ಹರಿಕಥೆ ಅಲ್ಲ ಗಿರಿಕಥೆ | ಪ್ರೊಜೆಕ್ಟರ್‌‌ ರೂಮ್‌‌ನಿಂದ ಪರದೆಗೆ ದಾಟುವಲ್ಲಿ ಗೆದ್ದ ಗಿರಿಕಥೆ

harikathe

ಪ್ರತಿ ರಾತ್ರಿ ನಿದ್ರೆಯಲ್ಲಿ ಅಪ್ಪ ಥಿಯೇಟರ್‌ನಲ್ಲಿ ತಾನು ನಿರ್ದೇಶಿಸಿದ ಸಿನಿಮಾ ನೋಡಲು ಕೂತ ಹಾಗೆ ಕನಸು ಕಾಣುವ ಮಗ ಬೆಳಗೆದ್ದು ರಾತ್ರಿ ಕಂಡ ಕನಸನ್ನು ನನಸು ಮಾಡಿಕೊಳ್ಳಲು ಹೊರಟು ನಿಲ್ಲುತ್ತಾನೆ. ಇದು ಒಂದು ದಿನದ ಕತೆಯಲ್ಲ, ಪ್ರತಿದಿನವೂ ನಡೆಯುವ ಹರಿಕಥೆ. ಅಲ್ಲ, ಗಿರಿಕಥೆ.

ಅಪ್ಪು ಹೊನ್ನವಳ್ಳಿ ಕೃಷ್ಣ ಕನ್ನಡದ ದಿಗ್ಗಜ ನಟರ ಚಿತ್ರಗಳಲ್ಲಿ ನಟಿಸಿ, ಸಹಾಯಕ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ ಅನುಭವಿ. 45 ವರ್ಷಗಳ ಸುಧೀರ್ಘ ಸಿನಿ ಪಯಣದಲ್ಲಿ 1,118 ಚಿತ್ರಗಳಲ್ಲಿ ನಟಿಸಿದರೂ ಒಂದೇ ಒಂದು ಬಾರಿಯೂ ಸಿನಿಮಾಗೆ ಆಕ್ಷನ್ ಕಟ್‌‌ ಹೇಳಲಿಕ್ಕೆ ಆಗಲಿಲ್ಲವಲ್ಲ ಎಂಬ ಕೊರಗು ಅವರಿಗೆ. ಅಪ್ಪನಂತೆ ಸಿನಿಮಾವನ್ನೇ ಉಸಿರಾಡುವ ಗಿರಿ ಡೈರೆಕ್ಟರ್ ಆಗಿಯೇ ತೀರುತ್ತೇನೆಂಬ ಛಲವಾದಿ.

Eedina App

ತನ್ನ ಕನಸಿನ ಹರಿಕಥೆಯನ್ನು ಸಿನಿಮಾ ಮಾಡಲು ಗಾಂಧಿನಗರದ ಸುತ್ತ ಗಿರಕಿ ಹೊಡೆಯುವ ಗಿರಿ ಸುಸ್ತಾಗಿ ಮೈಸೂರು ಸೇರುತ್ತಾನೆ. ಮಳೆ ಧಾರಾವಾಹಿಯ ಹಾವಳಿಗೆ ಬೆಂಕಿ ಸಾಕ್ಷಿ ಧಾರಾವಾಹಿಯ ನಿರ್ದೇಶನ ಕೈಬಿಟ್ಟು ಪ್ರೊಡಕ್ಷನ್ ಮ್ಯಾನೆಜರ್ ಆಗಿ ಉಳಿದುಕೊಳ್ಳುವ ಪ್ರಸನ್ನ ಕಥಾನಾಯಕನ ಜೊತೆಯಾಗುತ್ತಾನೆ. ಅಲ್ಲಿಯವರೆಗೂ ಸಿನಿಮಾ ಮಾಡುವ ಕನಸು ಮಾತ್ರ ಕಂಡಿದ್ದ ಗಿರಿ ಅದಾದಮೇಲೆ ಸರ್ಕಸ್‌‌ನ ಭಾಗವಾಗುತ್ತಾನೆ. ಮೈಸೂರಿನಲ್ಲೂ ತನ್ನ ಕಥೆಗೆ ಬಂಡವಾಳ ಹಾಕುವವರು ಸಿಗದಿದ್ದಾಗ ಹಣವಂತ ಹುಡುಗಿಯರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ಗಿರಿಯ ಈ ಹುಚ್ಚಾಟಗಳಿಗೆ ಗೆಳೆಯ ಪ್ರಸನ್ನನ ಬೆಂಬಲ ಸದಾ ಇದ್ದೇ ಇರುತ್ತದೆ. ಹಣವಂತ ಹುಡುಗಿಯರ ಹುಡುಕಾಟಕ್ಕೆ ಫೇಸ್‌ಬುಕ್‌ ಮೊರೆ ಹೋಗುವ ಕಥಾನಾಯಕ ಕೊನೆಗೂ ತಾನಂದುಕೊಂಡಂತೆ ಮೈಸೂರಿನ ಶಾಸಕ ಜೋಕುಮಾರಸ್ವಾಮಿಯ ಮಗಳು ಖುಷಿಯ ಹಿಂದೆ ಬೀಳುತ್ತಾನೆ. ಯೋಜನೆಯಂತೆ ಆಕೆಯೊಂದಿಗೆ ಪ್ರೇಮ ಪ್ರಸಂಗವೂ ಜರಗುತ್ತದೆ. ಹಣವಂತರ ಮಗಳನ್ನು ಪ್ರೀತಿಸುವ ನಾಟಕವಾಡಿ ತನ್ನ ಸಿನಿಮಾಗೆ ಬಂಡವಾಳ ಗಿಟ್ಟಿಸಿಕೊಳ್ಳುವ ತಂತ್ರ ಮುಂದೆ ಆತನಿಗೆ ತಿರುಗುಬಾಣವಾಗುತ್ತದೆ.

ಪ್ರೀತಿಗಿಂತ ತನ್ನ ಸಿನಿಮಾ ಕನಸು ಮೇಲೆಂದು ಪ್ರೀತಿಸಿದ ಹುಡುಗಿಯನ್ನು ನಡು ದಾರಿಯಲ್ಲೇ ಬಿಟ್ಟು ಹೊರಡುವ ಗಿರಿ ಬ್ಯಾಂಕ್‌‌ನಲ್ಲಿ ಸಾಲ ಪಡೆದು ಸಿನಿಮಾ‌ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಸಿನಿಮಾ ಮಾಡಲು ಸಾಲ ಕೊಡಿ ಎಂದು ಬ್ಯಾಂಕಿಗೆ ಹೋಗುವ ಗಿರಿ ಹುಸಿ ದರೋಡೆಯ ನಾಟಕೀಯ ಸನ್ನೀವೇಶಕ್ಕೆ ಭಾಗೀದಾರನಾಗುತ್ತಾನೆ. ಅಲ್ಲಿ ಆಕಸ್ಮಿಕವಾಗಿ ಪರಿಚಯವಾಗುವ ಸಿನಿ ಆಸಕ್ತರ ಗುಂಪು ಮುಂದೆ ಗಿರಿಯ ಹರಿಕಥೆ ಕನಸಿಗೆ ಜೊತೆಯಾಗುತ್ತಾರೆ. ಸಿನಿಮಾದಲ್ಲಿ ವಿಲನ್‌ ಆಗುವ ಆಸೆ ಹೊತ್ತ ವಿಲನ್‌ ಗಿರಿ, ಒಂದಲ್ಲ ಒಂದು ದಿನ ನಟಿಯಾಗುತ್ತೇನೆ ಎನ್ನುವ ಅತ್ಯುತ್ಸಾಹದ ಹುಡುಗಿ ಗಿರಿಜಾ ಥಾಮಸ್‌, ಕ್ಯಾಮೆರಾ ಮ್ಯಾನ್‌ 5ಡಿ ಥಾಮಸ್‌ ಹೀಗೆ ಎಲ್ಲರೂ ಸೇರಿ ತಾವೆಲ್ಲರೂ ಕೂಡಿಟ್ಟ ಹಣದಲ್ಲಿ ಸಿನಿಮಾ ಮಾಡಲು ಸಜ್ಜಾಗುತ್ತಾರೆ. ಇನ್ನೇನೂ ಸಿನಿಮಾ ಸೆಟ್ಟೇರಿಯೇ ಬಿಟ್ಟಿತು ಎನ್ನುವ ಹೊತ್ತಿಗೆ ಹೊನ್ನವಳ್ಳಿ ಕೃಷ್ಣ ಆಸ್ಪತ್ರೆ ಸೇರುತ್ತಾರೆ. ಸಿನಿಮಾಗಾಗಿ ಕೂಡಿಟ್ಟ ಹಣ ಆಸ್ಪತ್ರೆಯ ಬಿಲ್‌ ಪಾವತಿಸುವ ಹೊತ್ತಿಗೆ ಖಾಲಿಯಾಗುತ್ತದೆ. ಕಾಸಿಲ್ಲದೆ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಹಣವಂತರನ್ನು ಅಪಹರಿಸುವ ನಿರ್ಧಾರಕ್ಕೆ ಬರುವ ಗಿರಿ ಮತ್ತು ತಂಡ ಹಲವು ವಿಫಲ ಪ್ರಯತ್ನಗಳ ಬಳಿಕ ಆಕಸ್ಮಿಕವಾಗಿ ಜೋಕುಮಾರಸ್ವಾಮಿಯ ಮಗಳು ಖುಷಿಯನ್ನೇ ಹೊತ್ತೊಯ್ಯುತ್ತದೆ. ಹಳೆ ಹುಡುಗಿಯನ್ನು ಅಪಹರಿಸಿ ಸಿನಿಮಾಗೆ ಬೇಕಾದ ಬಂಡವಾಳದ ಹಣಕ್ಕಾಗಿ ಜೋಕುಮಾರಸ್ವಾಮಿಯ ಬಳಿ ಬೇಡಿಕೆ ಇಡುವ ಗಿರಿ ಮುಂದೆ ಪೊಲೀಸರ ಅಥಿತಿಯಾಗುತ್ತಾನೆ. ಹಾಗಿದ್ದರೆ ಆತನ ಹರಿಕಥೆ ಮುಂದೇನಾಯ್ತು? ಗಿರಿ ತಾನು ಅಂದುಕೊಂಡಂತೆ ಸಿನಿಮಾ ಮಾಡಿದನೆ? ಆತನನ್ನು ನಂಬಿ ಆಸೆಕಂಗಳ ಹುಡುಗರು ಏನಾದರು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ನೀವು ಚಿತ್ರಮಂದಿರಕ್ಕೆ ತೆರಳಿ ಗಿರಿಕಥೆಯನ್ನು ನೋಡಿಯೇ ಉತ್ತರ ಕಂಡುಕೊಳ್ಳಬೇಕು.

AV Eye Hospital ad

ಮಧ್ಯಮ ವರ್ಗದ ಹುಡುಗನೊಬ್ಬ ಸಿನಿಮಾ ನಿರ್ದೇಶಕನಾಗುವ (ನಿರ್ದೇಶಕನಾಗುವ ಕನಸು ಹೊತ್ತ ಗಿರಿಯ ಜಾಗದಲ್ಲಿ ಪ್ರೇಕ್ಷಕರು ಯಾರನ್ನು ಬೇಕಿದ್ದರೂ ಊಹಿಸಿಕೊಳ್ಳಬಹುದು) ಕನಸು ಕಂಡಾಗ ಆತ ಎದುರುಗೊಳ್ಳುವ ಸವಾಲುಗಳು, ಗುರಿ ತಲುಪಲು ಆಯ್ದುಕೊಳ್ಳುವ ದಾರಿ ಎಲ್ಲವೂ ಮುಖ್ಯವಾಗುತ್ತದೆ. ಕಂಡ ಕನಸನ್ನು ನನಸು ಮಾಡಿಕೊಳ್ಳಲು ಅಡ್ಡದಾರಿ ಹಿಡಿದರೆ ಮುಂದೆ ಆಗುವ ಅನಾಹುತಗಳಿಗೂ ನಾವೇ ಹೊಣೆಗಾರರು ಎಂಬುದನ್ನು ಚಿತ್ರ ಸೂಚ್ಯವಾಗಿ ಹೇಳುತ್ತದೆ. ಯೋಗರಾಜ್‌ ಭಟ್ಟರು ಸಾಹಿತ್ಯದಲ್ಲಿ ವಾಸುಕಿ ವೈಭವ್‌ ಕಂಠದಲ್ಲಿ ಮೂಡಿಬಂದಿರುವ ಬೇವರ್ಸಿ ಮನ್ಸಾ ಹಾಡು ಕೂಡ ಚಿತ್ರದ ಮೂಲ ಆಶಯವನ್ನೇ ಸೂಚಿಸುತ್ತದೆ. ಚಿತ್ರದ ಮತ್ತೊಂದು ಹಾಡು ಜೂನಿಯರ್‌ ಮೋನಾಲಿಸಾ ಕೇಳುಗರನ್ನು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತದೆ.  

 

ನಿಜ ಜೀವನದಲ್ಲಿ ನಿರ್ದೇಶಕನಾಗಿ ಖ್ಯಾತಿ ಗಳಿಸಿರುವ ರಿಷಬ್‌ ಶೆಟ್ಟಿ ರೀಲ್‌ನಲ್ಲೂ ನಿರ್ದೇಶಕನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 'ಲವ್‌ ಮಾಕ್‌ಟೇಲ್‌' ಚಿತ್ರದಲ್ಲಿ ಮಿಂಚಿದ್ದ ಯುವನಟಿ ರಚನಾ ಇಂದರ್‌ ಗಿರಿಕಥೆಯಲ್ಲೂ ಗಮನ ಸೆಳೆಯುತ್ತಾರೆ. ಯುವ ಪ್ರತಿಭೆ ತಪಸ್ವಿನಿ ಒಂದೆರೆಡು ಬಾರಿ ಕಾಣಿಸಿಕೊಂಡರು ಮನದಲ್ಲಿ ಉಳಿಯುತ್ತಾರೆ. ಬಹು ದಿನಗಳ ಬಳಿಕ ಹೊನ್ನವಳ್ಳಿ ಕೃಷ್ಣ ಅವರನ್ನು ಬೆಳ್ಳಿ ಪರದೆಯ ಮೇಲೆ ನೋಡುವುದೇ ಚೆಂದ. ಖ್ಯಾತ ತುಳು ಹಾಸ್ಯ ಕಲಾವಿದ ದೀಪಕ್‌ ರೈ ಪಾಣಾಜೆ ನಿರೀಕ್ಷಿಸಿದಷ್ಟು ನಗಿಸದಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗಿರಿಕಥೆ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿರುವ ಹಾಸ್ಯನಟ ಅನಿರುಧ್‌ ಮಹೇಶ್‌, 5ಡಿ ಥಾಮಸ್‌ ಪಾತ್ರದಲ್ಲಿ ತೆರೆಯ ಮೇಲೂ ಕಾಣಿಸಿಕೊಂಡಿರುವುದು ವಿಶೇಷ.  

ಸಿನಿಮಾದ ಉದ್ದಕ್ಕೂ ಆಗಾಗ ವಿಚಾರಣೆಯ ನೆಪದಲ್ಲಿ ಬಂದು ಹೋಗುವ (ಪೊಲೀಸ್‌ ಪಾತ್ರದಾರಿ ಅಭಿಮನ್ಯು) ಪ್ರಮೋದ್‌ ಶೆಟ್ಟಿ ಕೊನೆಯವರೆಗೂ ಪ್ರೇಕ್ಷಕರನ್ನು ಗೊಂದಲದಲ್ಲೇ ಉಳಿಯುವಂತೆ ಮಾಡುತ್ತಾರೆ. ಪ್ರತಿ ಹಂತದಲ್ಲೂ ಸಿನಿಮಾ ಎಲ್ಲಿಂದ ಶುರುವಾಯ್ತು ಎಂಬುದನ್ನೇ ತಿಳಿಯದಷ್ಟು ಗೊಂದಲಕ್ಕೆ ನೂಕುವ ನಿರ್ದೇಶಕರು ಕೊನೆಯಲ್ಲಿ ಎಲ್ಲವನ್ನೂ ಸ್ಪಷ್ಟ ಪಡಿಸುತ್ತಾರೆ. 

ದೃಶ್ಯವೊಂದರಲ್ಲಿ ರಿಷಬ್‌ ದ್ವಿಪಾತ್ರದಲ್ಲಿ ನಟಿಸಿರುವುದು ಕೂಡ ವಿಶೇಷ. ಗಾಂಧಿನಗರದಲ್ಲಿ ಜಾರಿಯಲ್ಲಿರುವ ಮಾತುಗಳಿಗೆ ರಿಷಬ್‌ ಶೆಟ್ಟರ ಕೃತಿಗಳೇ ಉತ್ತರ ನೀಡುತ್ತಿರುವಾಗ, ಗಿರಿ ಹೊನ್ನವಳ್ಳಿಯ ಕೈಯಲ್ಲಿ ಗಿರಿಶೆಟ್ಟಿ ಎಂದು ಹೇಳಿಸುವ ಅಗತ್ಯವಿರಲಿಲ್ಲ ಎನ್ನಿಸುತ್ತದೆ. 

ಪ್ರೊಜೆಕ್ಟರ್‌‌ ರೂಮ್‌‌ನಲ್ಲಿ ಶುರುವಾಗುವ ಗಿರಿಕತೆಯನ್ನು ಪರದೆಗೆ ದಾಟಿಸುವಲ್ಲಿ ನಿರ್ದೇಶಕರಾದ ಕರಣ್‌ ಅನಂತ್‌ ಮತ್ತು ಅನಿರುಧ್‌ ಮಹೇಶ್‌ ಯಶಸ್ವಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app