ದರ್ಶನ್ ಹೇಳಿಕೆಗೆ ಅಪ್ಪು ಅಭಿಮಾನಿಗಳ ಆಕ್ರೋಶ ; ನಿಜಕ್ಕೂ ನಡೆದಿದ್ದೇನು?

ನಟ ದರ್ಶನ್‌, ಪುನೀತ್‌ ರಾಜ್‌ಕುಮಾರ್‌ ಕುರಿತು ನೀಡಿದ ಹೇಳಿಕೆ ಏನು? ಪುನೀತ್‌, ದರ್ಶನ್‌ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವೇನು ಎಂಬುದರ ಪೂರ್ಣ ವಿವರ.
dboss

ಕ್ರಾಂತಿ ಸಿನಿಮಾದ ಪ್ರಚಾರ ಸಂದರ್ಶನದಲ್ಲಿ ನಟ ದರ್ಶನ್ ಪುನೀತ್ ರಾಜ್‌ಕುಮಾರ್‌ ಬಗ್ಗೆ ನೀಡಿದ್ದ ಹೇಳಿಕೆಗೆ ಪುನೀತ್ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದರ್ಶನ್ ಕೂಡಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಪುನೀತ್‌ ಬಗ್ಗೆ ದರ್ಶನ್‌ ಹೇಳಿದ್ದೇನು? 

ಇತ್ತೀಚೆಗೆ 'ರಜನಿ ಎಕ್ಸ್‌ಪ್ರೆಸ್‌' ಎಂಬ ಯೂಟ್ಯೂಬ್‌ ಚಾನೆಲಿಗೆ ಸಂದರ್ಶನ ನೀಡಿದ್ದ ದರ್ಶನ್, ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಕ್ರಾಂತಿ ಸಿನಿಮಾಗೆ ಪ್ರಚಾರ ನೀಡುತ್ತಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹೀಗೆ ಅಭಿಮಾನಿಗಳನ್ನು ಹೊಗಳುತ್ತ, "ಸಾಮಾನ್ಯವಾಗಿ ಎಲ್ಲರಿಗೂ ಸತ್ತ ಮೇಲೆ ತೋರಿಸುವ ಅಭಿಮಾನವನ್ನು ನನ್ನ ಅಭಿಮಾನಿಗಳು ನಾನು ಬದುಕಿದ್ದಾಗಲೇ ತೋರಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ತೀರಿಕೊಂಡಾಗ ಅವರ ಅಭಿಮಾನಿಗಳು ತೋರಿದ್ದ ಪ್ರೀತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೆ, ನನ್ನ ನಾನು ಬದುಕಿದ್ದಾಗಲೇ ತೋರಿಸಿದ ಈ ಅಭಿಮಾನವನ್ನು ನೋಡಿ ಸಾಕು ಬಿಡಯ್ಯಾ ಇದಕ್ಕಿಂತ ಇನ್ನೇನೂ ಬೇಡ ಎನ್ನಿಸಿಬಿಡ್ತು. ಕ್ರಾಂತಿ ಇಷ್ಟು ದೊಡ್ಡ ಮಟ್ಟಕ್ಕೆ ಪ್ರಚಾರ ಪಡೆಯುತ್ತದೆ ಎಂದು ನಾವುಗಳು ಊಹಿಸಿರಲಿಲ್ಲ. ಆದರೆ, ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನಲ್ಲಿ ನಮ್ಮ ಸಿನಿಮಾವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಅವರ ಈ ಪ್ರೀತಿಗೆ ಧನ್ಯವಾದ ಅನ್ನೋ ಪದ ತೀರ ಚಿಕ್ಕದಾಗಿ ಬಿಡುತ್ತೆ ನಾನು ನಿಜಕ್ಕೂ ಚಿರಋಣಿ" ಎಂದಿದ್ದರು.

ದರ್ಶನ್‌ ಹೇಳಿಕೆಯ ಅರ್ಧ ವಿಡಿಯೋ ಮಾತ್ರ ವೈರಲ್‌

ಆಗಸ್ಟ್‌ 6ರಂದು ಪ್ರಸಾರವಾಗಿದ್ದ 24 ನಿಮಿಷಗಳ ಈ ಸುದೀರ್ಘ ಸಂದರ್ಶನದಲ್ಲಿ ದರ್ಶನ್‌, ಪುನೀತ್‌ ಸಾವಿನ ಬಗ್ಗೆ ಮಾತನಾಡಿದ್ದ ವಿಡಿಯೋ ತುಣುಕು ಮಾತ್ರ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡತೊಡಗಿದೆ. ಅದೇ ಸಂದರ್ಶನದಲ್ಲಿ ದರ್ಶನ್‌ ಮುಂದುವರೆದು ಪುನೀತ್‌ ಅವರು ತೀರಿಕೊಂಡಾಗ ನಾನು ಕ್ರಾಂತಿ ಚಿತ್ರದ ಶೂಟಿಂಗ್‌ ನಿಲ್ಲಿಸಿದ್ದೆ. ನಾನು ಅವರ ಮನೆಯ ಅನ್ನ ತಿಂದು ಬೆಳೆದವನು. ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿರುವಾಗ ನನಗೂ ಸೂತಕವೇ ಎಂದ ಮಾತುಗಳು ಮಾತ್ರ ಎಲ್ಲಿಯೂ ಪ್ರಚಾರಕ್ಕೆ ಬಂದಿಲ್ಲ.

ಪುನೀತ್‌ ಅಭಿಮಾನಿಗಳ ಆಕ್ರೋಶ

ದರ್ಶನ್‌, ಪುನೀತ್‌ ಸಾವಿನ ಕುರಿತು ಮಾತನಾಡಿದ ಬೆನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ ಅಪ್ಪು ಅಭಿಮಾನಿಗಳು,  "ನಾವು ನಮ್ಮ ನೆಚ್ಚಿನ ನಟನನ್ನು ಕಳೆದುಕೊಂಡು ಮೊದಲೇ ನೋವಿನಲ್ಲಿದ್ದೀವಿ. ಹೀಗಿರುವಾಗ ಮತ್ತೆ ದರ್ಶನ್‌ ಅವರ ಸಾವಿನ ಬಗ್ಗೆ ಯಾಕೆ ಮಾತನಾಡಬೇಕಿತ್ತು ಎಂದು ಪ್ರಶ್ನೆ ಹಾಕಿದ್ದಾರೆ. ಅವರ ಹೇಳಿಕೆ ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ. ದರ್ಶನ್‌ ನಮ್ಮ ಕ್ಷಮೆ ಕೇಳಬೇಕು ಇಲ್ಲವಾದರೆ ಕ್ರಾಂತಿ ಸಿನಿಮಾದ ಬಿಡುಗಡೆಗೆ ತಡೆಯೊಡ್ಡುತ್ತೇವೆ. ಕೇವಲ ಕ್ರಾಂತಿ ಮಾತ್ರವಲ್ಲ ಅವರ ಮುಂದಿನ ಯಾವ ಚಿತ್ರಗಳು ಪ್ರದರ್ಶನ ಕಾಣಲು ಬಿಡುವುದಿಲ್ಲ" ಎಂದು ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ. 

Image
darshanandpuneeth

ದರ್ಶನ್‌ ಹೇಳಿಕೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಮತ್ತು ದರ್ಶನ್‌ ಅಭಿಮಾನಿಗಳ ನಡುವೆ ವಾಗ್ವಾದಗಳು ತಾರಕಕ್ಕೇರುತ್ತಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಕಲಾವಿದರು ಮತ್ತು ನಿರ್ದೇಶಕರು  ದರ್ಶನ್‌ ಬೆಂಬಲಕ್ಕೆ ನಿಂತಿದ್ದಾರೆ.

ದರ್ಶನ್‌ಗೆ ದುನಿಯಾ ಸೂರಿ ಬೆಂಬಲ

ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಅಭಿಪ್ರಾಯ ಮುಂದಿಟ್ಟಿರುವ ನಿರ್ದೇಶಕ ದುನಿಯಾ ಸೂರಿ, "ಡಿ ಬಾಸ್, ಪುನೀತ್ ಅವರು ನಿಧನವಾದ ದುಖಃದಿಂದ ತಮ್ಮ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದಾಗ ಅದರ ಬಗ್ಗೆ ಯಾರು ಕೂಡ ಒಂದು ಪೋಸ್ಟ್ ಹಾಕಲಿಲ್ಲ. ಪುನೀತ್ ಬಗೆಗಿನ ಕಾರ್ಯಕ್ರಮವನ್ನು ಬೇಕಿದ್ದರೆ ನಿಂತುಕೊಂಡೇ ನೋಡುತ್ತೇವೆ ಎಂದು ಸೌಜನ್ಯತೆ ತೋರಿದಾಗಲೂ ಅದರ ಬಗ್ಗೆ ಯಾರೂ ಒಂದು ಪೋಸ್ಟ್ ಹಾಕಲಿಲ್ಲ. ಈಗ ಮಾತಿನ ಭರದಲ್ಲಿ ಪುನೀತ್ ಅವರಿಗೆ ನಿಧನದ ನಂತರ ದೊಡ್ಡ ಗೌರವ ಸಿಕ್ಕಿತು. ಆದರೆ, ನನಗದು ಬದುಕಿದ್ದಾಗಲೇ ಸಿಕ್ಕಿದೆ. ಇಷ್ಟೇ ಸಾಕು ಎಂದು ಒಳ್ಳೆಯ ರೀತಿಯಲ್ಲೇ ಹೇಳಿದ ಮಾತನ್ನು ತಿರುಚಿ ಡಿ ಬಾಸ್, ಪುನೀತ್ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಅವರು ಅತ್ಯಂತ ಕೆಟ್ಟವರು ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ವೈಯಕ್ತಿಕ ಜೀವನವನ್ನು ಕೆದಕುತ್ತ ಅವರ ವಿರುದ್ಧ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ಪೋಸ್ಟ್ ಹಾಕುತ್ತಿದ್ದೀರಲ್ಲ ನಿಮಗೆ ದೇವರು ಒಳ್ಳೆಯದು ಮಾಡಲಿ. ಒಳ್ಳೆಯತನಕ್ಕೆ ಬೆಲೆ ಇಲ್ಲ ಅಂತ ಜನ ಸುಮ್ಮನೆ ಹೇಳ್ತಾರಾ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಪುನೀತ್‌, ದರ್ಶನ್‌ ಒಡನಾಟದ ಬಗ್ಗೆ ವಿನೋದ್‌ ಪ್ರಭಾಕರ್‌ ಮಾತು

ದರ್ಶನ್‌ ಆಪ್ತ, ನಟ ವಿನೋದ್‌ ಪ್ರಭಾಕರ್‌, "ಕಳೆದ ಎರಡು ದಿನಗಳಿಂದ ದರ್ಶನ್‌ ಮತ್ತು ಪುನೀತ್‌ ಅವರ ಅಭಿಮಾನಿಗಳ ನಡುವೆ ನಡೆಯುತ್ತಿರುವ ʼಫ್ಯಾನ್‌ ವಾರ್‌ʼ ಗಮನಿಸುತ್ತಿದ್ದೇನೆ. ಆದರೆ, ದರ್ಶನ್‌ ಪುನೀತ್‌ ರಾಜ್‌ಕುಮಾರ್‌ ಮೇಲಿಟ್ಟಿರುವ ಪ್ರೀತಿ ಮತ್ತು ಗೌರವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪುನೀತ್‌ ಅವರ ಜೊತೆಗಿನ ಒಡನಾಟ ನೆನೆಸಿಕೊಂಡು ದರ್ಶನ್‌ ನಮ್ಮೆದುರಿಗೆ ಕಣ್ಣೀರಿಟ್ಟಿದ್ದಾರೆ. ಪುನೀತ್‌ ಅವರ ಅಂತಿಮ ದರ್ಶನ ಪಡೆದು ಹಿಂತಿರುಗಿದ ದಿನ ನಾನು ಕೂಡ ದರ್ಶನ್‌ ಅವರ ಜೊತೆಯಲ್ಲೇ ಇದ್ದೆ. ಆವತ್ತು ಅವರು 5 ರಿಂದ 6 ಗಂಟೆಗಳ ಕಾಲ ಕಣ್ಣೀರಿಡುತ್ತಲೇ ಇದ್ದರು. ಅದಾದ ಬಳಿಕ ಪುನೀತ ನಮನ ಕಾರ್ಯಕ್ರಮದಲ್ಲಿ ಕೂರಲು ಕುರ್ಚಿ ಇಲ್ಲದಿದ್ದರೂ ಪುನೀತ್‌ ಅವರ ಮೇಲಿನ ಗೌರವಕ್ಕಾಗಿ ನಾನು ಆ ಕಾರ್ಯಕ್ರಮವನ್ನು ನಿಂತುಕೊಂಡೆ ನೋಡುತ್ತೇನೆ ಒಳ ಹೋಗಲು ಅನುಮತಿ ಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡು ಕಾರ್ಯಕ್ರಮವನ್ನು ನಿಂತುಕೊಂಡು ನೋಡಿದರು. ಅಷ್ಟೇ ಅಲ್ಲ, ಆ ಕಾರ್ಯಕ್ರಮದಿಂದ ಹಿಂತಿರುಗಿ ಬರುವಾಗ ದರ್ಶನ್‌ ಅವರ ಜೊತೆಗೆ ಕಾರಿನಲ್ಲಿ ನಾನು ಕೂಡ ಇದ್ದೆ. ದಾರಿಯುದ್ದಕ್ಕೂ ಪುನೀತ್‌ ಅವರನ್ನು ನೆನೆದು ಅವರು ಎಷ್ಟು ಕಣ್ಣೀರಿಟ್ಟು ನೋವು ಪಟ್ಟರು ಎಂಬುದು ನನಗೆ ಗೊತ್ತು. ನಮ್ಮಲ್ಲಿ ಸ್ಟಾರ್‌ ವಾರ್‌ ಎಂಬುದಿಲ್ಲ. ದರ್ಶನ್‌ ಅವರ ಹೆಸರಲ್ಲಿ ಈ ರೀತಿಯ ಅಪಪ್ರಚಾರ ಬೇಡ. ಕನ್ನಡ ಚಿತ್ರರಂಗದಲ್ಲಿರುವ ನಾವೆಲ್ಲರೂ ಒಂದೇ" ಎಂದು ವಿಡಿಯೋ ಮೂಲಕ ಇಬ್ಬರೂ ನಟರ ಅಭಿಮಾನಿಗಳ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್