ಕಾಂತಾರ | ಒಂದೇ ತಿಂಗಳಲ್ಲಿ ಕಂಬಳದ ಓಟ ಕಲಿತಿದ್ದ ರಿಷಬ್‌ ಶೆಟ್ಟಿ

kantara
  • ಕಾಂತಾರ ಚಿತ್ರದ ಮೊದಲ ಮೇಕಿಂಗ್‌ ವಿಡಿಯೋ ಬಿಡುಗಡೆ
  • ಎದ್ದು-ಬಿದ್ದು ಕಂಬಳ ಕಲಿತ ಅನುಭವ ಹಂಚಿಕೊಂಡ ಶೆಟ್ರು

ರಿಷಬ್‌ ಶೆಟ್ಟಿ ತಾವೇ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೈಲರ್‌ ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಚಿತ್ರದಲ್ಲಿ ಹಳ್ಳಿ ಹೈದ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಷಬ್‌ ಕಂಬಳದ ಕೋಣಗಳನ್ನು ಓಡಿಸಿದ ಮೈನವಿರೇಳಿಸುವ ದೃಶ್ಯ ಟ್ರೈಲರ್‌ನಲ್ಲಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಕಾಂತಾರ ಚಿತ್ರದ ಮೊದಲ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಕಂಬಳದ ಗಂಧ ಗಾಳಿಯನ್ನೂ ತಿಳಿಯದ ರಿಷಬ್‌ ತಮ್ಮ ಪಾತ್ರಕ್ಕಾಗಿ ಕಂಬಳ ಓಡಿಸುವುದನ್ನು ಕಲಿತದ್ದು ಹೇಗೆ ಎಂಬುದನ್ನು ಬಹಿರಂಗ ಪಡಿಸಿದೆ.

ಕಾಂತಾರ ಟ್ರೈಲರ್‌ನಲ್ಲಿ ಪರಿಣಿತಿ ಹೊಂದಿರುವ ಕಂಬಳದ ಓಟಗಾರನಂತೆ ರಿಷಬ್‌ ಕಾಣ ಸಿಗುತ್ತಾರೆ. ಸದ್ಯ ಬಿಡುಗಡೆಯಾಗಿರುವ ಮೇಕಿಂಗ್‌ ವಿಡಿಯೋದಲ್ಲಿ ತಾವು ಕಂಬಳ ಕಲಿತದ್ದು ಹೇಗೆ ಎಂಬುದನ್ನು ಸ್ವತಃ ರಿಷಬ್‌ ಅವರೇ ವಿವರಿಸಿದ್ದಾರೆ. "ಕಾಂತಾರ ಚಿತ್ರಕಥೆಯಲ್ಲಿ ಮೊದಲಿಗೆ ಎಲ್ಲಿಯೂ ಕಂಬಳದ ಸನ್ನಿವೇಶ ಇರಲಿಲ್ಲ. ಕಥಾ ನಾಯಕ ಶಿವನ ಪಾತ್ರವನ್ನು ಕಟ್ಟಿಕೊಡುತ್ತ ಹೋದ ಹಾಗೆ ಆತನನ್ನು ಕಂಬಳದ ಓಟಗಾರನನ್ನಾಗಿ ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದೆವು. ಅದರ ಫಲವಾಗಿ ನಾನು ಕಂಬಳ ಕಲಿಯಬೇಕಾಗಿ ಬಂತು. ಎಂದಿಗೂ ಕಂಬಳದ ಕೋಣಗಳನ್ನು ಓಡಿಸಿರದ ನಾನು ಒಂದೇ ತಿಂಗಳಿನಲ್ಲಿ ಕಂಬಳ ಓಟವನ್ನೇ ಕಲಿತೆ. ಒಮ್ಮೆ ಕೋಣಗಳ ಹಿಂದೆ ಓಡುವಾಗ ಆಯ ತಪ್ಪಿ ಬಿದ್ದಿದ್ದೂ ಇದೆ" ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ರಿಷಬ್‌ ಕಂಬಳ ಕಲಿಯಲು ನೆರವಾದ ಸ್ಥಳೀಯ ಮಹೇಶ ಮತ್ತು ಪರಮೇಶ್ವರ ಭಟ್ಟರು ಕೂಡ ಮೇಕಿಂಗ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, "ಮೊದ ಮೊದಲಿಗೆ ರಿಷಬ್‌ ಕಂಬಳ ಓಡಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆವು. ಆದರೆ, ಅವರು ನಿರಂತರವಾಗಿ ಕಂಬಳ ಕಲಿತ ರೀತಿ ನಮ್ಮನ್ನು ಅಚ್ಚರಿ ಪಡಿಸಿತು. ಈಗ ಅವರು ಸಾಂಪ್ರದಾಯಿಕ ಕಂಬಳದ ಓಟಗಾರರಿಗಿಂತ ಚೆನ್ನಾಗಿ ಕೋಣವನ್ನು ಓಡಿಸುತ್ತಾರೆ. ಕಾಂತಾರ ಚಿತ್ರದಲ್ಲಿ ನಾವು ಆರಾಧಿಸುವ ದೇವರು, ನಮ್ಮೂರಿನ ಆಚರಣೆಗಳನ್ನು ತೋರಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ" ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ಚಿತ್ರದಲ್ಲಿನ ಕಂಬಳದ ಸನ್ನಿವೇಶಗಳನ್ನು ಬೈಂದೂರಿನ ʼಬೀಡಿನ ಮನೆ ಗದ್ದೆʼಯಲ್ಲಿ ಚಿತ್ರೀಕರಿಸಲಾಗಿದೆ. 24 ಗಂಟೆಗಳ ಕಾಲ ಕಂಬಳದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು ಎಂದು ರಿಷಬ್‌ ಶೆಟ್ಟಿ ಹೇಳಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ ಮತ್ತು ಸಪ್ತಮಿ ಗೌಡ ಜೊತೆಯಾಗಿ ನಟಿಸಿರುವ 'ಕಾಂತಾರ' ಸಿನಿಮಾ ಸೆಪ್ಟೆಂಬರ್‌ 30ಕ್ಕೆ ತೆರೆಗೆ ಬರಲಿದೆ. ಆಚ್ಯುತ್‌ ಕುಮಾರ್‌, ಕಿಶೋರ್‌, ಪ್ರಮೋದ್‌ ಶೆಟ್ಟಿ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್