ಹೊಯ್ಸಳ ಶೂಟಿಂಗ್‌ ಸೆಟ್‌ನಲ್ಲಿ ಪ್ರತ್ಯಕ್ಷವಾದ ರಮ್ಯಾ

Ramya
  • ಮತ್ತೆ ಬೆಳ್ಳಿ ತೆರೆಗೆ ಮರಳಲಿದ್ದಾರೆಯೇ ಮೋಹಕ ತಾರೆ?
  • '777 ಚಾರ್ಲಿ' ಚಿತ್ರಕ್ಕೂ ಶುಭ ಹಾರೈಸಿದ್ದ ನಟಿ ರಮ್ಯಾ

ಕಳೆದ ಕೆಲ ವರ್ಷಗಳಿಂದ ಬೆಳ್ಳಿ ಪರದೆಯಿಂದ ಅಂತರ ಕಾಯ್ದುಕೊಂಡಿದ್ದ ಮೋಹಕ ತಾರೆ ರಮ್ಯಾ ಇದೀಗ ಮತ್ತೆ ಸಿನಿಮಾ ಸೆಟ್‌ಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಕೆಲ ದಿನಗಳ ಹಿಂದೆ ʼ777 ಚಾರ್ಲಿʼ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದ ರಮ್ಯಾ, ಇದೀಗ ಹೊಯ್ಸಳ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಡಾಲಿ ಧನಂಜಯ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಭಾನುವಾರ ʼಹೊಯ್ಸಳʼ ಸೆಟ್‌ಗೆ ಭೇಟಿ ನೀಡಿರುವ ರಮ್ಯಾ ಚಿತ್ರತಂಡದೊಂದಿಗೆ ಆತ್ಮೀಯವಾಗಿ ಕಾಲ ಕಳೆದಿದ್ದಾರೆ. 

ಹೊಯ್ಸಳ ಸೆಟ್‌ಗೆ ಭೇಟಿ ನೀಡಿದ್ದ ವಿಡಿಯೋವನ್ನು ತಮ್ಮ ʼಇನ್‌ಸ್ಟಾಗ್ರಾಂʼ ಖಾತೆಯಲ್ಲಿ ಹಂಚಿಕೊಂಡಿರುವ ಅವರು, "ಈ ವಾರಾಂತ್ಯದಲ್ಲಿ ವಿಜಯ್ ಅವರು ನಿರ್ದೇಶಿಸುತ್ತಿರುವ ಹೊಯ್ಸಳ ಚಿತ್ರದ ಸೆಟ್‌ಗೆ ಭೇಟಿ ನೀಡಿದೆ. ಇಂಟೆನ್ಸ್ ಆ್ಯಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ. ಬಹಳ ಚೆನ್ನಾಗಿ ಮೂಡಿಬಂದಿವೆ" ಎಂದಿದ್ದಾರೆ.

ಚಾಕ್ಲೆಟ್ ಹಾಗೂ ಆಸಕ್ತಿದಾಯಕ ಮಾತುಕತೆ ಎರಡಕ್ಕೂ ನಟ ಧನಂಜಯ ಅವರಿಗೆ ಧನ್ಯವಾದ ತಿಳಿಸಿರುವ ರಮ್ಯಾ, "ನಿಮ್ಮನ್ನು ತೆರೆಯ ಮೇಲೆ ಪೊಲೀಸ್ ಪಾತ್ರದಲ್ಲಿ ನೋಡಲು ಬಹಳ ಕಾತುರಳಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ವೀಕೆಂಡ್ ಟೆಂಟ್ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್‌ ನಟನೆಯನ್ನು ಮೆಚ್ಚಿಕೊಂಡಿರುವ ಅವರು, ಅಮೃತಾ ಅತ್ಯುನ್ನತ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ಅರಸಿ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೆಟ್‌ಗೆ ಆಹ್ವಾನಿಸಿದ 'ಹೊಯ್ಸಳ' ಚಿತ್ರದ ನಿರ್ಮಾಪಕರಾದ ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಅವರಿಗೆ ರಮ್ಯಾ ಧನ್ಯವಾದ ತಿಳಿಸಿದ್ದು, 2023ರಲ್ಲಿ ತಾವು ಎದುರು ನೋಡಬಯಸುವ ಚಿತ್ರ ʼಹೊಯ್ಸಳʼ ಎಂದು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ರಮ್ಯಾ ಮತ್ತೆ ಸಿನಿಮಾ ಕ್ಷೇತ್ರದ ಕಡೆಗೆ ಒಲವು ತೋರುತ್ತಿದ್ದು, ನಟನೆಗೆ ಮರಳುವ ತಯಾರಿಯಲ್ಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್