
'ಸಿದ್ಲಿಂಗು', 'ನೀರ್ದೋಸೆ'ಯಂತಹ ಹಾಸ್ಯಪ್ರಧಾನ ಚಿತ್ರಗಳ ಮೂಲಕ ಕನ್ನಡದ ಸಿನಿ ಪ್ರೇಕ್ಷಕರಿಗೆ ಹೊಸ ಅಲೆಯ ಸಿನಿಮಾಗಳನ್ನು ಪರಿಚಯಿಸಿದ, ಹದಭರಿತ ತೆಳು ಹಾಸ್ಯದ ಜೊತೆಗೆ ಗಂಭೀರ ವಿಚಾರಗಳನ್ನು ತೆರೆಗೆ ದಾಟಿಸುವಲ್ಲಿ ಯಶಸ್ವಿಯಾದ ನಿರ್ದೇಶಕ ವಿಜಯ್ ಪ್ರಸಾದ್ ಇದೀಗ ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಆಕ್ಷನ್ ಕಟ್ ಹೇಳಿರುವ ಸತೀಶ್ ನಿನಾಸಂ ಮುಖ್ಯಭೂಮಿಕೆಯ 'ಪೆಟ್ರೋಮ್ಯಾಕ್ಸ್' ಜುಲೈ 15ರಂದು ತೆರೆಗೆ ಬರುತ್ತಿದೆ. ಪೆಟ್ರೋಮ್ಯಾಕ್ಸ್ ಮತ್ತು ಸಿನಿ ಪ್ರಯೋಗಗಳ ಕುರಿತು ವಿಜಯ್ ಪ್ರಸಾದ್ ಮನದ ಮಾತು.
'ಪೆಟ್ರೋಮ್ಯಾಕ್ಸ್' ಟ್ರೈಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ...
ಹೌದು, ನಮ್ಮ ಚಿತ್ರದ ಟ್ರೈಲರ್ ಅನ್ನು ಜನ ಮೆಚ್ಚಿಕೊಳ್ತಿದ್ದಾರೆ. ಈ ಹಿಂದೆ ನಾನು ನಿರ್ದೇಶಿಸಿದ್ದ 'ಸಿದ್ಲಿಂಗು' ಮತ್ತು 'ನೀರ್ದೋಸೆ' ಚಿತ್ರಗಳನ್ನು ನೋಡಿದವರಿಗೆ ನಾವು ಮಾಡುವ ಚೇಷ್ಟೆಗಳು ಗೊತ್ತಿರುತ್ತೆ. ಹಾಗಾಗಿ 'ಪೆಟ್ರೋಮ್ಯಾಕ್ಸ್' ಟ್ರೈಲರ್ ಜನಕ್ಕೆ ಇಷ್ಟವಾಗುತ್ತಿದೆ. ನಾವು ಬರೀ ಚೇಷ್ಟೆ ಮಾಡುವವರಲ್ಲ. ಹಾಸ್ಯದ ಹಿಂದೆಯೂ ಗಾಢವಾದ ಕಥೆ ಹೇಳುವ ಪ್ರಯತ್ನವಿದೆ. ಟ್ರೈಲರ್ನ ಶುರುವಿನಲ್ಲಿ ಚೇಷ್ಟೆಯ ಮಾತುಗಳಿದ್ದರೂ ಕೂಡ ನಂತರ ತೀರ ಗಂಭೀರವಾದ ವಿಚಾರಗಳು ಚರ್ಚೆಗೆ ಬರುತ್ತವೆ. ನಾಯಕ, ನಾಯಕಿ ಇಬ್ಬರೂ ಅಶ್ಲೀಲತೆ ಅಂದರೆ ಯಾವುದು ಎಂದು ಚರ್ಚಿಸುವ ಸನ್ನಿವೇಶವನ್ನು ದೇವಸ್ಥಾನದಲ್ಲೂ ಚಿತ್ರೀಕರಿಸಬಹುದಿತ್ತು. ಆ ಎರಡು ಪಾತ್ರಗಳನ್ನು ಕೂರಿಸಿ, ನಿಲ್ಲಿಸಿ ಯಾವ ರೀತಿಯಲ್ಲಾದರೂ ಆ ಮಾತುಗಳನ್ನು ಆಡಿಸಬಹುದಿತ್ತು. ಆದರೆ, ಗಂಡು ಹೆಣ್ಣಿನ ಮಿಲನದ ಸಮಯದಲ್ಲೂ ವಿಚಾರಗಳು ಗಾಢವಾಗಿ, ಪರಿಶುದ್ಧವಾಗಿರುತ್ತದೆ ಎಂಬುದನ್ನು ತೀವ್ರವಾಗಿ ಹೇಳುವ ಅಗತ್ಯವಿದೆ. ಅದೇ ಕಾರಣಕ್ಕೆ ನಾಲ್ಕು ಗೋಡೆಗಳ ಸನ್ನಿವೇಶವೊಂದನ್ನು ಸೃಷ್ಟಿ ಮಾಡುವ ಪ್ರಯತ್ನ ಮಾಡಿದ್ದೇನೆ.
'ಪೆಟ್ರೋಮ್ಯಾಕ್ಸ್ 'ಶೀರ್ಷಿಕೆ ಹುಟ್ಟಿದ್ದು ಹೇಗೆ?
ನನ್ನ ಪ್ರಕಾರ 'ಪೆಟ್ರೋಮ್ಯಾಕ್ಸ್' ಅಂದರೆ ಬದುಕು ಮತ್ತು ಬೆಳಕು ಅಂತ. ಎರಡು ದೃಷ್ಟಿಯಿಂದ 'ಪೆಟ್ರೋಮ್ಯಾಕ್ಸ್' ಶೀರ್ಷಿಕೆ ಹುಟ್ಟಿಕೊಂಡಿತು. ನಮ್ಮ ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಎಷ್ಟು ಪ್ರಾಮುಖ್ಯತೆ ನೀಡಿದ್ದೇವೆಯೋ ಅಷ್ಟೇ ಪ್ರಾಮುಖ್ಯತೆ ಪೆಟ್ರೋಮ್ಯಾಕ್ಸಿಗೂ ಇದೆ. ಚಿತ್ರದುದ್ದಕ್ಕೂ 'ಪೆಟ್ರೋಮ್ಯಾಕ್ಸ್' ಒಂದು ಪಾತ್ರದಂತೆ ಸಾಗುತ್ತದೆ. ಚಿತ್ರಕ್ಕೆ 'ಪೆಟ್ರೋಮ್ಯಾಕ್ಸ್' ಎಂದು ಹೆಸರಿಡಲು ಇದು ಕೂಡ ಒಂದು ಮುಖ್ಯ ಕಾರಣ. ಮತ್ತೊಂದು ಕಾರಣ ಅಂದರೆ, ಸುಮಾರು ಜನ 'ಪೆಟ್ರೋಮ್ಯಾಕ್ಸ್' ಅಂದಕೂಡಲೇ ಲೈಂಗಿಕ ಕಾರ್ಯಕರ್ತೆಯರು ಎಂದುಕೊಳ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯವಿದೆ. ಇದೇ ಶೀರ್ಷಿಕೆಯನ್ನಿಟ್ಟುಕೊಂಡು ಬದುಕು ಮತ್ತು ಬೆಳಕಿನ ಕತೆ ಹೇಳಬೇಕು ಎಂಬುದೇ ನಮ್ಮ ಪ್ರಯತ್ನ. 'ಪೆಟ್ರೋಮ್ಯಾಕ್ಸ್' ವಿಭಿನ್ನ ಶೀರ್ಷಿಕೆಯಾದ ಕಾರಣ ಎಲ್ಲರನ್ನೂ ಸೆಳೆಯುತ್ತದೆ ಎಂಬುದು ಒಂದು ಕಾರಣವಾಗಿತ್ತು.
'ಪೆಟ್ರೋಮ್ಯಾಕ್ಸ್' ಪ್ರಚಾರ ಭಿನ್ನವಾಗಿ ನಡೀತಿದೆ... ಇದು ಯಾರ ಪ್ಲಾನ್?
ನಮ್ಮ ಚಿತ್ರ ವಾಸ್ತವಕ್ಕೆ ಹತ್ತಿರವಾದ ಪಾತ್ರಗಳಿಂದಲೇ ಕೂಡಿದೆ. ಸ್ವಿಗ್ಗಿ ಡೆಲಿವರಿ ಹುಡುಗರು, ತರಕಾರಿ ಮಾರುವವರು ಹೀಗೆ ಹಲವರು ನಮ್ಮ ನಿತ್ಯದ ಬದುಕಿನ ಭಾಗವಾಗಿರುತ್ತಾರೆ. ಜನ ಆ ಪಾತ್ರಗಳನ್ನು ತೆರೆಯ ಮೇಲೆ ನೋಡಿದ ಕೂಡಲೇ ಇದು ನಮ್ಮಲ್ಲೇ ಒಬ್ಬರ ಕತೆ ಎನ್ನಿಸುವುದು ಅಗತ್ಯ. ಅದಕ್ಕಾಗಿಯೇ ಸತೀಶ್ ಅವರು ಚಿತ್ರದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್ ಹೇಗಿದ್ದರೂ ಸಿನಿಮಾದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆದ್ದರಿಂದ ಅದೇ ಪಾತ್ರವನ್ನು ಚಿತ್ರದ ಪ್ರಚಾರಕ್ಕೂ ಬಳಸಲು ಯೋಚಿಸಿದೆವು. ಅದರಂತೆ ಪ್ರಚಾರ ಕೂಡ ನಡೀತಿದೆ ಜನ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ಟ್ರೈಲರ್ ಬಳಿಕ ಯಾವ ರೀತಿ ಪ್ರತಿಕ್ರಿಯೆಗಳು ಬರುತ್ತಿವೆ?
ಟ್ರೈಲರ್ ತುಂಬಾ ಬೋಲ್ಡ್ ಆಗಿದೆ ಅಂತ ಹೇಳ್ತಿದ್ದಾರೆ. ಹೆಚ್ಚು ಚೇಷ್ಟೆಯ ಮಾತುಗಳಿವೆ ಅಂತ ಹಲವು ಮಂದಿ ಹೇಳಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಚಿತ್ರ ಗಾಢವಾದ ಕತೆ ಒಳಗೊಂಡಿದೆ ಎಂಬ ಅಭಿಪ್ರಾಯ ಬಳಹಷ್ಟು ಜನರಲ್ಲಿದೆ. ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಂತೂ ಮೂಡಿದೆ. ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ವೀಕ್ಷಿಸುವ ಪ್ರತಿಯೊಬ್ಬರಿಗೂ ಒಂದೊಳ್ಳೆ ಅನುಭವ ಸಿಗುವುದರಲ್ಲಿ ಅನುಮಾನವಿಲ್ಲ.
ತೆಳು ಹಾಸ್ಯದ ಮೂಲಕ ಗಂಭೀರ ವಿಚಾರಗಳನ್ನು ದಾಟಿಸುವುದು ಸವಾಲು ಅನ್ನಿಸುವುದಿಲ್ಲವೇ?
ಕಲೆ ಮತ್ತು ವ್ಯಾಪಾರ ಎರಡು ದೃಷ್ಟಿಗಳನ್ನು ಇಟ್ಟುಕೊಂಡು ನಾನು ಹಾಸ್ಯದ ಮೂಲಕ ವಿಚಾರಗಳನ್ನು ದಾಟಿಸುವ ಪ್ರಯತ್ನಕ್ಕೆ ಕೈ ಹಾಕುತ್ತೇನೆ. ಕಲೆ ಮತ್ತು ವ್ಯಾಪಾರ ರೈಲು ಕಂಬಿಗಳಿದ್ದ ಹಾಗೆ ಎರಡೂ ಒಂದನ್ನೊಂದು ಕೂಡುವುದಿಲ್ಲ. ನಮ್ಮ ಸಿನಿಮಾಗೆ ಬಂಡವಾಳ ಹಾಕಿದ ನಿರ್ಮಾಪಕರಿಗೆ ನಷ್ಟವಾಗದಂತೆಯೂ ನೋಡಿಕೊಳ್ಳಬೇಕು. ಈ ಸಿನಿಮಾ ಗೆದ್ದರೆ ಮಾತ್ರ ಮತ್ತೊಬ್ಬ ನಿರ್ಮಾಪಕ ನಮ್ಮ ಮುಂದಿನ ಸಿನಿಮಾಗೆ ಹಣ ಹಾಕಲು ಮುಂದೆ ಬರ್ತಾರೆ. ಸಿನಿಮಾ, ಜನರ ಪಾಲಿಗೆ ಒಂದೊಳ್ಳೆಯ ಮನರಂಜನೆಯ ಮಾಧ್ಯಮ. ಹಾಸ್ಯ ಮತ್ತು ಮನರಂಜನೆಯ ಮೂಲಕ ನೀವು ಎಂತಹ ಗಂಭೀರ ವಿಚಾರಗಳನ್ನು ಹೇಳಿದರೂ ಜನ ಸ್ವೀಕಾರ ಮಾಡುತ್ತಾರೆ ಎಂಬುದು ನನ್ನ ಬಲವಾದ ನಂಬಿಕೆ. ಮನರಂಜನೆ ಇಲ್ಲದೆ ಒಂದು ವಿಚಾರವನ್ನು ಕೇವಲ ನೀವು ಗಾಂಭೀರ್ಯತೆಯಿಂದ ಹೇಳಲು ಹೊರಟರೆ 10 ಜನಕ್ಕೆ ತಲುಪಬೇಕಾದ ಕತೆ 4 ಜನಕ್ಕೆ ತಲುಪುತ್ತೆ. ಯಾಕೆಂದರೆ ಒಬ್ಬೊಬ್ಬರದ್ದು ಅಭಿರುಚಿಗಳು ಬೇರೆಯಲ್ಲವೇ. ಒಬ್ಬರಿಗೆ ಗಂಭೀರವಾಗಿ ಹೇಳಿದರೆ ಹಿಡಿಸದೆ ಇರಬಹುದು. ಅದನ್ನೇ ಹಾಸ್ಯಮಯವಾಗಿ ಹೇಳಿದಾಗ ಅವರೇ ಅದೇ ಕತೆಯನ್ನು ಇಷ್ಟಪಡಬಹುದು. ಹಾಸ್ಯವನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ನಾನು ತೆರೆಗೆ ದಾಟಿಸಬೇಕು ಎಂದುಕೊಳ್ಳುವ ವಿಚಾರ ಮತ್ತು ಕತೆಗಳನ್ನು ಹಾಸ್ಯದೊಂದಿಗೆ ಬೆರೆಸಿ ಹೇಳುವ ಪ್ರಯತ್ನ ಮಾಡುತ್ತೇನೆ. ಗಂಭೀರ ವಿಚಾರಗಳನ್ನು ಹಾಸ್ಯದ ಜೊತೆ ಹೇಳಲು ಹೊರಟಾಗ ಎಡವಟ್ಟಾಗುವ ಸಾಧ್ಯತೆಗಳೂ ಇರುತ್ತದೆ. ಅದಕ್ಕಾಗಿಯೇ ಕತೆ ಮತ್ತು ಸಿನಿಮಾ ವಿಚಾರದಲ್ಲಿ ನಾನು ಏಕಾಏಕಿಯಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕತೆ ಮತ್ತು ಚಿತ್ರಕಥೆ ಬರೆಯುವ ಹಂತದಿಂದಲೇ ನಿರೂಪಣೆಯ ಬಗ್ಗೆ ಸಾಕಷ್ಟು ನಿಗಾ ವಹಿಸುತ್ತೇನೆ. ಚಿತ್ರಕಥೆ ಸಿದ್ಧವಾದ ಬಳಿಕ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರಿಗೆ ಕತೆಯ ಪ್ರತಿ ಓದಲು ಕೊಡುತ್ತೇನೆ. ನಂತರ ಎಲ್ಲರ ಅಭಿಪ್ರಾಯಗಳನ್ನು ಪಡೆದು ಚಿತ್ರೀಕರಣ ಪ್ರಾರಂಭಿಸುತ್ತೇನೆ.
'ನೀರ್ದೋಸೆ' ಯಶಸ್ಸಿನ ನಂತರ ಬದುಕು ಹೇಗಿದೆ?
ಬದುಕಿನ ಅಸಲಿ ಪ್ರಯಾಣ ಈಗ ಶುರುವಾಗಿದೆ. ಮೊದಲೆಲ್ಲ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದೆ. ಆದರೆ, ಈಗ ಬದುಕಿನಲ್ಲಿ ಬದಲಾವಣೆ ಬಂದಿದೆ. ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ತಿದ್ದವನು ಈಗ ಒಂದು ವರ್ಷಕ್ಕೆ ಮೂರು ಮೂರು ಸಿನಿಮಾ ಮಾಡ್ತಿದ್ದೀನಿ. ಎಲ್ಲಾ ಅಂದುಕೊಂಡ ಹಾಗೆ ನಡೆದರೆ ಇದೇ ವರ್ಷ ನಾನು ನಿರ್ದೇಶಿಸಿದ ಮೂರು ಸಿನಿಮಾಗಳು ಬಿಡುಗಡೆಯಾಗಲಿದೆ. ಈಗ 'ಪೆಟ್ರೋಮ್ಯಾಕ್ಸ್' ಬಿಡುಗಡೆಯಾಗುತ್ತಿದೆ. ಇದೇ ವರ್ಷ 'ತೋತಾಪುರಿ ಪಾರ್ಟ್-1' ಮತ್ತು 'ಪಾರ್ಟ್ 2' ಸಿನಿಮಾಗಳು ಕೂಡ ತೆರೆಗೆ ಬರಲಿದೆ.
ಹಾಸ್ಯದ ಹೊರತಾದ ಪ್ರಯೋಗಗಳಲ್ಲೂ ವಿಜಯ್ ಪ್ರಸಾದ್ ಅವರನ್ನು ಕಾಣಬಹುದೇ?
ಖಂಡಿತವಾಗಿಯೂ ಬೇರೆ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವ ಯೋಚನೆಗಳಿವೆ. ಸದ್ಯ ಕತೆ ಹೇಳುವ ಕನಸಿನ ಜೊತೆಗೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯೂ ನನಗಿದೆ. ಅದಕ್ಕಾಗಿ ಹಾಸ್ಯದ ಜೊತೆಗೆ ಕತೆ ಹೇಳುವ ಪ್ರಯತ್ನದಲ್ಲಿದ್ದೇನೆ. ಈಗ ಜನ ನೋಡುತ್ತಿರೋದು ನಿಜವಾದ ವಿಜಯ್ ಪ್ರಸಾದ್ನನ್ನಲ್ಲ. ನನಗೆ ಹಾಸ್ಯದಾಚೆಗೂ ಕತೆ ಹೇಳುವ ಹಂಬಲವಿದೆ. ನನ್ನಲ್ಲಿನ ಕತೆಗಾರ ಇನ್ನೂ ಸಂಪೂರ್ಣವಾಗಿ ಜನರಿಗೆ ಪರಿಚಯವಾಗಿಲ್ಲ. ಬೇರೆ ಬೇರೆ ಆಯಾಮಗಳ ಕತೆಗಳನ್ನು ತೆರೆಗೆ ತರುವ ಕನಸಿದೆ. ಕ್ರೈಂ ಅಥವಾ ಆ್ಯಕ್ಷನ್ ಸಿನಿಮಾಗಳು ಅಥವಾ ಅನಿಮೇಟೆಡ್ ಸಿನಿಮಾಗಳನ್ನು ಮಾಡುವ ಯೋಚನೆಯಿದೆ. ಆ ರೀತಿಯ ಕತೆಗಳು ಕೂಡ ನನ್ನ ಬಳಿ ಇದ್ದಾವೆ. ಮುಂದಿನ ದಿನಗಳಲ್ಲಿ ಯಾರಾದರೂ ನಿರ್ಮಾಪಕರು ಮುಂದೆ ಬಂದರೆ ಖಂಡಿತವಾಗಿಯೂ ಬೇರೆ ರೀತಿಯ ಚಿತ್ರಗಳನ್ನು ಮಾಡುತ್ತೇನೆ.
ಸದ್ಯ ನಿಮ್ಮ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?
'ಪೆಟ್ರೋಮ್ಯಾಕ್ಸ್', ತೋತಾಪುರಿ' ಸಿನಿಮಾಗಳು ತೆರೆಗೆ ಸಿದ್ಧವಾಗಿದೆ. ಹಾಸ್ಯ ಪ್ರಧಾನವಾದ ಪರಿಮಳ ಲಾಡ್ಜ್ ಇನ್ನೇನೂ ಸೆಟ್ಟೇರಬೇಕಿದೆ. ಅದನ್ನು ಬಿಟ್ಟರೆ ಒಂದು ಕ್ರೈ ಕಥಾಹಂದರದ ಸಿನಿಮಾ ಮಾಡುತ್ತಿದ್ದೇನೆ. ಮತ್ತೊಂದು ಆ್ಯಕ್ಷನ್ ಚಿತ್ರದಲ್ಲೂ ತೊಡಗಿಸಿಕೊಂಡಿದ್ದೇನೆ.