ಮುಂಗಡ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ʻಪಠಾಣ್‌ʼ

pathaan
  • ಬಿಡುಗಡೆಗೂ ಮೊದಲೇ ₹15 ಕೋಟಿ ವ್ಯವಹಾರ ಮಾಡಿದ ಪಠಾಣ್‌
  • ʼವಾರ್‌ʼ ದಾಖಲೆಯನ್ನು ಹಿಂದಿಕ್ಕಿದ ಶಾರುಖ್‌ ಸಿನಿಮಾ

ಬಾಲಿವುಡ್‌ನ ಸ್ಟಾರ್‌ ನಟ ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ 'ಪಠಾಣ್‌' ಸಿನಿಮಾ ತೆರೆಗೆ ಬರಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್‌ ಪ್ರಕ್ರಿಯೆ ಆರಂಭಗೊಂಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಶಾರುಖ್‌ ಖಾನ್‌ ಸಿನಿಮಾ ಹೊಸ ದಾಖಲೆ ನಿರ್ಮಿಸಿದೆ.

'ಪಠಾಣ್‌' ಸಿನಿಮಾದ ಮುಂಗಡ ಬುಕ್ಕಿಂಗ್‌ ಪ್ರಕ್ರಿಯೆ ಆರಂಭವಾದ ದಿನದಿಂದ ಈವರೆಗೆ ದೇಶಾದ್ಯಂತ ಬರೋಬ್ಬರಿ ಮೊದಲ ದಿನ ಶೋಗಳ 4 ಲಕ್ಷ 19 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಬಾಲಿವುಡ್‌ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್‌ ಆದರ್ಶ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ʼಪಿವಿಆರ್‌ʼನಲ್ಲಿ 1 ಲಕ್ಷ 70 ಸಾವಿರ ಟಿಕೆಟ್‌ಗಳು ಮಾರಾಟವಾಗಿದ್ದು, ʼಐನಾಕ್ಸ್‌ʼನಲ್ಲಿ 1 ಲಕ್ಷ 44 ಸಾವಿರ ಟಿಕೆಟ್‌ಗಳು ಬಿಕರಿಯಾಗಿವೆ. ʼಸಿನಿಪೊಲೀಸ್‌ʼನಲ್ಲಿ 77 ಸಾವಿರ ಟಿಕೆಟ್‌ಗಳು ಮಾರಾಟಗೊಂಡಿವೆ. ʼಪಿವಿಆರ್‌ʼ, ʼಐನಾಕ್ಸ್‌ʼ ಮತ್ತು ʼಸಿನಿಪೊಲೀಸ್‌ʼನಲ್ಲಿ ಒಟ್ಟು 3 ಲಕ್ಷ 91 ಸಾವಿರ ಟಿಕೆಟ್‌ಗಳು ಮಾರಾಟವಾಗಿದ್ದು, ʼಬುಕ್‌ ಮೈ ಶೋʼ ಮತ್ತು ʼಪೇಟಿಎಂʼ ಮೂಲಕ ದೇಶದ ವಿವಿಧ ಭಾಗದ ಚಿತ್ರಮಂದಿರಗಳಲ್ಲಿ ಉಳಿದ ಒಂದೂವರೆ ಲಕ್ಷಕ್ಕೂ ಅಧಿಕ ಟಿಕೆಟ್‌ಗಳನ್ನು ಶಾರುಖ್‌ ಅಭಿಮಾನಿಗಳು ಕಾಯ್ದಿರಿಸಿದ್ದಾರೆ.

ಆಕ್ಷನ್‌ ಕಥಾಹಂದರವುಳ್ಳ 'ಪಠಾಣ್‌' ಸಿನಿಮಾ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆ ಕಾಣುತ್ತಿದ್ದು, ವಿದೇಶಗಳಲ್ಲೇ ಎರಡೂವರೆ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಬಿಡುಗಡೆಗೂ ಮೊದಲೇ ಮುಂಗಡ ಪ್ರಕ್ರಿಯೆಯಿಂದ ಚಿತ್ರ ₹15 ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ ಎನ್ನಲಾಗಿದೆ.

ಮುಂಗಡ ಬುಕ್ಕಿಂಗ್‌ನಲ್ಲಿ ಮೊದಲ ದಿನದ 4 ಲಕ್ಷ 19 ಸಾವಿರ ಟಿಕೆಟ್‌ಗಳು ಮಾರಾಟವಾಗುವ ಮೂಲಕ 'ಪಠಾಣ್‌' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಭಾರತೀಯ ಸಿನಿಮಾಗಳ ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ದಾಖಲೆ ಬರೆದ ಚಿತ್ರಗಳ ಪೈಕಿ ರಾಜಮೌಳಿ ನಿರ್ದೇಶನದ ʼಬಾಹುಬಲಿ 2ʼ ಸಿನಿಮಾ ಮೊದಲ ಸ್ಥಾನದಲ್ಲಿದೆ. ಚಿತ್ರದ ಹಿಂದಿ ಅವತರಣಿಕೆಯ ಮೊದಲ ದಿನದ ಶೋಗಳ 6 ಲಕ್ಷ 50 ಸಾವಿರ ಮುಂಗಡ ಟಿಕೆಟ್‌ಗಳು ಮಾರಾಟವಾಗಿದ್ದವು. ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ಮುಖ್ಯಭೂಮಿಕೆಯ ʼಕೆಜಿಎಫ್‌- 2ʼ ಸಿನಿಮಾ ಎರಡನೇ ಸ್ಥಾನದಲ್ಲಿದ್ದು, ಈ ಸಿನಿಮಾದ 5 ಲಕ್ಷ 15 ಸಾವಿರ ಮುಂಗಡ ಟಿಕೆಟ್‌ಗಳು ಮಾರಾಟಗೊಂಡಿದ್ದವು. ಹೃತಿಕ್‌ ರೋಶನ್‌ ಮತ್ತು ಟೈಗರ್‌ ಶ್ರಾಫ್‌ ಮುಖ್ಯಭೂಮಿಕೆಯಲ್ಲಿ ತೆರೆಗೆ ಬಂದಿದ್ದ ʼವಾರ್‌ʼ ಸಿನಿಮಾ ಈವರೆಗೆ ಮೂರನೇ ಸ್ಥಾನದಲ್ಲಿತ್ತು. ಈ ಸಿನಿಮಾದ 4 ಲಕ್ಷ 10 ಮುಂಗಡ ಟಿಕೆಟ್‌ಗಳು ಬಿಕರಿಯಾಗಿದ್ದವು. ಇದೀಗ 'ಪಠಾಣ್‌' ಸಿನಿಮಾದ 4 ಲಕ್ಷ 19 ಸಾವಿರ ಮುಂಗಡ ಟಿಕೆಟ್‌ಗಳು ಮಾರಾಟವಾಗಿದ್ದು, ಬುಕ್ಕಿಂಗ್‌ ಪ್ರಕ್ರಿಯೆಯಲ್ಲಿ ʼವಾರ್‌ʼ ಸಿನಿಮಾವನ್ನು ಹಿಂದಿಕ್ಕಿರುವ 'ಪಠಾಣ್‌' ಮೂರನೇ ಸ್ಥಾನಕ್ಕೇರಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app