ಪವಿತ್ರಾ ಲೋಕೇಶ್‌ ಪ್ರಕರಣ | ಮಾಧ್ಯಮಗಳು ಸಮಾಜಕ್ಕೆ ಪೂರಕವಾಗದೆ ಮಾರಕವಾಗಿವೆ; ನಿರ್ದೇಶಕ ಜಯತೀರ್ಥ

jayateertha

ಬಹುಭಾಷಾ ನಟಿ ಪವಿತ್ರ ಲೋಕೇಶ್‌ ಖಾಸಗಿ ಬದುಕಿನ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಲ್ಲೆಡೆ ಪವಿತ್ರ ಅವರನ್ನು ಖಳನಾಯಕಿ ಎಂಬಂತೆ ಬಿಂಬಿಸಲಾಗುತ್ತಿದೆ. ನಟಿಯ ಖಾಸಗಿ ಬದುಕನ್ನು ಬಲವಂತವಾಗಿ ಬೀದಿಗೆಳೆದು ತಮಾ‍‍‍‍‍ಷೆ ನೋಡುತ್ತಿರುವ ಮಾಧ್ಯಮಗಳು ಮತ್ತು ಸಂವೇದನೆ ಕಳೆದುಕೊಂಡ ಜನರ ಬಗ್ಗೆ ಕನ್ನಡದ ಖ್ಯಾತ ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ.

ಪುರುಷ ಪ್ರಧಾನ ಸಮಾಜ ಮತ್ತು ಚಿಕಿತ್ಸಕ ಗುಣವನ್ನೇ ಮರೆತ ಮಾಧ್ಯಮಗಳು ಹೆಣ್ಣಿನ ಖಾಸಗಿತನದ ಮೇಲೆ ನಡೆಸುವ ಪ್ರಹಾರ, ಮಹಿಳೆಯರ ವೈಯಕ್ತಿಕ ಬದುಕಿನ ಮೇಲೆ ನಡೆಸುವ ದಾಳಿಯ ಕುರಿತು ಪರಿಣಾಮಕಾರಿ ಕಥಾಹಂದರವುಳ್ಳ "ಬ್ಯೂಟಿಫುಲ್‌ ಮನಸ್ಸುಗಳು" ಚಿತ್ರವನ್ನು ನಿರ್ದೇಶಿಸಿದ್ದ ಜಯತೀರ್ಥ ಪವಿತ್ರ ಲೋಕೇಶ್‌ ಪ್ರಕರಣದಲ್ಲಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಈದಿನ.ಕಾಮ್‌ ಜೊತೆಗೆ ಮಾತನಾಡಿರುವ ಜಯತೀರ್ಥ, "ನನಗೆ ಪವಿತ್ರಾ ಲೋಕೇಶ್‌ ಅವರ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಸಮಾಜ, ಮಾಧ್ಯಮ ಎಲ್ಲವನ್ನೂ ಪಕ್ಕಕ್ಕಿಟ್ಟು ಒಂದು ಕುಟುಂಬವನ್ನು ಉದಾಹರಣೆಯಾಗಿ ಇರಿಸಿ ಮಾತಾಡೋಣ. ಒಂದು ಕುಟುಂಬದಲ್ಲಿ ಮಕ್ಕಳ ಎದುರಿಗೆ ಅವರ ತಂದೆಯ ಯೌವ್ವನದ ಪ್ರೇಮ ಪುರಾಣಗಳ ಬಗ್ಗೆಯೋ ಅಥವಾ ಆತ ಹೊಂದಿದ್ದ ಸಂಬಂಧಗಳ ಬಗ್ಗೆಯೋ ಮಾತನಾಡಿದರೆ ನಮ್ಮಪ್ಪ  'ಭಲೇ ರಸಿಕ' ಎನ್ನುವಂತೆ ತಮಾಷೆಯಾಡುತ್ತಾರೆ. ಆದರೆ, ಅದೇ ನಿಮ್ಮ ತಾಯಿ ಯೌವ್ವನದಲ್ಲಿ ಬೇರೆಯವರ ಪ್ರೀತಿಯಲ್ಲಿದ್ದಳು ಅಥವಾ ಸಂಬಂಧ ಹೊಂದಿದ್ದಳು ಎಂದರೆ ಮರುಕ್ಷಣವೇ ಆ ಮಕ್ಕಳ ಕಣ್ಣಲ್ಲಿ ಆಕೆ ಅಪರಾಧಿ ಆಗಿ ಬಿಡುತ್ತಾಳೆ" ಎಂದು ಜನರ ಮನಸ್ಥಿತಿಯ ಬಗ್ಗೆ ವಿವರಿಸಿದರು.

ಇಂತಹ ವಿಕೃತ ಮನಸ್ಸುಗಳಿಂದಲೇ ಸಮಾಜ ತುಂಬಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, "ಬೇರೆಯವರ ಬದುಕಿನ ಖಾಸಗಿ ವಿಚಾರಗಳು, ವಿಶೇಷವಾಗಿ ಹೆಣ್ಣುಮಕ್ಕಳ ವಿಷಯ ಆದರಂತೂ ಜನ ಮುಗಿಬಿದ್ದು ನೋಡುತ್ತಾರೆ. ಇಂತಹ ವಿಚಾರಗಳನ್ನು ಪದೇಪದೆ ತೋರಿಸುವುದು ಮಾಧ್ಯಮಗಳದ್ದೇ ತಪ್ಪು ಎಂದು ಅದೆಷ್ಟು ಬಾರಿ ಬೈಯುತ್ತ ಕೂರೋಕೆ ಸಾಧ್ಯ ಹೇಳಿ? ಮಾಧ್ಯಮ ಉದ್ಯಮವಾಗಿ ಬದಲಾಗಿ ಬಹಳ ದಿನಗಳಾಗಿದೆ. ಸಮಾಜಕ್ಕೆ ಪೂರಕವಾಗಿರಬೇಕಿದ್ದ ಮಾಧ್ಯಮ ಮಾರಕವಾಗಿ ಪರಿಣಮಿಸಿದೆ. ಜನ ಯಾವುದನ್ನು ಹೆಚ್ಚಾಗಿ ನೋಡುತ್ತಾರೋ, ನಾವು ಕೂಡ ಅದನ್ನೇ ನೀಡುತ್ತೇವೆ. 'ವಿ ಆರ್‌ ಹಿಯರ್‌ ಫಾರ್‌ ಬ್ಯುಸಿನೆಸ್‌ ನಾಟ್‌ ಫಾರ್‌ ಸರ್ವೀಸ್‌' ಎಂದು ಪತ್ರರ್ಕತರೇ ಘಂಟಾಘೋಷವಾಗಿ ಹೇಳುವ ಸ್ಥಿತಿಗೆ ನಾವೆಲ್ಲ ಬಂದು ನಿಂತಾಗಿದೆ" ಎಂದರು.

ಈ ಸುದ್ದಿ ಓದಿದ್ದೀರಾ? ಮಹಿಳಾ ನ್ಯಾಯ | ಹೆಣ್ಣಿನ ಬದುಕು- ಬವಣೆಗಳನ್ನೇ ಬಂಡವಾಳವಾಗಿಸಿಕೊಂಡ ಮಾಧ್ಯಮಗಳು

"ನಮ್ಮ ನಮ್ಮ ಮನೆಗಳಲ್ಲೇ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ ಎಂದಾಗ ಹೆಣ್ಣಿನ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಎಷ್ಟು ಸರಿ? ಈ ವಿಚಾರಗಳು ವರ್ಷಗಳ ಹಿಂದೆ ನನ್ನನ್ನು ಬಹುವಾಗಿ ಕಾಡಿದ್ದರಿಂದಲೇ ʼಬ್ಯೂಟಿಫುಲ್‌ ಮನಸ್ಸುಗಳುʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಆ ಚಿತ್ರದ ಮೂಲಕ ಹೆಣ್ಣಿನ ಮೇಲಿನ ದೌರ್ಜನ್ಯ ಮತ್ತು ಮಾಧ್ಯಮಗಳ ಹೊಣೆಗೇಡಿತನ ಬೆತ್ತಲು ಮಾಡುವ ಪ್ರಯತ್ನ ಮಾಡಿದ್ದೆ.  ಅದೇ ರೀತಿ ಪವಿತ್ರಾ ಅವರಾಗಲಿ ಬೇರೆ ಯಾರೇ ಆಗಲಿ ಅವರವರ ಇಷ್ಟಕ್ಕೆ ತಕ್ಕಂತೆ ಬದುಕುತ್ತಿರುವಾಗ ಅವರುಗಳ ಖಾಸಗಿ ಬದುಕನ್ನು ಕೆದಕುವ ಹಕ್ಕು ಇವರಿಗೇನಿದೆ" ಎಂದು ಪ್ರಶ್ನಿಸಿದರು.

Image
Beautiful Manasugalu

"ಜನ ನೋಡುತ್ತಾರೆ ಎಂಬ ಕಾರಣಕ್ಕೆ ಸುದ್ದಿ ಮಾಡುತ್ತೇವೆ ಎನ್ನುವ ಮಾಧ್ಯಮಗಳು, ಪದೆ ಪದೆ ಅದೇ ಸುದ್ದಿಯನ್ನು ಮಾಧ್ಯಮಗಳು ತೋರಿಸುತ್ತವೆ ಎಂದು ಗೊಣಗುತ್ತ ಮತ್ತದೇ ಸುದ್ದಿಗಳನ್ನು ನೋಡಿ ಸಂಭ್ರಮಿಸುವ ಜನರು. ಈ ಮನಸ್ಥಿತಿಗಳು ಬದಲಾಗುವವರೆಗೂ ನಮ್ಮ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಲು ಸಾಧ್ಯವಿಲ್ಲ. ಬದಲಾವಣೆ ಪ್ರತಿ ಮನೆಗಳಿಂದ ಶುರುವಾಗಬೇಕು" ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್