ಬಿಡುಗಡೆಗೂ ಮೊದಲೇ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ ಬ್ರಹ್ಮಾಸ್ತ್ರ

brahmastra
  • ಬ್ರಹ್ಮಾಸ್ತ್ರದ ಎದುರು ನಡೆಯಲಿಲ್ಲ ಟ್ರೋಲ್‌ ಪಡೆಯ ಆಟ
  • ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ರಣಬೀರ್‌ ಸಿನಿಮಾ ಕಮಾಲ್‌ 

ರಣಬೀರ್ ಕಪೂರ್ ನಟನೆಯ ಬಹು ನಿರೀಕ್ಷಿತ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಚಾಲ್ತಿಯಲ್ಲಿವೆ. ಟ್ರೋಲ್ ಪಡೆಗಳ ಅಪಪ್ರಚಾರ ಮತ್ತು ʼಬಾಯ್‌ಕಾಟ್‌ ಬ್ರಹ್ಮಾಸ್ತ್ರʼ ಅಭಿಯಾನದ ನಡುವೆಯೂ ʼಬ್ರಹ್ಮಾಸ್ತ್ರʼ ಸಿನಿಮಾ ಹೊಸ ದಾಖಲೆ ಬರೆದಿದೆ.

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳು ಎನ್ನಿಸಿಕೊಂಡಿದ್ದ ʼಲಾಲ್‌ ಸಿಂಗ್‌ ಚಡ್ಡಾʼ, ʼರಕ್ಷಾ ಬಂಧನ್‌ʼ, ʼಏಕ್‌ ವಿಲನ್‌ ರಿಟರ್ನ್ಸ್‌ʼ ಸೇರಿದಂತೆ ಹಲವು ಚಿತ್ರಗಳು ಸಿನಿ ರಸಿಕರ ನಿರೀಕ್ಷೆಯನ್ನು ತಲುಪುವಲ್ಲಿ ಹಿನ್ನಡೆ ಅನುಭವಿಸಿವೆ. 'ಬ್ರಹ್ಮಾಸ್ತ್ರ' ಸಿನಿಮಾ ಸೆಟ್ಟೇರಿದ ದಿನದಿಂದಲೂ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದೆ. ಇದೇ ಕಾರಣಕ್ಕೆ 'ಬ್ರಹ್ಮಾಸ್ತ್ರ' ಸಿನಿಮಾ ಮುಂಗಡ ಟಿಕೆಟ್‌ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಬಿಡುಗಡೆಗೂ ಮೊದಲೇ ಚಿತ್ರದ 1 ಲಕ್ಷ ಮುಂಗಡ ಟಿಕೆಟ್‌ಗಳು ಮಾರಾಟವಾಗಿವೆ.

Eedina App

ಈ ಬಗ್ಗೆ ʼಪಿವಿಆರ್ ಸಿನಿಮಾಸ್ʼ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. "ಬ್ರಹ್ಮಾಸ್ತ್ರ ಸಿನಿಮಾದ ಈ ವಾರಾಂತ್ಯದ ಬಹುತೇಕ ಶೋಗಳ ಮುಂಗಡ ಟಿಕೆಟ್‌ಗಳು ಬುಕ್ಕಿಂಗ್‌ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದ್ದು, ಬರೋಬ್ಬರಿ 1 ಲಕ್ಷ ಮುಂಗಡ ಟಿಕೆಟ್‌ಗಳು ಈಗಾಗಲೇ ಬಿಕರಿಯಾಗಿವೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಕಾಯ್ದಿರಿಸುತ್ತಿದ್ದಾರೆ" ಎಂದು ಸಂಸ್ಥೆ ತಿಳಿಸಿದೆ.

ಈ ಹಿಂದೆ 'ಸೂರ್ಯವಂಶಿ' ಸಿನಿಮಾ ಈ ರೀತಿ ಮುಂಗಡ ಟಿಕೆಟ್‌ ಖರೀದಿಯಲ್ಲಿ ದಾಖಲೆ ಬರೆದಿತ್ತು. ಕೋವಿಡ್ ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗಿದ್ದ ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾದ ಮುಂಗಡ ಟಿಕೆಟ್‌ಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಸದ್ಯ 'ಬ್ರಹ್ಮಾಸ್ತ್ರ' ಸಿನಿಮಾ ಈ ಎಲ್ಲ ದಾಖಲೆಗಳನ್ನು ಸರಿಗಟ್ಟಿದೆ.

ಈ ಸುದ್ದಿ ಓದಿದ್ದೀರಾ? ತಿರುಚಿತ್ರಂಬಲಂ | ₹100 ಕೋಟಿ ಕ್ಲಬ್‌ ಸೇರಿದ ಧನುಷ್‌ ಮೊದಲ ಸಿನಿಮಾ

ಆಯನ್‌ ಮುಖರ್ಜಿ ನಿರ್ದೇಶನದ ʼಫ್ಯಾಂಟಸಿʼ ಕಥಾಹಂದರವುಳ್ಳ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಜೊತೆಯಾಗಿ ನಟಿಸಿದ್ದು, ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಅಕ್ಕಿನೆನಿ ನಾಗಾರ್ಜುನ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಈ ಬಹುನಿರೀಕ್ಷಿತ ಸಿನಿಮಾ ಸೆಪ್ಟೆಂಬರ್‌ 9ಕ್ಕೆ ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app