
ಝೀರೊ ಸಿನಿಮಾದ ಸೋಲಿನ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ 4 ವರ್ಷಗಳ ಕಾಲ ಬೆಳ್ಳಿ ಪರದೆಯಿಂದ ಅಂತರ ಕಾಯ್ದುಕೊಂಡಿದ್ದರು. ಪಠಾನ್ ಚಿತ್ರದ ಮೂಲಕ ಮತ್ತೆ ನಟನೆಯತ್ತ ಮುಖ ಮಾಡಿರುವ ಶಾರುಖ್, ಇದೀಗ ಮತ್ತೊಂದು ಚಿತ್ರವನ್ನು ಘೋಷಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಹೊಸ ಸಿನಿಮಾ ಘೋಷಿಸಿರುವ ಶಾರುಖ್, "ಪ್ರೀತಿಯ ರಾಜ್ಕುಮಾರ್ ಹಿರಾನಿ ಸರ್, ನೀವು ನನ್ನ ಪಾಲಿಗೆ ʼಸಾಂತಾಕ್ಲೌಸ್ʼ ಇದ್ದಂತೆ. ನೀವು ಸಿನಿಮಾದ ಶೂಟಿಂಗ್ ಶುರು ಮಾಡಿಕೊಳ್ಳಿ. ನಾನು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹಾಜರಾಗುತ್ತೇನೆ. ಇನ್ಮುಂದೆ ನಾನು ಶೂಟಿಂಗ್ ಸೆಟ್ನಲ್ಲಿಯೇ ಉಳಿದು ಬಿಡ್ತೀನಿ ಅನ್ನಿಸುತ್ತೆ. ನಿಮ್ಮ ಜೊತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. 2023ರ ಡಿಸೆಂಬರ್ 22 ಚಿತ್ರಮಂದಿರಗಳಲ್ಲಿ ನಮ್ಮ ʼಡಂಕಿʼ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಿ" ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
Dear @RajkumarHirani sir, Aap toh Mere Santa Claus nikle. Aap shuru karo main time pe pahunch jaunga. actually main toh set par hi rehne lagunga. Feeling humbled & excited to finally work with you.Bringing to you all #Dunki in cinemas on 22nd December 2023https://t.co/KIqj8LfJEg
— Shah Rukh Khan (@iamsrk) April 19, 2022
ʼಮುನ್ನಾಭಾಯ್ ಎಂ.ಬಿ.ಬಿಎಸ್ʼ, ʼ3 ಇಡಿಯಟ್ಸ್ʼ, ʼಪಿ.ಕೆʼ ಮತ್ತು ʼಸಂಜುʼ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿರುವ ಬಾಲಿವುಡ್ನ ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ಶಾರುಖ್ ಖಾನ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ʼಡಂಕಿʼ ಸಿನಿಮಾವನ್ನು ಚಿತ್ರತಂಡ ವಿಭಿನ್ನವಾಗಿ ಘೋಷಿಸಿದೆ. ರಾಜ್ಕುಮಾರ್ ಹಿರಾನಿ ನಿರ್ದೇಶನದ ಚಿತ್ರದಲ್ಲಿ ಶಾರುಖ್ ಮೊದಲ ಬಾರಿಗೆ ನಟಿಸುತ್ತಿರುವ ಬಗ್ಗೆ ವಿಶೇಷ ವಿಡಿಯೋ ಮಾಡಿರುವ ಚಿತ್ರತಂಡ ಇಬ್ಬರ ನಡುವಣ ಸಂಭಾಷಣೆಯ ವಿಡಿಯೋವನ್ನು ಬಿಡುಗಡೆ ಮಾಡಿ ಸಿನಿಮಾವನ್ನು ಘೋಷಣೆ ಮಾಡಿದೆ.
ಈ ಹಿಂದೆ ರಾಜ್ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸೂಪರ್ ಹಿಟ್ ಚಿತ್ರಗಳನ್ನು ನೋಡಿ ಸಿನಿ ಲೋಕಕ್ಕೆ ತಾವು ಹೊಸಬರು ಎಂಬಂತೆ ಬೆರಗಾಗುವ ಶಾರುಖ್, "ನನಗೆ ಹೊಂದುವಂತಹ ಯಾವುದಾದರೂ ಕತೆ ನಿಮ್ಮ ಬಳಿ ಇದೆಯಾ ಸರ್" ಎಂದು ನಿರ್ದೇಶಕರನ್ನು ಕೇಳುತ್ತಾರೆ.
ಇದಕ್ಕೆ ಸಕಾರಾತ್ಮಕವಾಗಿ ಉತ್ತರಿಸುವ ನಿರ್ದೇಶಕರು "ನಿಮಗಾಗಿ ಒಂದು ಕತೆ ಮಾಡಿದ್ದೇನೆ" ಎನ್ನುತ್ತಾರೆ. ಈ ಮಾತು ಕೇಳಿ ಖುಷಿಯಾಗುವ ಶಾರುಖ್, "ಸರ್ ನಿಮ್ಮ ಸಿನಿಮಾದಲ್ಲಿ ʼಕಾಮಿಡಿ, ಎಮೋಶನ್ ಮತ್ತು ರೊಮ್ಯಾನ್ಸ್ʼ ಎಲ್ಲಾ ಇದೆಯಲ್ಲವೇ" ಎಂದು ಮರು ಪ್ರಶ್ನಿಸುತ್ತಾರೆ.
ಇದಕ್ಕೆ ಪ್ರತಿಯಾಗಿ ಉತ್ತರಿಸುವ ನಿರ್ದೇಶಕರು, "ಸಿನಿಮಾದಲ್ಲಿ ಹಾಸ್ಯ, ಭಾವುಕತೆ ಮತ್ತು ರೋಮ್ಯಾನ್ಸಿಗೆ ಯಾವುದೇ ಭರವಿಲ್ಲ. ಆದರೆ, ನಿಮ್ಮ ಜನಪ್ರಿಯ ರೋಮ್ಯಾನ್ಸ್ ಶೈಲಿಗೆ ಕತ್ತರಿ ಹಾಕಿದ್ದೇನೆ ಎನ್ನುತ್ತಾರೆ.
ನಿರ್ದೇಶಕರು ಹೀಗನ್ನುತ್ತಲೇ ಶಾರುಖ್ ಸಿನಿಮಾ ಹೆಸರು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ನಿರ್ದೇಶಕರು ಸಿನಿಮಾದ ಹೆಸರು "ಡಂಕಿ" ಎನ್ನುತ್ತಾರೆ. ಸಿನಿಮಾ ಹೆಸರು ಕೇಳಿ ವಿಚಲಿತರಾಗುವ ಶಾರುಖ್, ಸಿನಿಮಾದ ಹೆಸರನ್ನು ʼಡಾಂಕಿʼ (ಕತ್ತೆ) ಎಂದು ಇಟ್ಟೀದ್ದೀರಾ ಎಂದು ಕೇಳುತ್ತಾರೆ.
ನಟನ ಮಾತಿಗೆ ನಗುತ್ತ ಉತ್ತರಿಸುವ ನಿರ್ದೇಶಕರು ʼಡಾಂಕಿʼ ಅಲ್ಲ ಶಾರುಖ್ ಅದು ʼಡಂಕಿʼ ಎಂದು ಸ್ಪಷ್ಟ ಪಡಿಸುತ್ತ ಅಲ್ಲಿಂದ ಹೊರಡುತ್ತಾರೆ. ಅದಾದ ಬಳಿಕವೂ ಸಿನಿಮಾ ಶಿರ್ಷೀಕೆ ವಿಚಾರದಲ್ಲಿ ಗೊಂದಲದಲ್ಲಿಯೇ ಉಳಿಯುವ ಶಾರುಖ್, "ಅದೇನು ಸಿನಿಮಾ ಮಾಡ್ತಿದ್ದಾರೋ ಏನೋ ಒಟ್ಟಿನಲ್ಲಿ ಈ ಅವಕಾಶ ಬಿಡೋದು ಬೇಡ" ಎಂದು ಒಳಗೊಳಗೆ ಖುಷಿ ಪಡುತ್ತ ಹೊರಡುತ್ತಾರೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಡಂಕಿʼ ಸಿನಿಮಾದಲ್ಲಿ ಶಾರುಖ್ ಖಾನ್ಗೆ ನಟಿ ತಾಪ್ಸಿ ಪನ್ನು ಜೊತೆಯಾಗಲಿದ್ದಾರೆ. ಚಿತ್ರಕ್ಕೆ ಗೌರಿ ಖಾನ್ ಬಂಡವಾಳ ಹೂಡಿದ್ದು ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಚಾಲ್ತಿಯಲ್ಲಿದೆ.