ಸುಶಾಂತ್‌ ಸಿಂಗ್‌ ಮಾದಕ ವ್ಯಸನಕ್ಕೆ ರಿಯಾ ಕಾರಣ ಎಂದ ಎನ್‌ಸಿಬಿ

rhea-chakraborty

ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಮತ್ತೆ ಸಂಕಷ್ಟ ಎದುರಾಗಿದೆ. ನಟ ಸುಶಾಂತ್ ಸಿಂಗ್ ಮಾದಕ ವ್ಯಸನಕ್ಕೆ ತುತ್ತಾಗಲು ಅವರ ಪ್ರೇಯಸಿ, ನಟಿ ರಿಯಾ ಕಾರಣ ಎಂದು ಸುಶಾಂತ್ ಸಾವಿನ ತನಿಖೆ ನಡೆಸುತ್ತಿರುವ ʼಎನ್‌ಸಿಬಿʼ (ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯುರೋ) ಅಧಿಕಾರಿಗಳ ತಂಡ ಆರೋಪಿಸಿದೆ.

ವಿಶೇಷ ನ್ಯಾಯಾಲಯಕ್ಕೆ ಸುಶಾಂತ್ ಸಾವಿನ ಪ್ರಕರಣದ ತನಿಖಾ ವರದಿ ಸಲ್ಲಿಸಿರುವ ಅಧಿಕಾರಿಗಳು ರಿಯಾ ಮತ್ತವರ ಸಹೋದರ ಶೋವಿಕ್ ಚಕ್ರವರ್ತಿ ಸೇರಿ 34 ಜನರನ್ನು ಆರೋಪಿಗಳ ಪಟ್ಟಿಗೆ ಸೇರಿಸಿದ್ದಾರೆ.

"ಚಿಕ್ಕ ಪ್ರಮಾಣದಲ್ಲಿ ಮಾದಕ ದ್ರವ್ಯ ಮರಿಜುವಾನವನ್ನು ಖರೀದಿ ಮಾಡುತ್ತಿದ್ದ ರಿಯಾ, ಅದನ್ನು ತಾವು ಕೂಡ ಸೇವಿಸುತ್ತಿದ್ದರು. ಜೊತೆಗೆ ಸುಶಾಂತ್ ಅವರಿಗೆ ತಲುಪಿಸುತ್ತಿದ್ದರು. ಮರಿಜುವಾನ ಪಡೆದ ಬಳಿಕ ಡ್ರಗ್‌ ಡೀಲರ್‌ಗಳಿಗೆ ರಿಯಾ ಅವರೇ ಹಣ ಪಾವತಿ ಮಾಡಿದ್ದಾರೆ. ಸುಶಾಂತ್ ಮಾದಕ ವ್ಯಸನಕ್ಕೆ ತುತ್ತಾಗಲು ರಿಯಾ ನೇರ ಕಾರಣ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ವಿಕ್ರಾಂತ್ ರೋಣ | ಅಂಕುಡೊಂಕು ದಾರಿಯಲ್ಲಿ ಫಕೀರನಾಗಿ ಬಂದ ನಿರೂಪ್‌ ಭಂಡಾರಿ

ಆದರೆ, ಎನ್‌ಸಿಬಿ ಅಧಿಕಾರಿಗಳ ಆರೋಪ ತಳ್ಳಿ ಹಾಕಿರುವ ರಿಯಾ, "ಈ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕ ಸಿಲುಕಿಸಲಾಗುತ್ತಿದೆ. ನಾನು ಎಂದಿಗೂ ಮಾದಕ ದ್ರವ್ಯಗಳನ್ನು ಸೇವಿಸಿಲ್ಲ. ಅಗತ್ಯ ಬಿದ್ದರೆ ನಾನು ವೈದ್ಯಕೀಯ ಪರೀಕ್ಷೆಗೂ ಸಿದ್ಧಳಿದ್ದೇನೆ. ಸುಶಾಂತ್‌ ಮರಿಜುವಾನ ಬಳಸುತ್ತಿದ್ದರು ಎಂಬುದು ಸತ್ಯ. ಆದರೆ, ಅವರಿಗೆ ನಾನು ಯಾವತ್ತೂ ಮರಿಜುವಾನ ತಂದುಕೊಟ್ಟಿಲ್ಲ. ಅಥವಾ ಮಾದಕ ವ್ಯಸನಕ್ಕೆ ಪ್ರೋತ್ಸಾಹಿಸಿಲ್ಲ. ಬದಲಿಗೆ ವ್ಯಸನಕ್ಕೆ ತುತ್ತಾಗಿದ್ದ ಅವರನ್ನು ಸರಿದಾರಿಗೆ ತರಲು ಯತ್ನಿಸಿದ್ದೆ" ಎಂದಿದ್ದಾರೆ.

ಒಂದು ವೇಳೆ ರಿಯಾ ಮೇಲಿನ ಆರೋಪಗಳು ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸುಶಾಂತ್‌ 2020 ಜೂನ್‌ 14ರಂದು ಬಾಂದ್ರಾ ವೆಸ್ಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸುಶಾಂತ್‌ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಸುಶಾಂತ್‌ ಸಾವಿನ ಜೊತೆಗೆ ಅಕ್ರಮ ಹಣ ವರ್ಗಾವಣೆ ಮತ್ತು ಮಾದಕ ಜಾಲದ ಪ್ರಕರಣಗಳು ತಳುಕು ಹಾಕಿಕೊಂಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಎನ್‌ಸಿಬಿ ಅಧಿಕಾರಿಗಳು ರಿಯಾ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ತಿಂಗಳ ಕಾಲ ಜೈಲುವಾಸ ಅನುಭವಿಸಿದ ಬಳಿಕ ರಿಯಾ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್