ಅಪ್ಪು ಸಮಾಧಿ ಅಭಿವೃದ್ಧಿಗೆ ರಾಜ್‌ ಕುಟುಂಬಸ್ಥರ ಮನವಿ

rajfamily
  • ಪುನೀತ್‌ ರಾಜ್‌ಕುಮಾರ್‌ ಸಮಾಧಿ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿದ ಕುಟುಂಬಸ್ಥರು
  • ರಾಜ್‌ ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ

ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿ ಒಂದು ವರ್ಷ ಕಳೆಯುತ್ತ ಬಂದಿದೆ. ಆದರೆ, ಪುನೀತ್‌ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹೀಗೆ ಪ್ರತಿದಿನವೂ ಸಾವಿರಾರು ಅಭಿಮಾನಿಗಳು ಭೇಟಿ ನೀಡುವ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಲು ರಾಜ್‌ ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ. ಇದಕ್ಕೆ ಸರ್ಕಾರದ ನೆರವನ್ನೂ ಕೋರಿದ್ದಾರೆ.

ಸಮಾಧಿ ಸ್ಥಳದ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ, ಹಿರಿಯ ಸಹೋದರ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಅವರ ಪುತ್ರ ಯುವರಾಜ್‌ಕುಮಾರ್‌ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. 

Image
puneeth family

ಕಂಠೀರವ ಸ್ಟುಡಿಯೋದಲ್ಲಿ ಕೇವಲ ಪುನೀತ್‌ ರಾಜ್‌ಕುಮಾರ್‌ ಸಮಾಧಿ ಮಾತ್ರವಲ್ಲ. ಅವರ ತಂದೆ, ವರನಟ ಡಾ ರಾಜ್‌ಕುಮಾರ್‌ ಮತ್ತು ತಾಯಿ ಪಾರ್ವತಮ್ಮನವರ ಸಮಾಧಿಗಳು ಕೂಡ ಇವೆ. ಈ ಮೂವರ ಸಮಾಧಿಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ರಾಜ್‌ ಕುಟುಂಬಸ್ಥರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್‌ ಸಮಾಧಿ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಅವರ ಕುಟುಂಬಸ್ಥರೇ ನೀಲನಕ್ಷೆಯನ್ನು ಕೂಡ ಸಿದ್ಧಪಡಿಸಿದ್ದು, ಆ ನೀಲನಕ್ಷೆಯನ್ನು ಮುಖ್ಯಮಂತ್ರಿಗಳಿಗೂ ತೋರಿಸಿದ್ದಾರೆ. ಅದರಂತೆ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು ಎಂದು ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ಸೈಮಾ ಪ್ರಶಸ್ತಿ 2022 | ಅತಿ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡ 'ರಾಬರ್ಟ್‌, ಯುವರತ್ನ'

ರಾಜ್‌ ಕುಟುಂಬಸ್ಥರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಮಾಧಿ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯವಿರುವ ಅಂದಾಜು ಮೊತ್ತವನ್ನು ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಜ್‌ ಕುಟುಂಬಸ್ಥರ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಇಲಾಖೆಯ ಅಧಿಕಾರಿಗಳು ಸಮಾಧಿ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸಿದ ಬಳಿಕ ರಾಜ್‌ ಕುಟುಂಬಸ್ಥರ ಜೊತೆಗೆ ಮತ್ತೊಂದು ಹಂತದ ಸಭೆ ನಡೆಸುವುದಾಗಿ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್