
- ಕುರಿಗಾಹಿ ನಂಚಮ್ಮ ಅತ್ಯುತ್ತಮ ಹಿನ್ನೆಲೆ ಗಾಯಕಿ
- ತಮಿಳಿನ ಸ್ಟಾರ್ ನಟ ಸೂರ್ಯ ಅತ್ಯುತ್ತಮ ನಟ
ಕೆಲ ದಿನಗಳ ಹಿಂದಷ್ಟೇ 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆ ಮಾಡಲಾಗಿತ್ತು. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿದೆ. ಭಾರತೀಯ ಚಿತ್ರರಂಗದ ಗಣ್ಯರು ಮತ್ತು ಪ್ರಶಸ್ತಿಗೆ ಆಯ್ಕೆಯಾಗಿದ್ದ ಕಲಾವಿದರು ಹಾಗೂ ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದ್ದಾರೆ.
ಈ ಹಿಂದೆ ಘೋಷಣೆಯಾದಂತೆ ಸಾಗರ್ ಪುರಾಣಿಕ್ ನಿರ್ದೇಶನದ 'ಡೊಳ್ಳು' ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದ್ದು, ನಿರ್ದೇಶಕ ಸಾಗರ್ ಪುರಾಣಿಕ್ ರಜತ ಕಮಲ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ʼನಾದದ ನವನೀತʼ ʼಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರʼ ಪ್ರಶಸ್ತಿ ಗೆದ್ದುಕೊಂಡಿದೆ. ಸಂತೋಷ್ ಮಾಡಾ ನಿರ್ದೇಶನದ ʼಜೀಟಿಗೆʼ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ದಿವಂಗತ ನಟ ಸಂಚಾರಿ ವಿಜಯ್ ಅಭಿನಯದ ʼತಲೆದಂಡʼ ʼಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರʼ ಪ್ರಶಸ್ತಿಗೆ ಪಾತ್ರವಾಗಿದೆ.
ಬಾಲಿವುಡ್ನ ಸ್ಟಾರ್ ನಟ ಅಜಯ್ ದೇವಗನ್ ʼತಾನಾಜಿʼ ಚಿತ್ರಕ್ಕಾಗಿ ಮತ್ತು ತಮಿಳಿನ ಖ್ಯಾತ ನಟ ಸೂರ್ಯ ʼಸೂರರೈ ಪೊಟ್ರುʼ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ʼಸೂರರೈ ಪೊಟ್ರುʼ ಚಿತ್ರದಲ್ಲಿ ನಾಯಕಿಯ ಪಾತ್ರ ನಿಭಾಯಿಸಿದ್ದ ಅಪರ್ಣಾ ಬಾಲಮುರಳಿ ಅತ್ಯುತ್ತಮ ಪೋಷಕ ನಟಿ, ʼಅಯ್ಯಪ್ಪನುಮ್ ಕೋಶಿಯುಮ್ʼ ನಟನೆಗಾಗಿ ಬಿಜು ಮೆನನ್ ಅತ್ಯುತ್ತಮ ಪೋಷಕ ನಟ, ʼಶಿವರಂಜನಿಯುಂ ಇನ್ನುಂ ಸಿಲ ಪೆಂಗಳ್ಳುಂ ಚಿತ್ರದಲ್ಲಿನ ಪಾತ್ರ ನಿರ್ವಹಣೆಗಾಗಿ ಲಕ್ಷ್ಮಿಪ್ರಿಯ ಚಂದ್ರಮೌಳಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ʼಅಯ್ಯಪ್ಪನುಮ್ ಕೋಶಿಯುಮ್ʼ ಚಿತ್ರದ ಹಳ್ಳಿ ಸೊಬಗಿನ ಹಾಡಿಗೆ ಧ್ವನಿಯಾಗಿದ್ದ ಕುರಿಗಾಹಿ ಮಹಿಳೆ ನಂಚಮ್ಮ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸ್ವೀಕರಿಸಿದ್ದು ವಿಶೇಷ.
ಕಾರ್ಯಕ್ರಮದ ಕೊನೆಯಲ್ಲಿ ಬಾಲಿವುಡ್ನ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ʼದಾದಾ ಸಾಹೇಬ್ ಫಾಲ್ಕೆʼ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.