
- 28 ದಿನಗಳ ಕಾಲ ನಡೆದ ಮೊದಲ ಹಂತದ ಚಿತ್ರೀಕರಣ
- ಚಿತ್ರಕ್ಕಾಗಿ ಮಿನರ್ವ ಮಿಲ್ನಲ್ಲಿ 15 ಬಗೆಯ ಸೆಟ್ಗಳ ನಿರ್ಮಾಣ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ ʼಘೋಸ್ಟ್ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿರುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ʼಟೋಪಿವಾಲʼ, ʼಓಲ್ಡ್ ಮಾಂಕ್ʼ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಶ್ರೀನಿ 'ಘೋಸ್ಟ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಮೊದಲ ಹಂತದ ಚಿತ್ರೀಕರಣ 28 ದಿನಗಳ ಕಾಲ ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ನಡೆದಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಮೇಕಿಂಗ್ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿರುವ ಚಿತ್ರತಂಡ, ಮೊದಲ ಹಂತದ ಶೂಟಿಂಗ್ ಮುಗಿಸಿದ ಖುಷಿಯ ವಿಚಾರವನ್ನು ಬಹಿರಂಗಪಡಿಸಿದ್ದು, ಡಿಸೆಂಬರ್ನಿಂದ ಎರಡನೇ ಹಂತದ ಶೂಟಿಂಗ್ ಪ್ರಾರಂಭಿಸುವುದಾಗಿ ತಿಳಿಸಿದೆ.

ಚಿತ್ರಕ್ಕಾಗಿ ಮಿನರ್ವ ಮಿಲ್ನಲ್ಲಿ 15 ಬಗೆಯ ಸೆಟ್ ಹಾಕಲಾಗಿದ್ದು, ಮೈಸೂರಿನಲ್ಲೂ ಸೆಟ್ ನಿರ್ಮಾಣ ಮಾಡಲಾಗಿದೆ. 48 ಗಂಟೆಗಳಲ್ಲಿ ನಡೆಯುವ ಘಟನೆಯನ್ನು ಆಧರಿಸಿ ಶ್ರೀನಿ 'ಘೋಸ್ಟ್' ಸಿನಿಮಾದ ಕಥೆ ಸೃಷ್ಟಿಸಿದ್ದಾರೆ. ಹೀಗಾಗಿ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ನಲ್ಲಿಯೇ ನಡೆಯಲಿದೆ ಎಂದು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿದೆ.

'ಘೋಸ್ಟ್' ಚಿತ್ರದಲ್ಲಿ ಶಿವಣ್ಣ ಖೈದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಶಿವಣ್ಣನ ಲುಕ್ ಭಿನ್ನವಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮಲಯಾಳಂನ ಖ್ಯಾತ ನಟ ಜಯರಾಂ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
He is Coming Soon#GHOST BTS video @NimmaShivanna @SandeshPro @ArjunJanyaMusic @MahenSimmha pic.twitter.com/XsSuvejear
— SRINI (@lordmgsrinivas) November 22, 2022