ಈ ಸಿನಿಮಾ | ಭೋರ್ಗರೆವ ಪ್ರೀತಿಯ ಕಡಲು ಈ ʻಲವ್‌ 360ʼ

ʻಶಾರ್ಟ್‌ ಟರ್ಮ್‌ ಮೆಮೊರಿ ಲಾಸ್‌ʼ ಎಳೆಯನ್ನು ಇಟ್ಟುಕೊಂಡು ಇಡೀ ಸಿನಿಮಾದುದ್ದಕ್ಕೂ ಮುಗ್ಧ ಪ್ರೇಮಕತೆಯನ್ನು ಹೇಳುವ ಶಶಾಂಕ್‌ ಅವರ ನಿರೂಪಣೆ ಇಷ್ಟವಾಗುತ್ತದೆ.
love360

ಚಿತ್ರ: ಲವ್‌ 360 | ನಿರ್ದೇಶನ: ಶಶಾಂಕ್‌ | ತಾರಾಗಣ: ಪ್ರವೀಣ್‌ ಕುಮಾರ್‌, ರಚನಾ ಇಂದರ್‌, ಗೋಪಾಲ ಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಸುಕನ್ಯಾ ಗಿರೀಶ್‌ | ಭಾಷೆ: ಕನ್ನಡ | ಸಂಗೀತ ನಿರ್ದೇಶನ : ಅರ್ಜುನ್‌ ಜನ್ಯ | ನಿರ್ಮಾಪಕ : ಶಶಾಂಕ್‌ |

ʼಮೊಗ್ಗಿನ ಮನಸ್ಸುʼ, ʼಕೃಷ್ಣನ್‌ ಲವ್‌ ಸ್ಟೋರಿʼ, ʼಬಚ್ಚನ್‌ʼ, ʼಮುಂಗಾರು ಮಳೆ 2ʼನಂತಹ ʼರೋಮ್ಯಾಂಟಿಕ್‌ ಲವ್‌ಸ್ಟೋರಿʼಗಳ ಮೂಲಕ ಕನ್ನಡದ ಸಿನಿ ಪ್ರೇಕ್ಷಕರನ್ನು ಸೆಳೆದಿದ್ದ ನಿರ್ದೇಶಕ ಶಶಾಂಕ್‌, ಈ ಬಾರಿ ʼಲವ್‌ 360ʼ ಎಂಬ ಮತ್ತೊಂದು ಮುಗ್ಧ ಪ್ರೇಮಕತೆಯೊಂದಿಗೆ ಪ್ರೇಕ್ಷಕರನ್ನು ಎದುರುಗೊಂಡಿದ್ದಾರೆ.

ʼಲವ್‌ 360ʼ ಒಂದು ಮುಗ್ಧ ಪ್ರೇಮಕತೆ ಎನ್ನಬಹುದು. ಯಾವುದೇ ಕೌಟುಂಬಿಕ ಹಿನ್ನೆಲೆ ಇಲ್ಲದ ಇಬ್ಬರು ಅನಾಥರ ಪ್ರೇಮ ಕಥೆ ಈ ಚಿತ್ರದಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ಅನಾಥಶ್ರಮದಲ್ಲಿ ಪರಿಚಯವಾಗುವ ಜಾನಕಿ ಮತ್ತು ರಾಮ ಜೊತೆಯಾಗಿ ಬದುಕುವ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಜಾನಕಿಗೆ ಚಿಕ್ಕಂದಿನಿಂದಲೂ ಅಂಟಿಕೊಂಡಿರುವ ʼಶಾರ್ಟ್‌ ಟರ್ಮ್‌ ಮೆಮೊರಿ ಲಾಸ್‌ʼ (ಮರೆವಿನ ಕಾಯಿಲೆ) ಕಾಯಿಲೆ ಈ ಇಬ್ಬರೂ ಮುಗ್ಧ ಪ್ರೇಮಿಗಳಿಗೆ ಸವಾಲಾಗಿ ಪರಿಣಮಿಸುತ್ತದೆ. ಈ ಕ್ಷಣಕ್ಕೆ ನಡೆದದ್ದನ್ನು ಮರು ಕ್ಷಣಕ್ಕೆ ಮರೆತು ಹೋಗುವ ಜಾನಕಿ ಆಕಸ್ಮಿಕವಾಗಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾಳೆ. ಒಳಿತು, ಕೆಡುಕುಗಳ ಅರಿವೇ ಇಲ್ಲದ ತನ್ನ ಪ್ರೇಯಸಿಯನ್ನು ಉಳಿಸಿಕೊಳ್ಳಲು ಕಾನೂನು ಹೋರಾಟಕ್ಕೆ ನಿಲ್ಲುವ ರಾಮ, ತನ್ನ ಪ್ರೇಯಸಿಯನ್ನು ಉಳಿಸಿಕೊಳ್ಳುತ್ತಾನೆಯೇ ಎಂಬುವುದೇ ಚಿತ್ರದ ಒನ್‌ ಲೈನ್‌ ಸ್ಟೋರಿ. 

ನಿರ್ದೇಶಕರು ಈ ಚಿತ್ರದಲ್ಲಿ ʼಶಾರ್ಟ್‌ ಟರ್ಮ್‌ ಮೆಮೊರಿ ಲಾಸ್‌ʼ ಕಾಯಿಲೆಯಿಂದ ಬಳಲುವ ಪಾತ್ರವನ್ನಿಟ್ಟುಕೊಂಡು ಅಸಹಾಯಕರು, ದುರ್ಬಲರನ್ನು ಸಮಾಜ ಹೇಗೆಲ್ಲ ನೋಡುತ್ತದೆ. ಸುಂದರ ಬದುಕಿನ ಕನಸು ಕಾಣುವ ಆಸೆ ಕಂಗಳಲ್ಲಿ ಆಗಾಗ ಮಿಂಚಿ ಮರೆಯಾಗುವ ಅಭದ್ರತೆಯನ್ನು ನಿರ್ದೇಶಕರು ಮನಮಟ್ಟುವಂತೆ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ವೀಕೆಂಡ್ ಟೆಂಟ್ | ಈ ವಾರ ನೋಡಬಹುದಾದ ಸಿನಿಮಾ ಮತ್ತು ವೆಬ್ ಸರಣಿಗಳು

ರಕ್ಷಕರು ಎನ್ನಿಸಿಕೊಂಡ ಪೊಲೀಸರು ಭಕ್ಷಕರಾಗಿಬಿಟ್ಟರೆ ಜನ ಸಾಮಾನ್ಯರ ನೆಮ್ಮದಿಯ ಬದುಕಲ್ಲಿ ಬಿರುಗಾಳಿಯೇ ಏಳುತ್ತದೆ ಎನ್ನುವ ನಿರ್ದೇಶಕರು. ಮುಗ್ಧ ಪ್ರೀತಿಗೆ ಕಡು ಕ್ರೂರಿ, ಲಂಚಬಾಕನಲ್ಲೂ ಅಳಿದುಳಿದ ಮಾನವೀಯತೆಯನ್ನು ಬಡಿದೆಬ್ಬಿಸುವ ಶಕ್ತಿ ಇದೆ ಎಂದು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ʼಶಾರ್ಟ್‌ ಮೆಮೊರಿ ಲಾಸ್‌ʼ ಎಳೆಯನ್ನು ಇಟ್ಟುಕೊಂಡು ಇಡೀ ಸಿನಿಮಾದುದ್ದಕ್ಕೂ ಮುಗ್ಧ ಪ್ರೇಮಕತೆಯನ್ನು ಹೇಳುವ ಶಶಾಂಕ್‌ ಅವರ ನಿರೂಪಣೆ ಇಷ್ಟವಾಗುತ್ತದೆ. ಮೊದಲಾರ್ಧ ಸ್ವಲ್ಪ ನಿಧಾನ ಎನ್ನಿಸಿದರೂ ʼಇಂಟರ್‌ವಲ್‌ʼ ಬಳಿಕ ಸಿನಿಮಾ ರೋಚಕತೆಗೆ ತಿರುಗುತ್ತದೆ. ಒಂದೊಳ್ಳೆಯ ಸಿನಿಮಾ ಕೊಟ್ಟ ನಿರ್ದೇಶಕರಿಗೆ ಅಭಿನಂದನೆ.

ಆದರೆ, ಈ ಚಿತ್ರದಲ್ಲಿ ಲಾರಿ ಚಾಲಕನ ಪಾತ್ರವನ್ನು ಹೆಣ್ಣುಬಾಕ, ಕಿರಾತಕ ಎಂಬಂತೆ ತೋರಿಸಿದ್ದು ಹಿಡಿಸಲಿಲ್ಲ. ಚಾಲಕರು, ಅದರಲ್ಲೂ ಲಾರಿ ಚಾಲಕರುಗಳು ಎಂದ ಕೂಡಲೇ ಅನುಮಾನದ ಕಣ್ಣಿಂದ, ಅಸಹ್ಯ ನೋಟ ಬೀರುವ ಈ ಸಮಾಜದ ಎದುರು ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕೀಳಾಗಿ ತೋರಿಸುವುದನ್ನು, ಅವರು ಮನುಷ್ಯರಾಗಲು ಲಾಯಕ್ಕೇ ಅಲ್ಲ ಎಂಬಂತೆ ಬಿಂಬಿಸುವುದನ್ನು ಇನ್ನಾದರೂ ಬಿಡಿ.

ರಾಮನ ಪಾತ್ರ ನಿಭಾಯಿಸಿರುವ ಪ್ರವೀಣ್‌ ಕುಮಾರ್‌ ಯುವ ಪ್ರತಿಭೆ. ಪ್ರವೀಣ್‌ಗೆ ಇದು ಚೊಚ್ಚಲ ಚಿತ್ರ. ಆದರೆ, ಅವರು ಪಾತ್ರಕ್ಕಾಗಿ ನಡೆಸಿರುವ ಕಸರತ್ತು ತೆರೆಯ ಮೇಲೆ ಎದ್ದು ಕಾಣುತ್ತದೆ. ರಾಮನಾಗಿ ಪ್ರವೀಣ್‌ ಹಿಡಿಸುತ್ತಾರೆ. ಲವ್‌ ಮಾಕ್‌ಟೈಲ್‌, ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗಳಲ್ಲಿ ಮಾತಿನಮಲ್ಲಿಯಾಗಿ ಗಮನ ಸೆಳೆದಿದ್ದ ರಚನಾ ಇಂದರ್‌ ಲವ್‌ 360ಯಲ್ಲಿ ತಮ್ಮ ಇನ್ನೊಂದು ಮುಖವನ್ನು ಪರಿಚಯಿಸಿದ್ದಾರೆ. ಮುಗ್ಧ ಜಾನಕಿಯಾಗಿ ರಚನಾ ಕಾಡುತ್ತಾರೆ. ಪುಟ್ಟಗೌರಿ ಖ್ಯಾತಿಯ ಗೋಪಾಲ ಕೃಷ್ಣ ದೇಶಪಾಂಡೆ ಅವರ ನಟನೆ ಮತ್ತು ಅವರಾಡುವ ಉತ್ತರ ಕರ್ನಾಟಕದ ಭಾಷೆ ಎರಡೂ ಮುಖ್ಯ ಪಾತ್ರಧಾರಿಗಳಿಗೂ ಪೈಪೋಟಿ ಕೊಡುವಂತದ್ದು. ಈ ಚಿತ್ರದಲ್ಲಿ ವಿಭಾ ಎನ್ನುವ ಪಾತ್ರದ ತಂದೆ ಮತ್ತು ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಇಬ್ಬರ ನಟನೆ ಆ ಪಾತ್ರಗಳ ಪ್ರಾಮುಖ್ಯತೆಯನ್ನೇ ನೀರುಪಾಲು ಮಾಡಿದೆ ಎನ್ನಬಹುದು. ಈ ಎರಡು ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವಾಗ ನಿರ್ದೇಶಕರು ಎಚ್ಚರ ವಹಿಸಬೇಕಿತ್ತು. 

ಚಿತ್ರಕಥೆಯಂತೆ ಹಿನ್ನೆಲೆ ಸಂಗೀತ ಮತ್ತು ಮೆಲೋಡಿ ಹಾಡುಗಳು ಕೂಡ ಈ ಚಿತ್ರದ ʼಪ್ಲಸ್‌ ಪಾಯಿಂಟ್‌ʼ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ, ಶ್ರಿವಲ್ಲಿ ಖ್ಯಾತಿಯ ಗಾಯಕ ಸಿದ್‌ ಶ್ರೀರಾಮ್‌ ಕಂಠಸಿರಿಯಲ್ಲಿ ಮೂಡಿ ಬಂದಿರುವ ʼಜಗವೇ ನೀನು ಗೆಳತಿಯೇ..ʼ, ʼಭೋರ್ಗರೆದು ಕೇಳಿದೆ ಕಡಲು..ʼ ಹಾಡುಗಳು ಸಿನಿಮಾ ಬಿಡುಗಡೆಯಾಗುವ ಮೊದಲೇ ದೊಟ್ಟ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದವು. ಚಿತ್ರಕಥೆಗೆ ಪೂರಕವಾಗಿ ಸಾಗುವ ಹಿನ್ನೆಲೆ ಸಂಗೀತ ನೋಡುಗರನ್ನು ಸೆಳೆಯುತ್ತದೆ.

ಲವ್‌ 360ಯನ್ನು ಖಂಡಿತವಾಗಿಯೂ ಒಮ್ಮೆ ನೋಡಬಹುದು. ಸಾಧ್ಯವಾದರೆ ಈ ಸಿನಿಮಾವನ್ನು ನಿಮ್ಮ ಸ್ನೇಹಿತರ ಜೊತೆಗೊ ಅಥವಾ ಪ್ರೀತಿಪಾತ್ರರ ಜೊತೆಗೂ ಕೂತು ನೋಡಿ, ಹಿಡಿಸಬಹುದು.        

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180