- ಚಿತ್ರಮಂದಿರಗಳಲ್ಲಿ ಆರ್ಆರ್ಆರ್ ಒಟ್ಟಾರೆ ಗಳಿಕೆ ₹1,139 ಕೋಟಿ
- ಒಟಿಟಿಯಲ್ಲೂ ಅತಿಹೆಚ್ಚು ವೀಕ್ಷಣೆ ಪಡೆದ ಆರ್ಆರ್ಆರ್
ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ʼಆರ್ಆರ್ಆರ್ʼ ಸಿನಿಮಾ ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದ್ದು, ಬರೋಬ್ಬರಿ ₹1,139 ಕೋಟಿ ಗಳಿಸಿ ದಾಖಲೆ ಬರೆದಿದೆ. ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದ ಆರ್ಆರ್ಆಆರ್ ಇತ್ತೀಚೆಗೆಷ್ಟೇ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. ಆರ್ಆರ್ಆರ್ ಚಿತ್ರದ ಹಿಂದಿ ಅವತರಣಿಕೆ ಮಾತ್ರ ಬಿಡುಗಡೆ ಮಾಡಲಾಗಿತ್ತು. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಒಂದೇ ವಾರಕ್ಕೆ ರಾಜಮೌಳಿ ಸಿನಿಮಾ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಿನಿಮಾ ವಿಶ್ಲೇಷಕ ಮನೋಬಾಲ ವಿಜಯಬಾಲನ್, "ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಒಂದು ವಾರಕ್ಕೆ ಆರ್ಆರ್ಆರ್ ಹಿಂದಿ ಅವತರಣಿಕೆ 1,83,60,000 ಗಂಟೆಗಳಷ್ಟು ವೀಕ್ಷಣೆ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಮೊದಲ ವಾರವೇ ಕೋಟಿಗಟ್ಟಲೇ ವೀಕ್ಷಣೆ ಪಡೆದ ಇಂಗ್ಲಿಷೇತರ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
#RRRMovie - Most watched non English film on Netflix. [Week 1]
— Manobala Vijayabalan (@ManobalaV) June 1, 2022
18,360,000 hrs
ಆರ್ಆರ್ಆರ್ ಚಿತ್ರದಲ್ಲಿ ಜೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ಕನ್ನಡ, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಚಿತ್ರ ತೆರೆಕಂಡಿದ್ದು, ಸದ್ಯ ನೆಟ್ಫ್ಲಿಕ್ಸ್ನಲ್ಲಿ ಚಿತ್ರದ ಹಿಂದಿ ಅವತರಣಿಕೆ ಲಭ್ಯವಿದೆ.