ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ; ವರ್ಷದ ಬಳಿಕ ಮೌನ ಮುರಿದ ರಾಜ್‌ ಕುಂದ್ರಾ

raj kundra
  • ವರ್ಷದ ಬಳಿಕ ರಾಜ್‌ ಕುಂದ್ರಾ ಮೊದಲ ಪ್ರತಿಕ್ರಿಯೆ 
  • ಟ್ರೋಲ್‌ ಪಡೆಗೆ ಧನ್ಯವಾದ ತಿಳಿಸಿದ ಶಿಲ್ಪಾ ಶೆಟ್ಟಿ ಪತಿ

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಿಸಿಕೊಂಡಿರುವ ಉದ್ಯಮಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್‌ ಕುಂದ್ರಾ ಕೊನೆಗೂ ಮೌನ ಮುರಿದಿದ್ದಾರೆ. ವರ್ಷದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟರ್‌ನಲ್ಲಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 

ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಅಂತರ್ಜಾಲದಲ್ಲಿ ಹಂಚಿದ ಆರೋಪದ ಮೇಲೆ ಜುಲೈ 19ರಂದು ರಾಜ್‌ ಕುಂದ್ರಾ ಅವರನ್ನು ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದರು. ಬರೋಬ್ಬರಿ ಎರಡು ತಿಂಗಳ ಕಾಲ ಆರ್ಥರ್‌ ರಸ್ತೆಯ ಜೈಲಿನಲ್ಲಿ ದಿನ ಕಳೆದಿದ್ದ ರಾಜ್‌ ಕೊನೆಗೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದ ಬಳಿಕ ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿದ್ದ ರಾಜ್‌, ಮುಖಕ್ಕೆ ಮಾಸ್ಕ್‌ ಧರಿಸಿಯೇ ಓಡಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್‌ ಮಾಡಲಾಗಿತ್ತು. ಇಂದಿಗೂ ರಾಜ್‌ ಕುಂದ್ರಾ ಕ್ಯಾಮೆರಾ ಕಣ್ಣಿಗೆ ಮಾಸ್ಕ್‌ ಧರಿಸಿದ ಸ್ಥಿತಿಯಲ್ಲಿ ಕಂಡರೆ ಟ್ರೋಲ್‌ ಪಡೆಗಳು ಮುಗಿ ಬೀಳುತ್ತಲೇ ಇರುತ್ತವೆ. 

ಸೆಪ್ಟೆಂಬರ್‌ 21ಕ್ಕೆ ರಾಜ್‌ ಕುಂದ್ರಾ ಜಾಮೀನಿನ ಮೇಲೆ ಹೊರಬಂದು ಒಂದು ವರ್ಷ ತುಂಬಿದೆ. ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದ ರಾಜ್‌ ಕುಂದ್ರಾ ಜೈಲಿನಿಂದ ಬಿಡುಗಡೆಯಾದ ಒಂದು ವರ್ಷದ ಬಳಿಕ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.  

ತಾವು ಮಾಸ್ಕ್‌ ಧರಿಸಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿರುವ ಅವರು, "ಒಂದು ವರ್ಷದ ಹಿಂದೆ ಸರಿಯಾಗಿ ಇದೇ ದಿನ ನಾನು ಆರ್ಥರ್‌ ರಸ್ತೆಯ ಜೈಲಿನಿಂದ ಬಿಡುಗಡೆಯಾಗಿದ್ದೆ. ತಡವಾದರೂ ನ್ಯಾಯ ಸಿಕ್ಕೇ ಸಿಗುತ್ತದೆ. ಸದ್ಯದಲ್ಲೇ ಸತ್ಯ ಏನೆಂಬುದು ಎಲ್ಲರಿಗೂ ತಿಳಿಯುತ್ತದೆ. ಹಿತೈಷಿಗಳಿಗೆ ಮತ್ತು ನನ್ನನ್ನು ಗಟ್ಟಿಗೊಳಿಸಿದ ಟ್ರೋಲ್‌ ಪಡೆಗೆ ಧನ್ಯವಾದ. ನಿಮಗೆ ಪೂರ್ತಿ ವಿಚಾರ ಗೊತ್ತಿಲ್ಲ ಎಂದ ಮೇಲೆ ಬಾಯಿ ಮುಚ್ಚಿಕೊಂಡಿರಿ" ಎಂದು ತಮ್ಮ ಬಗ್ಗೆ ಅಂತೆ ಕಂತೆಯ ಮಾತುಗಳನ್ನಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್