ಜನ್ಮದಿನ | ಹಾಲಿವುಡ್‌ನಲ್ಲಿ ಮಿಂಚಿದ ಭಾರತದ ಏಕೈಕ ಕಲಾವಿದೆ

priyanka chopra

ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಿಯಾಂಕ ಅವರಿಗೆ ದೇಶ, ವಿದೇಶಗಳ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹುಟ್ಟು ಹಬ್ಬದ ನೆಪದಲ್ಲಿ ಅವರ ಸಿನಿ ಪಯಣ ಕಿರುನೋಟ ಇಲ್ಲಿದೆ.

  • 1982ರ ಜುಲೈ 18ರಂದು ಅವಿಭಜಿತ ಬಿಹಾರದ (ಈಗಿನ ಜಾರ್ಖಂಡ್‌) ಜಮ್‌ಶೆಡ್‌ಪುರದಲ್ಲಿ ಪ್ರಿಯಾಂಕ ಚೋಪ್ರಾ ಜನಿಸಿದರು. ಪ್ರಿಯಾಂಕ ಅವರ ತಂದೆ ಅಶೋಕ್‌ ಮತ್ತು ತಾಯಿ ಮಧು ಚೋಪ್ರಾ ಇಬ್ಬರೂ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. 
  • ಪ್ರಿಯಾಂಕ ಅವರದ್ದು ಸೇನಾ ಹಿನ್ನೆಲೆಯ ಕುಟುಂಬವಾದ ಕಾರಣ ಅವರ ತಂದೆ, ತಾಯಿಗೆ ದೆಹಲಿ, ಚಂಡಿಗಢ, ಅಂಬಾಲ, ಲಡಾಕ್‌, ಲಕ್ನೋ, ರಾಯ್‌ ಬರೇಲಿ ಹೀಗೆ ಹಲವು ಪ್ರದೇಶಗಳಿಗೆ ವರ್ಗಾವಣೆ ಆಗುತ್ತಿತ್ತು. ಹೀಗಾಗಿ ನಾನಾ ಪ್ರದೇಶಗಳ ಸೇನಾ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಪ್ರಿಯಾಂಕ ಕೊನೆಗೆ ಅಮೆರಿಕಗೆ ತೆರಳಿ ಅಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ಜೊತೆಗೆ ಹವ್ಯಾಸಿ ರಂಗಭೂಮಿ ಮತ್ತು ಸಂಗೀತದ ಕಡೆಗೂ ಒಲವು ಬೆಳೆಸಿಕೊಳ್ಳುತ್ತಾರೆ.
  • 3 ವರ್ಷಗಳ ಕಾಲ ಅಮೆರಿಕದಲ್ಲಿ ಹೈಸ್ಕೂಲ್‌ ಶಿಕ್ಷಣ ಪಡೆದು ಭಾರತಕ್ಕೆ ಮರಳುವ ಪ್ರಿಯಾಂಕ, ರಾಯ್‌ ಬರೇಲಿಯಲ್ಲಿ ಶಿಕ್ಷಣ ಮುಂದುವರಿಸುತ್ತ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾಗುತ್ತಾರೆ. 2000ದ ಸಾಲಿನ ಮಿಸ್‌ ಇಂಡಿಯಾ ಪಟ್ಟ ಗೆಲ್ಲುವ ಪ್ರಿಯಾಂಕ ಚೋಪ್ರಾ, ಅದೇ ವರ್ಷ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಳ್ಳುತ್ತಾರೆ.   
Image
priyanka chopra
  • 2000ರಲ್ಲಿ ʼಮಿಸ್ ವರ್ಲ್ಡ್ʼ ಪಟ್ಟ ಗೆದ್ದ ಬಳಿಕ ದಳಪತಿ ವಿಜಯ್ ಮುಖ್ಯಭೂಮಿಕೆಯ ʼತಮಿಳನ್ʼ ಚಿತ್ರದಲ್ಲಿ ನಾಯಕಿಯ ಪಾತ್ರ ನಿಭಾಯಿಸಿ 2002ರಲ್ಲಿ ಬೆಳ್ಳಿತೆರೆ ಪ್ರವೇಶಿಸುತ್ತಾರೆ.
  • 2003ರಲ್ಲಿ ʼದಿ ಹೀರೋ– ಲವ್ ಸ್ಟೋರಿ ಆಫ್‌ ಸ್ಪೈʼ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಪ್ರಿಯಾಂಕ ಕೆಲವೇ ವರ್ಷಗಳಲ್ಲಿ ಬಾಲಿವುಡ್‌ನ ಬಹು ಬೇಡಿಕೆಯ ನಟಿಯಾಗಿ ಬೆಳೆದರು. ವಿವಿಧ ಚಿತ್ರರಂಗಗಳ 65ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, 'ಕ್ವಾಂಟಿಕೊ', 'ಸಿಟಾಡೆಲ್‌' ಸೇರಿ ಹಲವು ಜನಪ್ರಿಯ ಹಾಲಿವುಡ್‌ ವೆಬ್‌ ಸರಣಿಗಳಲ್ಲೂ ಮಿಂಚಿದ್ದಾರೆ.
  • ಬಾಲಿವುಡ್‌ನ ಹಲವು ತಾರೆಯರು ಹಾಲಿವುಡ್‌ನಲ್ಲಿ ಗುರುತಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸುತ್ತಿದ್ದ ಹೊತ್ತಿನಲ್ಲೇ, ಹಾಲಿವುಡ್‌ನ ಜನಪ್ರಿಯ ʼಕ್ವಾಂಟಿಕೊʼ ಸರಣಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸುವ ಮೂಲಕ ಪ್ರಿಯಾಂಕ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡರು.
  • ಗ್ಲೋಬಲ್ ಸ್ಟಾರ್ ವರ್ಚಸ್ಸನ್ನು ಕಾಪಿಟ್ಟುಕೊಂಡು ಇಂದಿಗೂ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಏಕೈಕ ಭಾರತೀಯ ನಟಿ ಪ್ರಿಯಾಂಕ ಚೋಪ್ರಾ. ಅಷ್ಟೇ ಅಲ್ಲ, ತಮ್ಮ ಅದ್ಭುತ ನಟನೆಗಾಗಿ 2 ಬಾರಿ ರಾಷ್ಟ್ರ ಪ್ರಶಸ್ತಿ, 5 ಫಿಲ್ಮಫೇರ್‌, 6 ಐಫಾ ಪ್ರಶಸ್ತಿಗಳನ್ನು ಪಡೆದಿರುವ ಪ್ರಿಯಾಂಕ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ.
  • ಖ್ಯಾತ ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ಅವರೊಂದಿಗೆ ಪ್ರೀತಿಯಲ್ಲಿದ್ದ ಪ್ರಿಯಾಂಕ, 2018ರ ಡಿಸೆಂಬರ್‌ 1ರಂದು ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟರು. 
Image
Priyanka-Chopra-and-Nick-Jonas-wedding
  • ನಿಕ್‌ ಮತ್ತು ಪ್ರಿಯಾಂಕ ಜೋಡಿ ಬಾಡಿಗೆ ತಾಯ್ತನದ ಮೂಲಕ ಇತ್ತೀಚೆಗೆ ಹೆಣ್ಣುಮಗು ಪಡೆದಿದ್ದು, ಮಗಳಿಗೆ ಮಾಲತಿ ಮೇರಿ ಎಂದು ಹೆಸರಿಟ್ಟಿದ್ದಾರೆ. 
  • ಇತ್ತೀಚೆಗೆ ʼಸಿಟಾಡೆಲ್‌ʼ ವೆಬ್‌ ಸರಣಿಯ ಚಿತ್ರೀಕರಣ ಪೂರ್ಣಗೊಳಿಸಿರುವ ಪ್ರಿಯಾಂಕ, ʼಇಟ್ಸ್‌ ಆಲ್‌ ಕಮಿಂಗ್‌ ಬ್ಯಾಕ್‌ ಟು ಮಿʼ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ನಿಮಗೆ ಏನು ಅನ್ನಿಸ್ತು?
0 ವೋಟ್