ಜನುಮದಿನ | ಮೆಕ್ಯಾನಿಕ್‌ ಆಗಿ ಸೆಟ್ಲ್ ಆಗಬೇಕೆಂದು ಬಯಸಿದ್ದ ರಾಜ್‌ ಬಿ ಶೆಟ್ಟಿ ನಿರ್ದೇಶಕನಾದ ಕತೆ

ಭಿನ್ನ ಕತೆಗಳು ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವ ರಾಜ್‌ ಬಿ ಶೆಟ್ಟಿ ಸಿನಿ ಪಯಣದ ಕಿರುನೋಟ
raj-b-shetty

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಇಂದು 32ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 'ಒಂದು ಮೊಟ್ಟೆಯ ಕತೆ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಜ್‌, ಭಿನ್ನ ಕತೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತ ಬಂದಿದ್ದಾರೆ. ಜನುಮದಿನದ ನೆಪದಲ್ಲಿ ರಾಜ್‌ ಬಿ ಶೆಟ್ಟರ ಸಿನಿ ಪಯಣದ ಕಿರುನೋಟ ಇಲ್ಲಿದೆ.

 1. 1987ರ ಜುಲೈ 5ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜನಿಸಿದ ರಾಜ್‌ ಬಿ ಶೆಟ್ಟಿ ಬಾಲ್ಯದ ದಿನಗಳಲ್ಲಿಯೇ ಕುಟುಂಬದೊಂದಿಗೆ ಮಂಗಳೂರಿಗೆ ಬರುತ್ತಾರೆ. 
 2. ವಿದ್ಯಾಭ್ಯಾಸದಲ್ಲಿ ಹೆಚ್ಚೇನೂ ಆಸಕ್ತಿ ಹೊಂದಿರದ ರಾಜ್‌ ಬಾಲ್ಯದಲ್ಲಿ ತಾವು ಗ್ಯಾರೇಜ್‌ ಮೆಕ್ಯಾನಿಕ್‌ ಆದರೆ ಸಾಕು ಎಂದುಕೊಂಡಿದ್ದರಂತೆ. ಆದರೆ, ಮಂಗಳೂರಿನ ರೋಷನಿ ನಿಲಯ ಸಮಾಜ ಸೇವಾ ಕಾಲೇಜಿನಿಂದ ಅವರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
 3. ಬಾಲ್ಯದಲ್ಲಿಯೇ ಭದ್ರಾವತಿ ತೊರೆದು ಕುಟುಂಬದೊಂದಿಗೆ ಮಂಗಳೂರಿಗೆ ಬಂದ ರಾಜ್‌ಗೆ ಮೊದ ಮೊದಲು ತುಳು ಅರ್ಥವಾಗುತ್ತಿರಲಿಲ್ಲ. ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಮನೆಯಲ್ಲಿ ಒಂಟಿಯಾಗಿರುತ್ತಿದ್ದ ರಾಜ್‌, ಪತ್ತೆದಾರಿ ಕಾದಂಬರಿಗಳನ್ನು ಓದತೊಡುಗುತ್ತಾರೆ.
 4. ಒಂಟಿತನದಿಂದ ಪಾರಾಗಲು ಪತ್ತೆದಾರಿ ಕತೆಗಳನ್ನು ಓದಲು ಪ್ರಾರಂಭಿಸುವ ಅವರು ಶಾಲಾ ದಿನಗಳಲ್ಲೇ ಕತೆಗಳನ್ನು ಬರೆಯಲು ಶುರು ಮಾಡುತ್ತಾರೆ. ಚಿಕ್ಕಂದಿನಲ್ಲಿ ಮೊದಲ ಬಾರಿ ತಾವು 100 ಪುಟದ ಪುಸ್ತಕದಲ್ಲಿ ಪತ್ತೆದಾರಿ ಕತೆ ಬರೆದು ಯಾರಿಗೂ ಕಾಣದಂತೆ ಮುಚ್ಚಿಟ್ಟ ಪ್ರಸಂಗವನ್ನು ರಾಜ್‌ ಇಂದಿಗೂ ಹಾಸ್ಯಮಯವಾಗಿ ನೆನೆಯುತ್ತಾರೆ.
 5. ಪದವಿಯ ದಿನಗಳಲ್ಲಿ ರಂಗಪ್ರವೇಶ ಮಾಡುವ ರಾಜ್‌ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ. ರೋಷನಿ ಕಾಲೇಜಿನಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ನಾಟಕ ಸ್ಪರ್ಧೆಯಲ್ಲಿ ರಾಜ್‌ ಪ್ರತಿಬಾರಿ ಅತ್ಯುತ್ತಮ ಪ್ರಶಸ್ತಿ ಗೆದ್ದುಕೊಳ್ಳುತ್ತಾರೆ. ಯಾರ ಮಾರ್ಗದರ್ಶನವೂ ಇಲ್ಲದೆ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದುದೇ ನಟನಾಗಲು ಸಹಕಾರಿಯಾಯಿತು ಎನ್ನುತ್ತಾರೆ. 
 6. ಕಾಲೇಜು ದಿನಗಳಲ್ಲಿ ಹಂಪನಕಟ್ಟೆಯ ಬಾರ್‌ ಒಂದರಲ್ಲಿ ವೇಟರ್‌ ಆಗಿ, ನಂತರ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡಿದ್ದ ರಾಜ್‌, ಕಾಲೇಜು ನಂತರದ ದಿನಗಳಲ್ಲಿ ಮಂಗಳೂರಿನ ಎಫ್‌ಎಂ ರೇಡಿಯೋ ವಾಹಿನಿ ಒಂದರಲ್ಲಿ ರೇಡಿಯೋ ಜಾಕಿ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 
 7. ಸಿನಿ ಬದುಕಿನ ಆರಂಭದಲ್ಲಿ ತುಳು ಚಿತ್ರರಂಗ ಪ್ರವೇಶಿಸಿದ ರಾಜ್‌, ಒಂದೆರೆಡು ತುಳು ಸಿನಿಮಾ ನಿರ್ದೇಶಿಸಿ ನಂತರ ಸಾಧ್ಯವಾದರೆ ಕನ್ನಡ ಸಿನಿಮಾಗಳನ್ನು ಮಾಡುವ ಬಗ್ಗೆ ಯೋಚಿಸಿದ್ದರಂತೆ. 3 ವರ್ಷಗಳ ಕಾಲ 5 ತುಳು ಚಿತ್ರಕಥೆಗಳನ್ನು ಬರೆದಿದ್ದ ರಾಜ್‌, ನಿರ್ಮಾಪಕರೊಬ್ಬರ ಜೊತೆಗೆ ಉಂಟಾದ ವೈಮನಸ್ಸಿನಿಂದ ತುಳು ಸಿನಿಮಾ ನಿರ್ದೇಶನ ಅರ್ಧಕ್ಕೆ ಬಿಟ್ಟು ಹೊರ ಬರುತ್ತಾರೆ.

ಒಂದು ಮೊಟ್ಟೆಯ ಕತೆ

 

2017ರಲ್ಲಿ ತೆರೆಕಂಡ ಒಂದು ಮೊಟ್ಟೆಯ ಕತೆ ಸಿನಿಮಾದ ಮೂಲಕ ರಾಜ್‌ ಬಿ ಶೆಟ್ಟಿ ಕನ್ನಡದ ಸಿನಿ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ. ʼಒಂದು ಮೊಟ್ಟೆಯ ಕತೆ ಬರೆದು, ನಿರ್ದೇಶಿಸಿ, ಕಥಾನಾಯಕನಾಗಿಯೂ ರಾಜ್‌ ಮಿಂಚಿದ್ದರು. ಆದರೆ, ಒಂದು ಮೊಟ್ಟೆಯ ಕತೆಯನ್ನು ರಾಜ್‌ ಶೆಟ್ಟರು ಬರೆದಿದ್ದು ಕಿರುಚಿತ್ರಕ್ಕಾಗಿ ಎಂಬುದು ಹಲವರಿಗೆ ತಿಳಿದಿಲ್ಲ. ದೊಡ್ಡ ಮಟ್ಟದ ಸಿನಿಮಾ ಮಾಡಲು ಬಂಡವಾಳದ ಕೊರತೆ ಎದುರಾದಾಗ ತಮ್ಮ ತಲೆಯಲ್ಲಿ ಕೂದಲಿಲ್ಲ ಎಂಬುದನ್ನೇ ಕಥಾವಸ್ತುವನ್ನಾಗಿಸಿ ರಾಜ್‌ ಶೆಟ್ಟರು ಒಂದು ಮೊಟ್ಟೆಯ ಕತೆ ಬರೆಯುತ್ತಾರೆ. ಕಿರುಚಿತ್ರ ಮಾಡಿದರೆ ಸಾಕು ಎಂದುಕೊಂಡಿದ್ದ ರಾಜ್‌, ನಿರ್ಮಾಪಕ ಸುಹಾನ್ ಪ್ರಸಾದ್‌ ಒಡನಾಟಕ್ಕೆ ಬರುತ್ತಾರೆ. ಚಿತ್ರದ ಕತೆ ಮೆಚ್ಚುವ ಸುಹಾನ್‌, ಕಿರುಚಿತ್ರದ ಬದಲು ಸಣ್ಣ ಬಜೆಟ್‌ನಲ್ಲಿ 'ಒಂದು ಮೊಟ್ಟೆಯ ಕತೆ' ಸಿನಿಮಾವನ್ನೇ ಮಾಡೋಣ ಎಂಬ ಸಲಹೆ ನೀಡುತ್ತಾರೆ. ಅಲ್ಲಿಂದ 'ಒಂದು ಮೊಟ್ಟೆಯ ಕತೆ' ಶುರುವಾಗುತ್ತದೆ. ಚಿಕ್ಕ ಬಜೆಟ್‌ ಆದ ಕಾರಣ ಚಿತ್ರದ ಕತೆ ಬರೆಯಲು ಸೂಕ್ತ ಸ್ಥಳವಿಲ್ಲದ್ದಕ್ಕೆ ಮಂಗಳೂರಿನ ಸುಲ್ತಾನ್‌ ಬತ್ತೇರಿ ಕಡಲ ತೀರದಲ್ಲಿ ದೋಣಿಯೊಂದರ ಕೆಳಗೆ ಕೂತು ಒಂದು ಮೊಟ್ಟೆಯ ಕತೆ ಬರೆದಿದ್ದನ್ನು ರಾಜ್‌ ಇಂದಿಗೂ ಮರೆತಿಲ್ಲ.     

 • ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಸೇರಿದಂತೆ ಭಾರತೀಯ ಚಿತ್ರರಂಗ ಖ್ಯಾತ ತಂತ್ರಜ್ಞರು, ಕಲಾವಿದರು ಮತ್ತು ಸಿನಿ ಪ್ರೇಕ್ಷಕರು ಒಂದು ಮೊಟ್ಟೆಯ ಕತೆ ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಸುಮಾರು 30 ಲಕ್ಷ ಬಂಡವಾಳದಲ್ಲಿ ಸಿದ್ಧಗೊಂಡಿದ್ದ ವಿಭಿನ್ನ ಕಥಾಹಂದರದ ಚಿತ್ರ ಎರಡೂವರೆ ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಈ ಚಿತ್ರದ ನಿರ್ದೇಶನಕ್ಕಾಗಿ ರಾಜ್‌ ಅವರಿಗೆ ಸೌತ್‌ ಫಿಲ್ಮ್‌ಫೇರ್‌ನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. 
 • 'ಒಂದು ಮೊಟ್ಟೆಯ ಕತೆ'ಯ ಬಳಿಕ ರಾಜ್‌ ಶೆಟ್ಟರು 'ಅಮ್ಮಚ್ಚಿಯೆಂಬ ನೆನಪು', 'ಮಹಿರ', 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಕಥಾ ಸಂಗಮ', 'ಮಾಯಾ ಬಜಾರ್‌' ಚಿತ್ರಗಳಲ್ಲಿ ನಟಿಸಿ ಕನ್ನಡದ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು.
 • ಇತ್ತೀಚೆಗೆ ರಾಜ್‌ ಶೆಟ್ಟರ ನಿರ್ದೇಶನದಲ್ಲಿ ಮೂಡಿಬಂದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಿರ್ದೇಶನದ ಜೊತೆಗೆ ರಾಜ್‌ ಶೆಟ್ಟಿ ಮುಖ್ಯಭೂಮಿಕೆಯನ್ನು ನಿಭಾಯಿಸಿ ಗೆದ್ದಿದ್ದರು. ಕರಾವಳಿಯ ಕಥಾಹಂದರ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತ್ತು. ಕನ್ನಡದ ಸ್ಟಾರ್‌ ನಟ ಸುದೀಪ್‌ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಗಣ್ಯರು ರಾಜ್‌ ಶೆಟ್ಟರ ನಿರ್ದೇಶನವನ್ನು ಕೊಂಡಾಡಿದ್ದರು.

 • ನಟನಾಗಿ, ನಿರ್ದೇಶಕನಾಗಿ ಜನಪ್ರಿಯತೆ ಗಳಿಸಿರುವ ರಾಜ್‌ ಶೆಟ್ಟಿ, ಹಿಟ್‌ ನಟ ಮತ್ತು ನಿರ್ದೇಶಕನಾಗಿ ಯಶಸ್ಸು ಕಂಡ ಬಳಿಕವೂ ಯಾವುದೇ ಹಿಂಜರಿಕೆ ಇಲ್ಲದೆ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ರಕ್ಷಿತ್‌ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾದಲ್ಲಿ ವೈದ್ಯನಾಗಿ, ಸುನಿಲ್‌ ರಾವ್‌ ಅಭಿನಯದ 'ತುರ್ತು ನಿರ್ಗಮನ' ಚಿತ್ರದಲ್ಲಿ ಕಾರು ಚಾಲಕನಾಗಿಯೂ ರಾಜ್‌ ಶೆಟ್ಟರು ಗಮನ ಸೆಳೆದಿದ್ದಾರೆ.
 • ಚಿತ್ರರಂಗದಲ್ಲಿ ದೊಟ್ಟ ಮಟ್ಟಿಗೆ ಹೆಸರು ಮಾಡಿದರೂ ತೀರಾ ಸಾಮಾನ್ಯರಂತೆ ಸರಳವಾಗಿ ಬದುಕುವ ರಾಜ್‌ ಶೆಟ್ಟಿ ಇಂದಿಗೂ ಮಂಗಳೂರಿನಿಂದ ತಮ್ಮ ವಾಸ್ತವ್ಯವನ್ನು ಬದಲಿಸಿಲ್ಲ. ಸಿನಿಮಾ ಕೆಲಸಗಳಿದ್ದಾಗ ಮಾತ್ರ ಮಂಗಳೂರಿನಿಂದ ಆಚೆ ಉಳಿಯುವ ಅವರು, ಬಾಕಿ ದಿನಗಳಲ್ಲಿ ತಮ್ಮ ಸ್ನೇಹಿತರ ಜೊತೆಗೆ ಮಂಗಳೂರಿನ ಕಡಲ ತೀರದಲ್ಲಿ ವಾಲಿಬಾಲ್‌, ಕ್ರಿಕೆಟ್‌ ಆಟವಾಡುತ್ತ, ಕತೆ ಬರೆಯುತ್ತ ದಿನ ಕಳೆಯುತ್ತಾರೆ. ಸಿನಿಮಾಗೆ ಬೇಕಿರುವುದು ಬದುಕಲ್ಲವೇ? ಬದುಕಿದಾಗ ಮಾತ್ರ ಕತೆ ಹುಟ್ಟಲು ಸಾಧ್ಯ ಎನ್ನುತ್ತ ತಮ್ಮ ಬೇರುಗಳ ಜೊತೆಗೆ ಬದುಕುವ ಕ್ರಮ ಕಂಡುಕೊಂಡಿದ್ದಾರೆ ರಾಜ್‌ ಶೆಟ್ಟಿ.

ಭಿನ್ನ ಕಥಾಹಂದರ ಮತ್ತು ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವ ರಾಜ್‌ ಶೆಟ್ಟರು ಹೀಗೆ ಹಮ್ಮು ಬಿಮ್ಮಿಲ್ಲದೆ ಕಲಾ ಸೇವೆಯನ್ನು ಮುಂದುವರೆಸಲಿ ಎಂದು ಹಾರೈಸೋಣ. 

ನಿಮಗೆ ಏನು ಅನ್ನಿಸ್ತು?
1 ವೋಟ್