- ʼನಾಟು ನಾಟುʼ ನಾಮನಿರ್ದೇಶನಗೊಳ್ಳುತ್ತಲೇ ಸಂಭ್ರಮಿಸಿದ ಚಿತ್ರತಂಡ
- ಮಾರ್ಚ್ 12ಕ್ಕೆ ನಡೆಯಲಿದೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ
ಟಾಲಿವುಡ್ನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆಯ ʼಆರ್ಆರ್ಆರ್ʼ ಸಿನಿಮಾದ ʼನಾಟು ನಾಟುʼ ಹಾಡು 2023ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ನೇರ ನಾಮನಿರ್ದೇಶನಗೊಂಡಿದೆ.
ಲಾಸ್ ಎಂಜಲೀಸ್ನಲ್ಲಿರುವ ಪ್ರಸಿದ್ಧ ಡಾಲ್ಬಿ ಥಿಯೇಟರ್ನಲ್ಲಿ 95ನೇ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಹಾಲಿವುಡ್ ನಟ ಎಲಿಸನ್ ವಿಲಿಯಮ್ಸ್ ಮತ್ತು ಖ್ಯಾತ ನಿರ್ಮಾಪಕಿ ರಿಜ್ ಅಹ್ಮದ್ ನಾಮನಿರ್ದೇಶನ ಸಮಾರಂಭದ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದು, ನಾನಾ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಜಾಗತಿಕ ಸಿನಿಮಾಗಳು, ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿಯನ್ನು ಘೋಷಿಸಿದ್ದಾರೆ.
This year's Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023
ಈ ಬಾರಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ʼಆರ್ಆರ್ಆರ್ʼ ಚಿತ್ರದ ಜನಪ್ರಿಯ ʼನಾಟು ನಾಟುʼ ಹಾಡು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದು, ʼಟೆಲ್ ಇಟ್ ಲೈಕ್ ವುಮನ್ʼ ಚಿತ್ರದ ʼಅಪ್ಲೌಸ್ʼ, ʼಟಾಪ್ ಗನ್ ಮಾವೆರಿಕ್ʼ ಚಿತ್ರದ ʼಹೋಲ್ಡ್ ಮೈ ಹ್ಯಾಂಡ್ʼ, ʼಬ್ಲ್ಯಾಕ್ ಪ್ಯಾಂಥರ್; ವಕಾಂಡ ಫಾರೆವರ್ʼ ಸಿನಿಮಾದ ʼಲಿಫ್ಟ್ ಮಿ ಅಪ್ʼ, ʼಎವರಿ ಥಿಂಗ್ ಎವರಿವೇರ್ ಆಲ್ ಆಟ್ ಒನ್ಸ್ʼ ಚಿತ್ರದ ʼದಿಸ್ ಇಸ್ ಅ ಲೈಫ್ʼ ಸೇರಿ ಒಟ್ಟು ಚಿತ್ರಗಳ ಐದು ಜನಪ್ರಿಯ ಹಾಡುಗಳು ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿವೆ.
ಎಂಎಂ ಕೀರವಾಣಿ ಸಂಗೀತ ನಿರ್ದೇಶನವಿರುವ ʼನಾಟು ನಾಟುʼ ಹಾಡು ಈಗಾಗಲೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಹೀಗಾಗಿ ರಾಜಮೌಳಿ ಸಿನಿಮಾದ ಜನಪ್ರಿಯ ಹಾಡು ಈ ಬಾರಿ ಆಸ್ಕರ್ ಪ್ರಶಸ್ತಿಯನ್ನು ಕೂಡ ಗೆಲ್ಲಲಿದೆ ಎಂಬ ಭರವಸೆಯ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.
ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವ ʼನಾಟು ನಾಟುʼ ಹಾಡಿಗೆ ತೆಲುಗಿನ ಖ್ಯಾತ ಚಿತ್ರ ಸಾಹಿತಿ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ರಾಹುಲ್ ಸಿಪ್ಲಿಗಂಜ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯಲಿದ್ದು, 'ಆರ್ಆರ್ಆರ್' ಚಿತ್ರದ ಹಾಡಿಗೆ ಈ ಬಾರಿ ಆಸ್ಕರ್ ಪ್ರಶಸ್ತಿ ಒಲಿಯಲಿದೆಯೇ ಕಾದು ನೋಡಬೇಕಿದೆ.