ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಅಪ್ಪು ಕನಸಿನ ʻಗಂಧದಗುಡಿʼ

gandhadagudi
  • ಟೀಸರ್‌ ಮೂಲಕ ಕುತೂಹಲ ಕೆರಳಿಸಿದ್ದ ʼಗಂಧದಗುಡಿʼ
  • ಪುನೀತ್‌ ಸಾವನ್ನಪ್ಪಿ ವರ್ಷ ತುಂಬುವ ಹೊತ್ತಿಗೆ ಚಿತ್ರ ತೆರೆಗೆ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕನಸಿನ ಸಾಕ್ಷ್ಯಚಿತ್ರ ʼಗಂಧದಗುಡಿʼ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಅಪ್ಪು ಕೊನೆಯದಾಗಿ ʼಜೇಮ್ಸ್‌ʼ, ʼಲಕ್ಕಿಮ್ಯಾನ್‌ʼ ಮತ್ತು ʼಗಂಧದಗುಡಿʼ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಪೈಕಿ ಮಾರ್ಚ್‌ನಲ್ಲಿ ತೆರೆಕಂಡಿದ್ದ ʼಜೇಮ್ಸ್‌ʼ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಪುನೀತ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ʼಲಕ್ಕಿಮ್ಯಾನ್‌ʼ ಸಿನಿಮಾ ಕೂಡ ಆಗಸ್ಟ್‌ನಲ್ಲಿ ತೆರೆ ಕಾಣಲಿದೆ. ʼಲಕ್ಕಿಮ್ಯಾನ್‌ʼ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಒಡೆತನದ ʼಪಿಆರ್‌ಕೆ ಪ್ರೊಡಕ್ಷನ್ಸ್‌ʼ, ʼಗಂಧದಗುಡಿʼ ಸಾಕ್ಷ್ಯಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ʼಗಂಧದಗುಡಿʼ ಚಿತ್ರದ ಪೋಸ್ಟರ್‌ ಹಂಚಿಕೊಂಡಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, "ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ ಎಂದು ಬರೆದುಕೊಂಡಿದ್ದು, ಅಕ್ಟೋಬರ್‌ 28ಕ್ಕೆ ಸಾಕ್ಷ್ಯಚಿತ್ರ ತೆರೆಕಾಣಲಿದೆ" ಎಂದು ಮಾಹಿತಿ ನೀಡಿದ್ದಾರೆ.   

 

ಈ ಸುದ್ದಿ ಓದಿದ್ದೀರಾ? ಜುಲೈ 16- 17ರಂದು ಮೈಸೂರಿನಲ್ಲಿ ‘ಡೆಸ್ಡೆಮೋನಾ ರೂಪಕಮ್‌’ ನಾಟಕ ಪ್ರದರ್ಶನ

ʼವೈಲ್ಡ್‌ ಕರ್ನಾಟಕʼ ಸಿನಿಮಾದ ಮೂಲಕ ಕರುನಾಡಿನ ಪ್ರಕೃತಿ ಸೊಬಗನ್ನು ಜಾಗತಿಕ ಸಮುದಾಯಕ್ಕೆ ಪರಿಚಯಿಸಿದ್ದ ನಿರ್ದೇಶಕ ಅಮೋಘವರ್ಷ, ʼಗಂಧದಗುಡಿʼ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಕರ್ನಾಟಕದ ದಟ್ಟಾರಣ್ಯಗಳು, ಕಡಲ ತೀರಗಳು, ಜಲಪಾತಗಳು ಹೀಗೆ ಹಲವು ಪ್ರದೇಶಗಳನ್ನು ಸುತ್ತಿದ ಪುನೀತ್‌ ಅವರ ವಿಶೇಷ ಅನುಭವದ ಸುತ್ತ ʼಗಂಧದಗುಡಿʼ ಸಾಕ್ಷ್ಯಚಿತ್ರ ಸಾಗುತ್ತದೆ. 2021ರ ಡಿಸೆಂಬರ್‌ನಲ್ಲಿ ತೆರೆಕಂಡ ಈ ಸಾಕ್ಷ್ಯಚಿತ್ರದ ಟೀಸರ್‌ ಪುನೀತ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿತ್ತು. ʼಗಂಧದಗುಡಿʼಯಲ್ಲಿ ಪುನೀತ್‌ ಜೊತೆಗೆ ನಿರ್ದೇಶಕ ಅಮೋಘವರ್ಷ ಕೂಡ ಕಾಣಿಸಿಕೊಂಡಿದ್ದಾರೆ. ʼಪಿಆರ್‌ಕೆ ಪ್ರೊಡಕ್ಷನ್ಸ್‌ʼ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

2021ರ ಅಕ್ಟೋಬರ್‌ 29ರಂದು ಪುನೀತ್‌ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ಸಾವನ್ನಪ್ಪಿ ಸರಿಯಾಗಿ ಒಂದು ವರ್ಷ ತುಂಬುವ ಹೊತ್ತಿಗೆ ʼಗಂಧದಗುಡಿʼ ಸಿನಿಮಾ ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್