
- ಬ್ರಹ್ಮಾಸ್ತ್ರ ಬಹಿಷ್ಕಾರ ಅಭಿಯಾನಕ್ಕೆ ನಿರ್ದಿಷ್ಟ ಕಾರಣವೇ ಇಲ್ಲ
- ಸ್ಟಾರ್ ಸಿನಿಮಾ ಎಂಬ ಕಾರಣಕ್ಕೆ ಅಪಪ್ರಚಾರಕ್ಕಿಳಿದ ಟ್ರೋಲ್ ಪಡೆ
ಬಾಲಿವುಡ್ನ ಸ್ಟಾರ್ ನಟ ರಣಬೀರ್ ಕಪೂರ್ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ 'ಬ್ರಹ್ಮಾಸ್ತ್ರ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. 'ಬ್ರಹ್ಮಾಸ್ತ್ರ' ಬಿಡುಗಡೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಈ ಬಹುನಿರೀಕ್ಷಿತ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಶುರುವಾಗಿವೆ.
'ಬ್ರಹ್ಮಾಸ್ತ್ರ' ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ. ʼಬಾಯ್ಕಾಟ್ ಬ್ರಹ್ಮಾಸ್ತ್ರʼ ಎಂಬ ʼಹ್ಯಾಷ್ ಟ್ಯಾಗ್ʼ ಕೂಡ ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಆದರೆ, ಈ ಸಿನಿಮಾವನ್ನು ಬಹಿಷ್ಕರಿಸಲು ನಿರ್ದಿಷ್ಟ ಕಾರಣಗಳಿಲ್ಲ.
'ಬ್ರಹ್ಮಾಸ್ತ್ರ' ಟ್ರೈಲರ್ನಲ್ಲಿ ನಾಯಕ ರಣಬೀರ್ ಪಾದರಕ್ಷೆ ಧರಿಸಿ ದೇವಸ್ಥಾನದ ಮುಖ್ಯದ್ವಾರದಲ್ಲಿರುವ ಗಂಟೆಯನ್ನು ಹೊಡೆಯುತ್ತಿರುವಂತಹ ದೃಶ್ಯವೊಂದು ಕಂಡುಬಂದಿತ್ತು. ಈ ದೃಶ್ಯವನ್ನು ಕಂಡ ನೆಟ್ಟಿಗರು ಚಿತ್ರತಂಡದ ವಿರುದ್ಧ ಗರಂ ಆಗಿದ್ದರು. ಆಗಲೂ ಕೂಡ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವ 'ಬ್ರಹ್ಮಾಸ್ತ್ರ' ಚಿತ್ರವನ್ನು ಬಹಿಷ್ಕರಿಸಿ ಎಂದು ಕರೆ ನೀಡಲಾಗಿತ್ತು. ಈ ವಿವಾದಕ್ಕೆ ಕೂಡಲೇ ಸ್ಪಷ್ಟನೆ ನೀಡಿದ್ದ ನಿರ್ದೇಶಕ ಆಯನ್ ಮುಖರ್ಜಿ, "ಟ್ರೈಲರ್ನಲ್ಲಿ ಕಾಣುವಂತೆ ರಣಬೀರ್ ಪಾದರಕ್ಷೆ ಧರಿಸಿ ದೇವಸ್ಥಾನಕ್ಕೆ ತೆರಳಿದ್ದಲ್ಲ. ಅದು ʼದುರ್ಗಾ ಪೂಜೆಯ ಪೆಂಡಾಲ್ʼ. ಒಂದೇ ಒಂದು ದೃಶ್ಯವನ್ನು ತಪ್ಪಾಗಿ ಅರ್ಥೈಸಿಕೊಂಡು ಸಿನಿಮಾವನ್ನು ಬಹಿಷ್ಕರಿಸುತ್ತೇವೆ ಎನ್ನುವುದು ಒಳ್ಳೆಯದಲ್ಲ" ಎಂದಿದ್ದರು. ಅಲ್ಲಿಗೆ ಈ ವಿವಾದ ಸುಖಾಂತ್ಯ ಕಂಡಿತ್ತು.
ಇದೊಂದು ವಿವಾದ ಹೊರತುಪಡಿಸಿ 'ಬ್ರಹ್ಮಾಸ್ತ್ರ' ಸಿನಿಮಾವನ್ನು ಬಹಿಷ್ಕರಿಸಲು ಯಾವುದೇ ಉಚಿತ ಕಾರಣಗಳೇ ಇಲ್ಲ. ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ರಣಬೀರ್ ಅವರು ಕಪೂರ್ ವಂಶಸ್ಥ. ನಾಯಕಿ ಆಲಿಯಾ, ಬಾಲಿವುಡ್ನ ಹಿರಿಯ ನಿರ್ದೇಶಕ ಮಹೇಶ್ ಭಟ್ ಪುತ್ರಿ. ಚಿತ್ರದ ನಿರ್ಮಾಪಕ ಕರಣ್ ಜೋಹರ್, ಬಾಲಿವುಡ್ನ ಸ್ಟಾರ್ ನಟ, ನಟಿಯರ ಮಕ್ಕಳನ್ನು ಮಾತ್ರ ಬೆಳೆಸುತ್ತಾರೆ. ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ. ಈ ಮೂವರೂ 'ಬ್ರಹ್ಮಾಸ್ತ್ರ' ಚಿತ್ರದ ಭಾಗವಾಗಿರುವ ಕಾರಣಕ್ಕೆ ಈ ಚಿತ್ರವನ್ನು ಬಹಿಷ್ಕರಿಸಿ ಎಂದು ಈಗ ಕರೆ ನೀಡಲಾಗುತ್ತಿದೆ.
#BoycottBramhashtra
— Ajaykumar Lilhare (@ajaykumarlilhar) September 5, 2022
Totally Boycott Bollywood..Don't waste ur 1 Rs on Bollywood movie.. pic.twitter.com/LWNLapLhUN
ಬಾಲಿವುಡ್ ಸಿನಿಮಾಗಳು ಹೊಸ ರೀತಿಯ ಕಥೆ, ಹೊಸತನದ ಕೊರತೆ, ಭಿನ್ನ ನಿರೂಪಣೆ ಇಲ್ಲದೆ ಒಂದರ ಹಿಂದೊಂದರಂತೆ ಸೋಲು ಕಾಣುತ್ತಿವೆ ಎಂಬ ಮಾತುಗಳು ಚಾಲ್ತಿಯಲ್ಲಿರುವಾಗ, 2017- 18ರ ಆಸುಪಾಸಿನಲ್ಲಿ ಸೆಟ್ಟೇರಿ ಕೋವಿಡ್ ಲಾಕ್ಡೌನ್ನಂತಹ ಅಡೆತಡೆಗಳನ್ನು ಎದುರಿಸಿ 5 ವರ್ಷಗಳ ಚಿತ್ರೀಕರಣದ ಬಳಿಕ ಬಿಡುಗಡೆ ಸಿದ್ಧವಾಗಿರುವ ಅಂದಾಜು ₹410 ಕೋಟಿ ಬಂಡವಾಳದ 'ಬ್ರಹ್ಮಾಸ್ತ್ರ'ದಂತಹ ಬಹುನಿರೀಕ್ಷಿತ ಚಿತ್ರವನ್ನು ನೋಡುವ ಮೊದಲೇ ಬಹಿಷ್ಕರಿಸಿ ಎನ್ನುವುದು ಎಷ್ಟು ಸರಿ? 'ಬ್ರಹ್ಮಾಸ್ತ್ರ'ದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ ಸ್ಟಾರ್ ಕಲಾವಿದರು, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲದೇ ಸಾವಿರಾರು ತಂತ್ರಜ್ಞರು ಮತ್ತವರ ಕುಟುಂಬಗಳು ಆ ಸಿನಿಮಾದ ಗೆಲುವಿನ ನಿರೀಕ್ಷೆಯಲ್ಲೇ ಇರುತ್ತವೆ. ಒಂದು ಸಿನಿಮಾ ಗೆದ್ದರೇ ಹಲವು ತಂತ್ರಜ್ಞರಿಗೆ ಅವಕಾಶಗಳು ಹುಟ್ಟಿಕೊಳ್ಳುತ್ತವೆ ಎಂಬುದು ಹಲವರ ಅಭಿಪ್ರಾಯ.
ಈ ಸುದ್ದಿ ಓದಿದ್ದೀರಾ? ʻಕಾಂತಾರʼ ಟ್ರೈಲರ್ | ಸಿನಿ ರಸಿಕರ ಗಮನ ಸೆಳೆಯುತ್ತಿದೆ ರಿಷಬ್ ಶೆಟ್ಟಿಯ ಅರಣ್ಯ ಕಥನ
ರಣಬೀರ್ ಕಪೂರ್, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿರುವ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಬಹುತಾರಾಗಣದ 'ಬ್ರಹ್ಮಾಸ್ತ್ರ' ಸಿನಿಮಾ ಸೆಪ್ಟೆಂಬರ್ 9ಕ್ಕೆ ವಿಶ್ಯಾದ್ಯಂತ ತೆರೆ ಕಾಣಲಿದೆ.