ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ' ಚಿತ್ರ ಬೆಂಬಲಿಸಿದ್ದಕ್ಕೆ ರಕ್ಷಿತ್‌ ಶೆಟ್ಟಿ ಮೇಲೆ ಕಮೆಂಟ್‌ಗಳ ದಾಳಿ

Gargi
  • ಪಲ್ಲವಿ ಅಭಿನಯದ 'ಗಾರ್ಗಿ' ಚಿತ್ರಕ್ಕೆ ಕರ್ನಾಟಕದ ವಿತರಕ ರಕ್ಷಿತ್‌ ಶೆಟ್ಟಿ
  • ಪಲ್ಲವಿ ಮೇಲಿನ ಸಿಟ್ಟಿಗೆ ಶೆಟ್ಟಿಗೆ ಫೇಸ್‌ಬುಕ್‌ನಲ್ಲಿ ಕಮೆಂಟ್‌ಗಳ ದಾಳಿ

ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ' ಚಿತ್ರದ ಶುಕ್ರವಾರ ತೆರೆ ಕಂಡಿದ್ದು, ಕನ್ನಡದಲ್ಲೂ ತೆರೆ ಕಂಡಿದೆ. ಕನ್ನಡದಲ್ಲಿ ಪರಮಂವ ಸ್ಟುಡಿಯೋ ಮೂಲಕ ರಕ್ಷಿತ್‌ ಶೆಟ್ಟಿ ವಿತರಣೆ ಮಾಡಿದ್ದಾರೆ. ಈ ಕಾರಣಕ್ಕೆ ಈಗ ಫೇಸ್‌ಬುಕ್‌ನಲ್ಲಿ ಸಾಯಿ ಪಲ್ಲವಿ ವಿರೋಧಿಗಳ ಕಮೆಂಟ್‌ಗಳ ದಾಳಿ ಎದುರಿಸುತ್ತಿದ್ದಾರೆ.

'ಗಾರ್ಗಿ' ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಹಂಚಿಕೊಂಡಿದ್ದ ಪೋಸ್ಟ್‌ಗೆ ಭಜರಂಗದಳ ಹೆಸರು ಸೇರಿದಂತೆ ವ್ಯಕ್ತಿಗತವಾಗಿಯೂ ಹತ್ತಾರು ಮಂದಿ ರಕ್ಷಿತ್ ಶೆಟ್ಟಿಯನ್ನು ಅವಾಚ್ಯವಾಗಿ ನಿಂದಿಸಿ, ಟೀಕಿಸಿ, ಕಮೆಂಟ್‌ ಮಾಡಿದ್ದಾರೆ.

"ನಿನಗೆ ದುಡ್ಡು ಮುಖ್ಯ ನಮಗೆ ದೇಶ ಮುಖ್ಯ. ಯಾವುದೋ ಒಂದು ನಾಯಿ ಬಂದು ನೋಡು ಎಂದರೆ ನಾವು ನೋಡಬೇಕೆ? ಭಜರಂಗದಳ ಯಾವುದಕ್ಕೂ ಕೇರ್ ಮಾಡುವುದಿಲ್ಲ" ಸುರೇಶ್ ಗೌಡ ಹೆಸರಿನ ವ್ಯಕ್ತಿ ಕಮೆಂಟಿಸಿದ್ದಾರೆ.

ಹೇಮಂತ್‌ ಕುಮಾರ್‌ ಎಂಬುವವರು, "ನಿಮಗೆ ಯಾಕ್ ಬೇಕಿತ್ತು ಈ ಹಿಂದುಸ್ತಾನ್ ವಿರೋಧಿ? ನಮ್ಮ ಊರಿನಲ್ಲಿ ಬಿಡುಗಡೆ ಕೂಡ ಆಗಿಲ್ಲ. ಆಗಿದ್ದರೂ ಜನ ಬರುತ್ತ ಇರಲಿಲ್ಲ " ಎಂದು ಟೀಕಿಸಿದ್ದಾರೆ.

"ಶೆಟ್ಟಿ, ಥೂ ನಿಮ್ಮಂತರೆಲ್ಲ ಹಿಂದೂ ಧರ್ಮದಲ್ಲಿ ಹುಟ್ಟಬಾರದು. ದೇಶ ಅಭಿಮಾನ ಧರ್ಮ ಅಭಿಮಾನ ಇರಲಿ. ಬೆಳೆಸಿಕೊಳ್ಳಿ" ಎಂದು ಚಂದ್ರಶೇಖರ್‌ ಎಂಬುವರು ಕಮೆಂಟ್‌ ಮಾಡಿದ್ದಾರೆ.

ತುಳುವಿನಲ್ಲಿ ಅನೇಕರು ಟೀಕಿಸಿ ಕಮೆಂಟ್‌ ಮಾಡಿದ್ದು, ಇನ್ನೂ ಹಲವರು ಪ್ರಕಟಿಸಲಾಗದಷ್ಟು ಅವಾಚ್ಯವಾಗಿ ಬೈದಿದ್ದಾರೆ. ಸಾಯಿ ಪಲ್ಲವಿಯನ್ನು ದೇಶ ದ್ರೋಹಿ ಎಂದು ಕರೆದಿದ್ದು, "ಅವರ ಚಿತ್ರವನ್ನು ನೋಡುವುದಿಲ್ಲ. ಅವರನ್ನು ಸಮರ್ಥಿಸಿದ ನೀವು ಯಾಕ್‌ ಹೀಗಾದ್ರಿ?" ಎಂದೂ ಪ್ರತಿಕ್ರಿಯಿಸಿದ್ದಾರೆ.

ಪಲ್ಲವಿ ಹಿಂದೂ ವಿರೋಧಿ ಎಂಬ ಟೀಕೆ

ಸಾಯಿ ಪಲ್ಲವಿ ಅವರು 'ವಿರಾಟ್‌ ಪರ್ವಂ' ಚಿತ್ರ ಬಿಡುಗಡೆ ಸಂದರ್ಭದಲ್ಲಿ, "ಧರ್ಮದ ಹೆಸರಿನಲ್ಲಿ ನಡೆಯುವ ಯಾವುದೇ ಹತ್ಯೆಯೂ ಹತ್ಯೆಯೇ" ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. "ಕಾಶ್ಮೀರದಲ್ಲಿ ಪಂಡಿತರದ್ದು ಹತ್ಯೆಯಾದರೆ, ಗೋವಿನ ಹೆಸರಿನಲ್ಲಿ ಮುಸ್ಲಿಮರನ್ನು ಕೊಲ್ಲುವುದು ತಪ್ಪು" ಎಂದಿದ್ದರು. ಇದು ಬಲಪಂಥೀಯ ಸಂಘಟನೆಗಳ ಕೋಪಕ್ಕೆ ಕಾರಣವಾಗಿತ್ತು. ಆಗಲೇ ಚಿತ್ರವನ್ನು ನಿಷೇಧಿಸಬೇಕು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸಲಾಗಿತ್ತು.

ಈ ಎಲ್ಲ ವಿವಾದ ಆಚೆಗೂ 'ಚಾರ್ಲಿ 777' ಯಶಸ್ಸಿನ ಗುಂಗಿನಲ್ಲಿದ್ದ ರಕ್ಷಿತ್‌ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕವೇ 'ಗಾರ್ಗಿ' ಕನ್ನಡ ಅವತರಣಿಕೆಯ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದರು.

ಇದಕ್ಕೆ ಕಾರಣ ಚಿತ್ರದ ನಿರ್ದೇಶಕ ಗೌತಮ್‌ ರಾಮಚಂದ್ರನ್‌. ರಕ್ಷಿತ್‌ ಶೆಟ್ಟಿ ಅವರಿಗೆ ಬ್ರೇಕ್‌ ಕೊಟ್ಟ, 'ಉಳಿದವರು ಕಂಡಂತೆ' ಚಿತ್ರವನ್ನು ರಿಚ್ಚಿ ಹೆಸರಿನಲ್ಲಿ ತಮಿಳಿಗೆ ಒಯ್ದಿದ್ದು ಇದೇ ಗೌತಮ್‌. ಈ ಸ್ನೇಹದ ಕಾರಣಕ್ಕೆ ಚಿತ್ರವನ್ನು ಕನ್ನಡದಲ್ಲಿ ವಿತರಿಸುವುದಕ್ಕೆ ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿದ್ದರು.

ಕಳೆದ ವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಗೌತಮ್ ನಮ್ಮ ಬೆಂಗಳೂರಿನವರೇ ಹಾಗೂ ಸ್ವತಃ ಸಾಯಿ ಪಲ್ಲವಿ ಕನ್ನಡಕ್ಕೆ ತಮ್ಮ ಧ್ವನಿ ನೀಡಿರುವುದು ಇನ್ನೊಂದು ಹೆಮ್ಮೆಯ, ಖುಷಿಯ ವಿಚಾರ. ನಮ್ಮ ಚಿತ್ರಗಳನ್ನು ನಾವು ಬೇರೆ ಭಾಷೆ, ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿರುವಾಗ, ಬೇರೆ ಭಾಷೆಯ ಒಳ್ಳೆಯ ಚಿತ್ರಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ" ಎಂದು ಹೇಳಿದ್ದರು.

ಆದರೆ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು, ಸಾಯಿ ಪಲ್ಲವಿ ಅವರ ಮೇಲಿನ ಕೋಪವನ್ನು ಈಗ ರಕ್ಷಿತ್‌ ಅವರ ಮೇಲೂ ಹೊರಹಾಕುತ್ತಿದ್ದು, ಚಿತ್ರವನ್ನು ನಿಷೇಧಿಸಲು ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್