ಸ್‌
  • 'ಪೊನ್ನಿಯಿನ್‌ ಸೆಲ್ವನ್‌' ಜೊತೆಗೆ 'ವಿಕ್ರಮ್‌ ವೇದ ಪ್ರದರ್ಶನ'

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 32 ವರ್ಷಗಳ ಬಳಿಕ ಚಿತ್ರಮಂದಿರಗಳು ಮತ್ತೆ ತಲೆ ಎತ್ತಿವೆ. ಭಯೋತ್ಪಾದಕರ ಬೆದರಿಕೆ ಮತ್ತು ದಾಳಿಯಿಂದಾಗಿ 90ರ ದಶಕದಲ್ಲಿ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರಗಳಿಗೆ ಇದೀಗ ಮರುಜೀವ ಬಂದಿದ್ದು, ಕೇಂದ್ರ ಸರ್ಕಾರದ ನೂತನ ಯೋಜನೆಯ ಅಡಿ ಜಮ್ಮು ಮತ್ತು ಕಾಶ್ಮೀರದ ವಿವಿದೆಡೆಗಳಲ್ಲಿ ಮಲ್ಟಿಪ್ಲೆಕ್ಸ್‌ಗಳು ಆರಂಭವಾಗಿವೆ.

ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇತ್ತೀಚೆಗೆ ಶೋಫಿಯಾನ್‌, ಪುಲ್ವಾಮ ಮತ್ತು ಶ್ರೀನಗರದಲ್ಲಿನ ನೂತನ ಮಲ್ಟಿಪ್ಲೆಕ್ಸ್‌ಗಳನ್ನು ಉದ್ಘಾಟಿಸಿ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ಈ ಪೈಕಿ ಶ್ರೀನಗರದ ಶಿವ್‌ಪೋರದಲ್ಲಿರುವ ಮಲ್ಟಿಪ್ಲೆಕ್ಸ್‌ ಇಂದಿನಿಂದ ಪ್ರೇಕ್ಷಕರಿಗಾಗಿ ಚಲನಚಿತ್ರ ಪ್ರದರ್ಶನ ಆರಂಭಗೊಂಡಿದೆ.

3 ಪರದೆಗಳುಳ್ಳ ಶಿವ್‌ಪೋರದ ನೂತನ ಮಲ್ಟಿಪ್ಲೆಕ್ಸ್‌ 520 ಆಸನಗಳನ್ನು ಹೊಂದಿದ್ದು, ಸದ್ಯ ಎರಡು ಪರದೆಗಳಲ್ಲಿ ಮಾತ್ರ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಇಂದು 'ಪೊನ್ನಿಯಿನ್‌ ಸೆಲ್ವನ್‌' ಮತ್ತು 'ವಿಕ್ರಮ್ ವೇದ' ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಟಿಕೆಟ್‌ ದರವನ್ನು ₹200ರಿಂದ ₹500 ರವರೆಗೆ ನಿಗದಿಪಡಿಸಲಾಗಿದೆ ಎಂದು ಮಲ್ಟಿಪ್ಲೆಕ್ಸ್‌ ಮಾಲೀಕ ವಿಜಯ್‌ ಧಾರ್‌ ತಿಳಿಸಿದ್ದಾರೆ.  

ಸದ್ಯ ಶೋಫಿಯಾನ್‌, ಪುಲ್ವಾಮ ಮತ್ತು ಶ್ರೀನಗರದಲ್ಲಿ ಮಲ್ಟಿಪ್ಲೆಕ್ಸ್‌ಗಳು ಪ್ರಾರಂಭವಾಗಿದ್ದು, ನಂತರ ದಿನಗಳಲ್ಲಿ ಅನಂತ್‌ ನಾಗ್‌, ಬಂಡಿಪೋರಾ, ಡೋಡಾ, ರಾಜೌರಿ, ಪೂಂಚ್‌, ಕಿಶ್ತವಾರ್‌ ಮುಂತಾದ ಜಿಲ್ಲೆಗಳಲ್ಲೂ ಮಲ್ಟಿಪ್ಲೆಕ್ಸ್‌ಗಳು ಕಾರ್ಯಾರಂಭಿಸಲಿವೆ ಎಂದು ಮನೋಜ್‌ ಸಿನ್ಹಾ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಭಿಷೇಕ್‌ ಹುಟ್ಟು ಹಬ್ಬಕ್ಕೆ ಕಾಮನ್‌ ಡಿಪಿ ಬಿಡುಗಡೆ ಮಾಡಿದ ಸುಮಲತಾ ಅಂಬರೀಶ್‌

1980ರ ಆಸುಪಾಸಿನಲ್ಲಿ ಕಾಶ್ಮೀರ ಕಣಿವೆಯಲ್ಲಿ 12ಕ್ಕೂ ಹೆಚ್ಚು ಚಿತ್ರಮಂದಿರಗಳು ಚಾಲ್ತಿಯಲ್ಲಿದ್ದವು. ಭಯೋತ್ಪಾದಕರ ಬೆದರಿಕೆಯ ಹಿನ್ನೆಲೆಯಲ್ಲಿ ಮಾಲೀಕರು ಚಿತ್ರಮಂದಿರಗಳನ್ನು ಮುಚ್ಚಿದ್ದರು. 1990ರ ವೇಳೆಗೆ ಸರ್ಕಾರದ ಸಹಕಾರದೊಂದಿಗೆ ಮತ್ತೆ ಚಿತ್ರಮಂದಿರಗಳನ್ನು ಪುನಾರಂಭಿಸುವ ಪ್ರಯತ್ನ ನಡೆಸಲಾಯಿತು. ಆದರೆ, 1999ರ ಸೆಪ್ಟೆಂಬರ್‌ನಲ್ಲಿ ಶ್ರೀನಗರದ ಲಾಲ್‌ ಚೌಕ್‌ನಲ್ಲಿದ್ದ ʼರೀಗಲ್‌ ಸಿನಿಮಾʼ ಚಿತ್ರಮಂದಿರದ ಮೇಲೆ ಭಯೋತ್ಪಾದಕರಿಂದ ನಡೆದ ಗ್ರೆನೇಡ್‌ ದಾಳಿಯಿಂದಾಗಿ ಚಿತ್ರಮಂದಿರಗಳು ದಶಕಗಳ ಕಾಲ ಮುಚ್ಚಲ್ಪಟ್ಟವು.

ನಿಮಗೆ ಏನು ಅನ್ನಿಸ್ತು?
0 ವೋಟ್