ತೆರೆಗೆ ಸಜ್ಜಾದ ಅಪ್ಪು ಕೊನೆಯ ಚಿತ್ರ ʻಲಕ್ಕಿಮ್ಯಾನ್‌ʼ

luckyman
  • ದೇವರ ಪಾತ್ರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಅಪ್ಪು
  • ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ ಲಕ್ಕಿಮ್ಯಾನ್‌ ಸಿನಿಮಾ

ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿ 8 ತಿಂಗಳು ಕಳೆ‌ದು ಹೋಗಿವೆ. ಆದರೆ, ತಮ್ಮ ಸಿನಿಮಾಗಳು ಮತ್ತು ಸಮಾಜ ಸೇವೆಯ ಮೂಲಕ ಅಪ್ಪು ಎಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ಅಪ್ಪು ಮುಖ್ಯಭೂಮಿಕೆಯ ಜೇಮ್ಸ್‌ ಚಿತ್ರವೇ ಅವರ ನಟನೆಯ ಕೊನೆಯ ಚಿತ್ರ ಎನ್ನಲಾಗಿತ್ತು. ಆದರೆ, ಜೇಮ್ಸ್‌ ನಂತರ ಅಪ್ಪು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮತ್ತೊಂದು ಚಿತ್ರ ಇದೀಗ ತೆರೆಗೆ ಸಜ್ಜಾಗಿದೆ.

ನಟ ಡಾರ್ಲಿಂಗ್‌ ಕೃಷ್ಣ ಅಭಿನಯದ ʼಲಕ್ಕಿ ಮ್ಯಾನ್‌ʼ ಸಿನಿಮಾದಲ್ಲಿ ಅಪ್ಪು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಈ ಚಿತ್ರ ತೆರೆಗೆ ಸಜ್ಜಾಗಿದೆ. ಚಿತ್ರದಲ್ಲಿ ಅಪ್ಪು ಅವರದ್ದು ದೇವರ ಪಾತ್ರ. ಲಕ್ಕಿ ಮ್ಯಾನ್‌ ಮತ್ತೊಂದು ವಿಶೇಷ ಎಂದರೆ ಚಿತ್ರದ ವಿಶೇಷ ಹಾಡೊಂದರಲ್ಲಿ ಪ್ರಭುದೇವ ಅವರ ಜೊತೆಗೆ ಅಪ್ಪು ಹೆಜ್ಜೆ ಹಾಕಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ವಿಶೇಷ ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲೇ ಸೆಟ್‌ ಹಾಕಲಾಗಿತ್ತು.

ಜೇಮ್ಸ್‌ ಸಿನಿಮಾ ಡಬ್ಬಿಂಗ್‌ ಹಂತದಲ್ಲಿದ್ದಾಗಲೇ ಅಪ್ಪು ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ಅಪ್ಪು ಪಾತ್ರಕ್ಕೆ ಅವರ ಸಹೋದರ,  ಹಿರಿಯ ನಟ ಶಿವರಾಜ್‌ಕುಮಾರ್‌ ಧ್ವನಿ ನೀಡಿದ್ದರು. ಮೊದಲಿಗೆ ಶಿವಣ್ಣನ ಧ್ವನಿಯಲ್ಲಿಯೇ ಜೇಮ್ಸ್‌ ಬಿಡುಗಡೆಯಾಗಿತ್ತು. ಚಿತ್ರತಂಡದ ಸತತ ಪ್ರಯತ್ನದಿಂದ ಅಪ್ಪು ಅವರ ಧ್ವನಿಯನ್ನು ಮರು ಸೃಷ್ಟಿ ಮಾಡಲಾಗಿತ್ತು. ಆದರೆ, ಲಕ್ಕಿ ಮ್ಯಾನ್‌ ಸಿನಿಮಾದಲ್ಲಿ ಈ ರೀತಿಯ ಯಾವುದೇ ಸಮಸ್ಯೆ ಉಂಟಾಗಿಲ್ಲ. ತಮ್ಮ ಪಾತ್ರಕ್ಕೆ ಅಪ್ಪು ಅವರೇ ಡಬ್ಬಿಂಗ್‌ ಮಾಡಿದ್ದರು ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ʻಶಬಾಷ್‌ ಮಿಥುʼ ತೆರೆಗೆ ಸಿದ್ಧ | ಹಳ್ಳಿಯ ಸಾಧಾರಣ ಹಡುಗಿ ಕ್ರಿಕೆಟ್‌ ತಾರೆಯಾದ ರೋಚಕ ಕತೆ

ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್‌ ಲಕ್ಕಿ ಮ್ಯಾನ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ತಮಿಳಿನ ʼಓ ಮೈ ಕಡುವುಲೆʼ ಚಿತ್ರವನ್ನು ಸ್ಫೂರ್ತಿಯಾಗಿರಿಸಿಕೊಂಡು ಚಿತ್ರ ಸಿದ್ಧವಾಗಿದೆ. ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಕ್ತಾಯಗೊಂಡಿದ್ದು, ಸೆನ್ಸಾರ್‌ಗೆ ಸಿದ್ಧವಾಗಿದೆ. ಆಗಸ್ಟ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. 

ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಪಿ.ಆರ್‌ ಮೀನಾಕ್ಷಿ ಸುಂದರಂ ಮತ್ತು ಆರ್‌. ಸುದರ್‌ ಕಾಮರಾಜ್‌ ಲಕ್ಕಿಮ್ಯಾನ್‌ಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ರೋಷನಿ ಪ್ರಕಾಶ್‌ ಜೋಡಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
9 ವೋಟ್