ಬಿಡುಗಡೆಗೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ 'ಪಠಾಣ್'

pathaan
  • ಸಿನಿಮಾ ವೀಕ್ಷಣೆ ವೇಳೆ ವಿಡಿಯೋ ಸೆರೆಹಿಡಿಯದಂತೆ ಮನವಿ
  • 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾದ 'ಪಠಾಣ್'

ಬಾಲಿವುಡ್‌‌ನ ಸ್ಟಾರ್ ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಪಠಾಣ್' ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ, 'ಪಠಾಣ್' ತೆರೆ ಕಾಣುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ಇದೀಗ ಹೊರ ಬಿದ್ದಿದೆ.

'ಪಠಾಣ್' ಚಿತ್ರಮಂದಿರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಹಿಂದಿನ ದಿನವೇ, ಅಂದರೆ ಜನವರಿ 24ರ ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಸಂಪೂರ್ಣ ವಿಡಿಯೋ ಸೋರಿಕೆಯಾಗಿದೆ.

'ಫಿಲ್ಲಿಜಿಲ್ಲಾ' ಮತ್ತು 'ಫಿಲ್ಮಿ4ವ್ಯಾಪ್' ಎಂಬ ಎರಡು ಅನಧಿಕೃತ ಜಾಲತಾಣಗಳಲ್ಲಿ ಥಿಯೇಟರ್‌ನಲ್ಲಿ ಸೆರೆ ಹಿಡಿಯಲಾಗಿರುವ ಚಿತ್ರದ ವಿಡಿಯೋವನ್ನು ಅಕ್ರಮವಾಗಿ ಹಂಚಿಕೊಳ್ಳಲಾಗಿದೆ.

'ಪಠಾಣ್' ಚಿತ್ರಕ್ಕೆ ಬಂಡವಾಳ ಹೂಡಿರುವ ಯಶ್‌‌ರಾಜ್ ಫಿಲಂಸ್ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲು ಪೈರಸಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿತ್ತು. ಆದರೂ, ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ.

ಈ ಹಿನ್ನೆಲೆ ಟ್ವೀಟ್ ಮಾಡುವ ಮೂಲಕ ಪ್ರೇಕ್ಷಕರ ಬಳಿ ಮನವಿ ಮಾಡಿಕೊಂಡಿರುವ ಚಿತ್ರತಂಡ, "ಯಾರು ಕೂಡ 'ಪಠಾಣ್' ಸಿನಿಮಾ ವೀಕ್ಷಣೆಯ ವೇಳೆ ದೃಶ್ಯಗಳನ್ನು ಸೆರೆಹಿಡಿಯಬೇಡಿ. ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ನೋಡುಗರ ಈ ರೀತಿ ಮಾಡುವುದರಿಂದ ಚಿತ್ರದ ಮೇಲೆ ಪರಿಣಾಮ ಬೀರುತ್ತದೆ. ಪೈರಸಿ ತಡೆಗಟ್ಟಲು ಸಹಕರಿಸಿ" ಮನವಿ ಮಾಡಿದೆ.

ಸಿದ್ಧಾರ್ಥ ಆನಂದ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ಕಾಣಿಸಿಕೊಂಡಿದ್ದು, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿದ್ಧಗೊಂಡಿರುವ ಈ ಸಿನಿಮಾ, ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app