ಈ ಸಿನಿಮಾ | ಬಹುದಿನಗಳ ನಿರೀಕ್ಷೆಯನ್ನು ಒಂದೇ ಏಟಿಗೆ ಹುಸಿಗೊಳಿಸಿದ ಬ್ರಹ್ಮಾಸ್ತ್ರ

ಹಿಂದಿ ಸಿನಿಮಾಗಳಲ್ಲಿ ಬಳಸಿ ಸವಕಲಾಗಿರುವ ಸನ್ನಿವೇಶ ಮತ್ತು ಸಂಭಾಷಣೆಗಳು ʻಬ್ರಹ್ಮಾಸ್ತ್ರʼದಂತಹ ದೊಡ್ಡ ʻಕ್ಯಾನ್ವಸ್‌' ಚಿತ್ರದಲ್ಲೂ ಬಂದು ಹೋದದ್ದನ್ನು ನೋಡಿ ಇದು ಬಾಲಿವುಡ್‌ನ ದುರ್ಗತಿ ಎನ್ನಿಸಿತು.
brahmastra

ಚಿತ್ರ: ಬ್ರಹ್ಮಾಸ್ತ್ರ | ನಿರ್ದೇಶನ: ಆಯಾನ್‌ ಮುಖರ್ಜಿ | ತಾರಾಗಣ: ರಣಬೀರ್‌ ಕಪೂರ್‌, ಆಲಿಯಾ ಭಟ್‌, ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಅಕ್ಕಿನೆನಿ ನಾಗರ್ಜುನ, ಮೌನಿ ರಾಯ್‌, ಡಿಂಪಲ್‌ ಕಪಾಡಿಯ | ಭಾಷೆ: ಹಿಂದಿ | ಸಂಗೀತ ನಿರ್ದೇಶನ : ಪ್ರೀತಮ್‌ ಚಕ್ರವರ್ತಿ | ನಿರ್ಮಾಪಕ : ಕರಣ್‌ ಜೋಹರ್‌, ರಣಬೀರ್‌ ಕಪೂರ್‌ |

'ವೇಕ್‌ ಅಪ್‌ ಸಿದ್‌', 'ಯೆಹ್‌ ಜವಾನಿ ಹೈ ದಿವಾನಿ'ಯಂತಹ ಕ್ಲಾಸಿಕಲ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಆಯಾನ್‌ ಮುಖರ್ಜಿ, ಈ ಬಾರಿ 'ಬ್ರಹ್ಮಾಸ್ತ್ರ' ಸಿನಿಮಾ ತೆರೆಗೆ ಬಿಟ್ಟಿದ್ದಾರೆ. ಬಹುಕೋಟಿ ವೆಚ್ಚದ, ಫ್ಯಾಂಟಸಿ ಸಿನಿಮಾ ಎಂಬ ಕಾರಣಕ್ಕೆ ʼಬ್ರಹ್ಮಾಸ್ತ್ರʼ ಸಿನಿ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಈ ಸಿನಿಮಾ ಬಿಡುಗಡೆಗೂ ಮುಂಚೆ ಸೃಷ್ಟಿಸಿದ್ದ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಬಾಲಿವುಡ್‌ ಮಂದಿ ಮತ್ತೊಂದು 'ಫ್ಲಾಪ್‌' ಸಿನಿಮಾಗೆ ಸಾಕ್ಷಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆ ಎನ್ನಿಸದು.  

Eedina App

'ಬ್ರಹ್ಮಾಸ್ತ್ರ', ಭೂಮಂಡಲವನ್ನು ವಿನಾಶದಿಂದ ರಕ್ಷಿಸುವ ಫ್ಯಾಂಟಸಿ ಕಥನ. ಚಿತ್ರದಲ್ಲಿ ರಣಬೀರ್‌ ʼಶಿವʼ ಎನ್ನುವ ʼಡಿಜೆʼ ನಿರ್ವಾಹಕನ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಫ್ಯಾಂಟಸಿ ಕತೆಯಲ್ಲಿ ಜನಸಾಮಾನ್ಯರ ತರ್ಕಕ್ಕೆ ನಿಲುಕದೆ ಅಸ್ತಿತ್ವದಲ್ಲಿರುವ ರಹಸ್ಯ ಶಕ್ತಿಕೂಟವೊಂದು ಸೃಷ್ಟಿಯನ್ನು ಕಾಯುತ್ತಿದೆ. ಈ ರಹಸ್ಯ ಶಕ್ತಿಕೂಟಕ್ಕೆ ವೈರಿಗಳೂ ಇದ್ದಾರೆ. ವೈರಿ ಸಮೂಹ ʼಬ್ರಹ್ಮಾಸ್ತ್ರʼವನ್ನು ವಶಪಡಿಸಿಕೊಂಡು ಆ ಮೂಲಕ ಇಡೀ ಭೂಮಂಡಲದ ಮೇಲೆ ತನ್ನ ಅಧಿಪತ್ಯ ಸಾಧಿಸಿ, ಸೃಷ್ಟಿಯನ್ನು ಸರ್ವನಾಶ ಮಾಡುವ ಯತ್ನದಲ್ಲಿದೆ. ಗುರುತು ಮರೆಮಾಚಿಕೊಂಡು ಸಾಮಾನ್ಯರ ನಡುವೆ ತೀರಾ ಸಾಮಾನ್ಯರಂತೆ ಬದುಕು ಸಾಗಿಸುತ್ತಿರುವ ʼಬ್ರಹಾಂನ್ಶುʼ ಶಕ್ತಿಕೂಟದ ಸದಸ್ಯರು, ಈ ದುಷ್ಟಕೂಟವನ್ನು ಮಟ್ಟಹಾಕಿ ಅವರ ಕೈಯಿಂದ ಭೂಮಂಡಲವನ್ನು ರಕ್ಷಿಸುತ್ತಾರೆಯೇ ಎಂಬುದು ಚಿತ್ರದ ಕಥೆ.

ಆಯಾನ್‌ ಮುಖರ್ಜಿ ನಾಲ್ಕೈದು ವರ್ಷಗಳ ಕಾಲ ಶ್ರಮವಹಿಸಿ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮಾಡಿದ್ದಾರೆ. ಅವರ ಪ್ರಯತ್ನವನ್ನು ಮೆಚ್ಚಿಕೊಳ್ಳೋಣ. ಆದರೆ, ಇಂತಹ ಅವಕಾಶಗಳ ಸದುಪಯೋಗದಲ್ಲಿ ಅವರು ಹಿನ್ನಡೆ ಅನುಭವಿಸಿದ್ದನ್ನು ಒತ್ತಿ ಹೇಳುವ ಅಗತ್ಯವಿದೆ. ʼಬ್ರಹ್ಮಾಸ್ತ್ರʼ ಮೊದಲಿಗೆ ಎಡವಿದ್ದು ಚಿತ್ರಕತೆ ಮತ್ತು ನಿರೂಪಣೆಯಲ್ಲಿ. ಕಥಾನಾಯಕ ಶಿವ ಮತ್ತು ಆತನ ಹಿನ್ನೆಲೆಯನ್ನು ಪರಿಚಯಿಸುವ ಚಿತ್ರಕಥೆಯ ಎಳೆ, ಬಾಲಿವುಡ್‌ನ ಸಿದ್ಧಮಂತ್ರದಿಂದ ಎರವಲು ಪಡೆದಿದ್ದು. ಸಿನಿಮಾಗೊಬ್ಬ ಅನಾಥ ಕಥಾನಾಯಕ, ಆತನ ಕಥೆಗೆ ತಕ್ಕನಾಗಿರುವ ಅನಾಥಾಶ್ರಮ. ಯಾವುದೇ ಹಿನ್ನೆಲೆ ಇರದ ಆತ ಒಂದಷ್ಟು ಮಕ್ಕಳ ಪಾಲನೆ, ಪೋಷನೆ ಮಾಡುತ್ತಿರುತ್ತಾನೆ. ಅವನ ಮಾತೃ ಹೃದಯ, ಕರುಳು ಹಿಂಡುವ ಕಥನಕ್ಕೆ ಮರುಗಿ ಹುಡುಗಿಯೊಬ್ಬಳು ಜೀವನಪೂರ್ತಿ ಆ ʼಸೂಪರ್‌ ಹೀರೋʼ ಜೊತೆಗೆ ಬದುಕಲು ನಿರ್ಧರಿಸಿ ಬಿಡುತ್ತಾಳೆ. ʼಬಿಗ್‌ ಕ್ಯಾನ್ವಸ್‌ʼ ಚಿತ್ರಕ್ಕೆ ʼಅದೇ ಹಾಡು, ಅದೇ ರಾಗ'ದ ಅಗತ್ಯ ನಿಜಕ್ಕೂ ಇತ್ತೆ?

AV Eye Hospital ad

ಸಿನಿಮಾ ಹಾಲ್‌ನಲ್ಲಿ ನನ್ನ ಹಿಂಬದಿಯ ಕುರ್ಚಿಯಲ್ಲಿ ಕೂತಿದ್ದ  ಹುಡುಗಿಯೊಬ್ಬಳು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಮುಂದೆ ಏನು ನಡೆಯುತ್ತದೆ. ಆ ಸನ್ನಿವೇಶದಲ್ಲಿ ನಾಯಕಿಯ ಮುಂದಿನ ಸಂಭಾಷಣೆ ಏನಾಗಿರಬಹುದು ಎಂಬುದನ್ನು ಕರಾರುವಕ್ಕಾಗಿ ಹೇಳುವಷ್ಟರ ಮಟ್ಟಿಗೆ ಹಿಂದಿ ಸಿನಿಮಾಗಳಲ್ಲಿ ಬಳಸಿ ಸವಕಲಾಗಿರುವ ಸನ್ನಿವೇಶ ಮತ್ತು ಸಂಭಾಷಣೆಗಳು ಬಂದು ಹೋದದ್ದನ್ನು ನೋಡಿ ಇದು ಬಾಲಿವುಡ್‌ನ ದುರ್ಗತಿ ಎನ್ನಿಸಿತು. ಈ ಫ್ಯಾಂಟಸಿ ಸಿನಿಮಾದ ಕಥೆಯನ್ನು ಅರ್ಥ ಮಾಡಿಕೊಳ್ಳೋಕೆ ಪ್ರೇಕ್ಷಕರು ಸ್ವಲ್ಪ ಮಟ್ಟಿಗೆ ಹೆಣಗಾಡಬೇಕು. ಇಂಟರ್‌ವಲ್‌ ಬಳಿಕವೇ ಸಿನಿಮಾದ ಕಥೆ ನೋಡುಗನಿಗೆ ಅರ್ಥವಾಗೋದು. 

ಈ ಸಿನಿಮಾದಲ್ಲಿ ಮೆಚ್ಚಿಕೊಳ್ಳಬೇಕಾದ ಅಂಶ ಎಂದರೆ ʼವಿಎಫ್‌ಎಕ್ಸ್‌ʼ. 3ಡಿಯಲ್ಲಿ ಚಿತ್ರ ಹೆಚ್ಚೇನೂ ಆಪ್ತ ಅನುಭವ ನೀಡದಿದ್ದರೂ, ಬಹುಪಾಲು ವಿಎಫ್‌ಎಕ್ಸ್‌ ಬಳಸಿಕೊಂಡೇ ಸಿದ್ಧವಾಗಿರುವ ಈ ಸಿನಿಮಾ, ಇಂಟರ್‌ವಲ್‌ ಬಳಿಕ ಒಪ್ಪಿಗೆಯಾಗುವ ಮಟ್ಟಿಗೆ ಫ್ಯಾಂಟಸಿ ಅನುಭವ ನೀಡುತ್ತದೆ. ಛಾಯಾಗ್ರಹಣ ಕೂಡ ಚೊಕ್ಕವಾಗಿದೆ. ಚಿತ್ರದ ಶೂಟಿಂಗ್‌ಗೆ ಆಯ್ದುಕೊಳ್ಳದ ಸ್ಥಳಗಳು ಅದ್ಭುತವಾಗಿವೆ. ಪ್ರೀತಮ್‌ ಚಕ್ರವರ್ತಿಯವರ ಹಿನ್ನೆಲೆ ಸಂಗೀತ ನೆನಪಿನಲ್ಲಿ ಉಳಿಯುತ್ತದೆ. ಸಾಹಸ ದೃಶ್ಯಗಳು ಕೂಡ ಮೆಚ್ಚುವಂತಿವೆ. 

ಬಹುತಾರಾಗಣ ಈ ಸಿನಿಮಾದ ವಿಶೇಷ. ಚಿತ್ರದಲ್ಲಿ ರಣಬೀರ್‌ ನಟನೆ ಒಪ್ಪುವಂತಿದೆ. ಆಲಿಯಾ ಭಟ್‌ ಪಾತ್ರ ಮುಖ್ಯ ಎಂಬಂತೆ ಬಿಂಬಿಸಲಾಗಿದೆ. ಹಲವು ವರ್ಷಗಳ ಬಳಿಕ ಶಾರುಖ್‌ ಖಾನ್‌ ಅವರನ್ನು ತೆರೆಯ ಮೇಲೆ ನೋಡಿ ಖುಷಿಯಾಯಿತು. ಅತಿಥಿ ಪಾತ್ರವಾದ್ದರಿಂದ ಶಾರುಖ್‌ ಮಿಂಚಿ ಮರೆಯಾಗುತ್ತಾರಷ್ಟೇ. ದಕ್ಷಿಣದ ಸ್ಟಾರ್‌ ನಟ ನಾಗಾರ್ಜುನ ಕೂಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಅಮಿತಾಬ್‌ ಇಳಿ ವಯಸ್ಸಿನಲ್ಲೂ ಆ್ಯಕ್ಷನ್‌ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಚಿತ್ರದುದ್ದಕ್ಕೂ ನಾಯಕನಿಗೆ ಪೈಪೋಟಿಯಾಗಿ ನಿಲ್ಲುವ ಮೌನಿ ರಾಯ್‌ ಪಾತ್ರ ನಿರ್ವಹಣೆ ಅಭಿನಂದನಾರ್ಹ.

ಬಿಡುಗಡೆಗೂ ಮೊದಲೇ ʼಬ್ರಹ್ಮಾಸ್ತ್ರʼವನ್ನು ಸುತ್ತುವರಿದಿದ್ದ ವಿವಾದಗಳು ಮತ್ತು ಚಿತ್ರತಂಡ ನಡೆಸಿದ್ದ ಅಬ್ಬರದ ಪ್ರಚಾರ ಎರಡೂ ಅನಗತ್ಯ. ಅಬ್ಬರದ ಪ್ರಚಾರಕ್ಕೆ ಸಮಯ, ಹಣ ಎರಡನ್ನೂ ವ್ಯರ್ಥ ಮಾಡುವ ಬದಲು ಸಿನಿ ತಂತ್ರಜ್ಞರು ಕತೆಯ ಮೇಲೆ ಗಮನ ಹರಿಸುವ ಬಗ್ಗೆ ಅಗತ್ಯವಿದೆ. 

ಸಾವಿರಾರು ಮಂದಿಯ ಶ್ರಮವಿರುವ ಈ ಸಿನಿಮಾವನ್ನು ನೋಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ವಿಮರ್ಶೆ ಓದಿದ ಬಳಿಕ ನಿರ್ಧಾರ ಪ್ರೇಕ್ಷಕರಿಗೆ ಬಿಟ್ಟದ್ದು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app