ಸಾಯಿ ಪಲ್ಲವಿ ಚಿತ್ರಕ್ಕೆ ಹೆಗಲಾದ ರಕ್ಷಿತ್‌ ಶೆಟ್ಟಿ

rakshitshetty
  • ಗಾರ್ಗಿ ವಿತರಣೆಯ ಹಕ್ಕು ಪರಂವಹ ಸ್ಟುಡಿಯೋಸ್‌ ಪಾಲು
  • ಸಾಯಿ ಪಲ್ಲವಿ ನಟನೆ ಮೆಚ್ಚಿ ಕೊಂಡಾಡಿದ ರಕ್ಷಿತ್‌ ಶೆಟ್ಟಿ

ಬಹುಭಾಷಾ ನಟಿ ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ 'ಗಾರ್ಗಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಗೌತಮ್‌ ರಾಮ ಚಂದ್ರನ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ  ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಿದ್ಧಗೊಂಡಿದ್ದು, ಕನ್ನಡದ ಸ್ಟಾರ್‌ ನಟ ರಕ್ಷಿತ್‌ ಶೆಟ್ಟಿ ಚಿತ್ರದ ಕನ್ನಡ ಅವತರಣಿಕೆಯ ವಿತರಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಈ ಬಗ್ಗೆ ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ರಕ್ಷಿತ್‌, 'ಗಾರ್ಗಿ' ಚಿತ್ರದ ಕನ್ನಡ ಅವತರಣಿಕೆ ವಿತರಣೆಗೆ ಒಪ್ಪಿಕೊಂಡಿದ್ದು ಯಾಕೆ ಎಂಬುದನ್ನು ತಿಳಿಸಿದ್ದಾರೆ.

"ಗೌತಮ್ ನನ್ನ ಒಳ್ಳೆಯ ಸ್ನೇಹಿತ, ನಾವು ಭೇಟಿಯಾದಾಗಲೆಲ್ಲ ಸಿನಿಮಾದ ಕುರಿತು ಮತ್ತು ಕಥೆಗಳ ಬಗ್ಗೆ ಮಾತನಾಡುವುದೇ ಹೆಚ್ಚು. ಗೌತಮ್‌ಗೆ ಸಿನಿಮಾದ ಬಗೆಗಿರುವ ಒಲವು, ಅದರ ಜೊತೆಗೆ 'ಗಾರ್ಗಿ' ಮೂಡಿ ಬಂದಿರುವ ರೀತಿ, ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತು. ಸಾಯಿ ಪಲ್ಲವಿ ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿರುವುದು ಮತ್ತೊಂದು ಬಲವಾದ ಕಾರಣ ಎಂದು ಹೇಳಬಹುದು. ಇವೆಲ್ಲ ಒಂದು ಕಡೆಯಾದರೆ, ಚಿತ್ರ ವೀಕ್ಷಿಸಿದ ನಂತರ ನನ್ನ ಬಳಿ ಸಾವಿರ ಕಾರಣಗಳಿದ್ದವು. 'ಗರುಡಗಮನ ವೃಷಭವಾಹನ' ಚಿತ್ರದ ನಂತರ 'ಗಾರ್ಗಿ' ನನ್ನ ಹೃದಯ ಕದಲಿಸಿದ ಸಿನಿಮಾ ಎಂದರೆ ತಪ್ಪಾಗಲಾರದು. ಈ ಚಿತ್ರ ನಿಮ್ಮನ್ನು 'ಗಾರ್ಗಿ'ಯ ಪ್ರಪಂಚದೊಳಗೆ ಸೆಳೆಯುತ್ತದೆ. ಕಥಾನಾಯಕಿಯ ಹೋರಾಟದ ದೃಶ್ಯಗಳು ಮನಕಲುಕುವಂತಿವೆ. ಗೌತಮ್ ಆ ದೃಶ್ಯಗಳನ್ನು ರೂಪಿಸಿರುವ ರೀತಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಸಾಯಿ ಪಲ್ಲವಿ 'ಗಾರ್ಗಿ' ಪಾತ್ರದಲ್ಲಿ ಜೀವಿಸಿದ್ದಾರೆ. ಕಾಳಿ ವೆಂಕಟ್ ʼಇಂದ್ರʼ ಎಂಬುವ ಪಾತ್ರವನ್ನ ಅದ್ಭುತವಾಗಿ ನಿರ್ವಹಿಸಿದ್ದಾರೆ" ಎಂದು ರಕ್ಷಿತ್ ಬರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಾವಿದರಿಗಾಗಿ ಹುಡುಕಾಟ ಶುರು ಮಾಡಿದ 'ಪುಷ್ಪ' ಚಿತ್ರತಂಡ

 

"ನಮ್ಮ ಚಿತ್ರಗಳನ್ನು ನಾವು ಬೇರೆ ಭಾಷೆ ಮತ್ತು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿರುವಾಗ, ಬೇರೆ ಭಾಷೆಯ ಒಳ್ಳೆಯ ಚಿತ್ರಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ. ಗೌತಮ್ ನಮ್ಮ ಬೆಂಗಳೂರಿನವರೆ. ಸ್ವತಃ ಸಾಯಿ ಪಲ್ಲವಿ ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ತಮ್ಮ ಧ್ವನಿ ನೀಡಿರುವುದು ಇನ್ನೊಂದು ಹೆಮ್ಮೆಯ ಮತ್ತು ಖುಷಿಯ ವಿಚಾರ. ಚಿತ್ರದ ಕನ್ನಡ ಅವತರಣಿಕೆಯ ಡಬ್ಬಿಂಗ್ ಕೆಲಸಗಳಲ್ಲಿ ಸಂಪೂರ್ಣ ಬೆಂಬಲ ನೀಡಿರುವ ಶೀತಲ್‌ ಶೆಟ್ಟಿ ಹಾಗೂ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು" ಎಂದಿದ್ದಾರೆ.

'ಗಾರ್ಗಿ' ಚಿತ್ರದಲ್ಲಿ ಸಾಯಿ ಪಲ್ಲವಿ ನ್ಯಾಯಕ್ಕಾಗಿ ಹೋರಾಡುವ ಸಾಮಾನ್ಯ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜುಲೈ 15ರಂದು ತೆರೆಗೆ ಬರುತ್ತಿದ್ದು, ರಾಜ್ಯದಲ್ಲಿ ರಕ್ಷಿತ್‌ ಶೆಟ್ಟಿ ಒಡೆತನದ ಪರಂವಹ ಸ್ಟುಡಿಯೋಸ್‌ ಚಿತ್ರ ನಿರ್ಮಾಣ ಸಂಸ್ಥೆ ಈ ಚಿತ್ರದ ಕನ್ನಡ ಅವತರಣಿಕೆಯನ್ನು ಹಂಚಿಕೆ ಮಾಡಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್