'ವೂಟ್‌ ಸೆಲೆಕ್ಟ್‌'ಗೆ ಲಗ್ಗೆ ಇಟ್ಟ ಬೈರಾಗಿ

bairagi
  • ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ಬೈರಾಗಿ
  • ಆಗಸ್ಟ್‌ 19ರಿಂದ ವೂಟ್‌ ಸೆಲೆಕ್ಟ್‌ನಲ್ಲಿ ಪ್ರದರ್ಶನ ಕಾಣಲಿರುವ ಸಿನಿಮಾ

ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಮುಖ್ಯ ಭೂಮಿಕೆಯಲ್ಲಿ ತೆರೆಕಂಡಿದ್ದ 'ಬೈರಾಗಿ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಬೈರಾಗಿ ಇದೀಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಬೈರಾಗಿ ಸಿನಿಮಾದ ಡಿಜಿಟಲ್‌ ಹಕ್ಕನ್ನು ʼವಿಯಾಕಾಂ 18ʼ ಒಡೆತನದ ʼವೂಟ್‌ ಸೆಲೆಕ್ಟ್‌ʼ ಸಂಸ್ಥೆ ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನಲಾಗಿದೆ. ಈಗಾಗಲೇ ಸಿನಿ ರಸಿಕರ ಮನಗೆದ್ದಿರುವ ಈ ಚಿತ್ರ ಆಗಸ್ಟ್‌ 19ರಿಂದ ವೂಟ್‌ ಸೆಲೆಕ್ಟ್‌ನಲ್ಲಿ ಪ್ರದರ್ಶನ ಕಾಣಲಿದೆ.

ಬೈರಾಗಿ ಚಿತ್ರದ ಒಟಿಟಿ ಬಿಡುಗಡೆಗೆ ಸಂಬಂಧಿಸಿ ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿದ್ದು, ನಟ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌ ಸೇರಿದಂತೆ ಚಿತ್ರ ತಂಡದ ಹಲವರು ಭಾಗಿಯಾಗಿದ್ದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ಒಟಿಟಿ ಬಿಡುಗಡೆಯ ಬಗ್ಗೆ ಉತ್ಸಾಹದಿಂದ ಮಾತನಾಡಿರುವ ಶಿವರಾಜ್‌ಕುಮಾರ್‌, “ಬೈರಾಗಿಯಂತಹ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ. ಹುಲಿ ಶಿವನ ಪಾತ್ರ ಮಾಡುವುದು ಮತ್ತು ಹುಲಿವೇಷ ಹಾಕುವುದು ನನಗೆ ಸವಾಲಾಗಿತ್ತು. ನಿರ್ದೇಶಕ ವಿಜಯ್ ಈ ಪಾತ್ರವನ್ನು ಜೀವಂತಿಕೆಯಿಂದ ನಿರ್ವಹಿಸಲು ಸಹಾಯ ಮಾಡಿದರು. ವೂಟ್‌ ಸೆಲೆಕ್ಟ್‌ನಲ್ಲಿ ಬೈರಾಗಿ ಬಿಡುಗಡೆ ಆಗುತ್ತಿದೆ. ನಮ್ಮ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಸಾಮಾಜಿಕವಾಗಿ ಪ್ರಸ್ತುತವಾದ ಈ ಕಥೆ ಒಟಿಟಿ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಳಿಕ ಮಾತನಾಡಿದ ನಟ ಧನಂಜಯ್, "ಈ ಸಿನಿಮಾ ಮತ್ತು ಇದರಲ್ಲಿ ನಾನು ಮಾಡಿರುವ ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನಾನು ಶಿವರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ನಟಿಸಲು ಮತ್ತೆ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ಶಿವಣ್ಣ ಮತ್ತು ವಿಜಯ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಸಿನಿಮಾದ ಪ್ರತಿ ದೃಶ್ಯವೂ ಅದ್ಭುತವಾಗಿದೆ. ತಂಡದಲ್ಲಿನ ಸಾಮರಸ್ಯ ಕೂಡ ತೆರೆಯ ಮೇಲೆ ಸುಂದರವಾಗಿ ಮೂಡಿಬಂದಿದೆ. ವೂಟ್‌ ಸೆಲೆಕ್ಟ್‌ನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಲು ಉತ್ಸುಕನಾಗಿದ್ದೇನೆ" ಎಂದಿದ್ದಾರೆ.

ನಿರ್ದೇಶಕ ವಿಜಯ್ ಮಿಲ್ಟನ್ ಮಾತನಾಡಿ, "ಹುಲಿ ಶಿವನ ಪಾತ್ರವನ್ನು ಇಷ್ಟು ಚೆನ್ನಾಗಿ ಕಟ್ಟಿಕೊಡಲು ಶಿವಣ್ಣ ಅವರಲ್ಲದೆ ಬೇರೆ ಯಾರಿಗೂ ಸಾಧ್ಯವಾಗದು. ಅವರೊಬ್ಬ ಶ್ರೇಷ್ಠ ನಟ, ಅತ್ಯಂತ ವಿನಮ್ರ ಮತ್ತು ಉದಾರ ವ್ಯಕ್ತಿ. ಪಾತ್ರ ಮತ್ತು ಚಿತ್ರಕಥೆಗೆ ಪ್ರಾಮಾಣಿಕವಾಗಿರುವುದು ಮಾತ್ರ ಅವರ ಗಮನವಾಗಿತ್ತು. ಬೈರಾಗಿ ನನ್ನ ಕನ್ನಡದ ಚೊಚ್ಚಲ ಚಿತ್ರ. ಅದೇ ಕಾರಣಕ್ಕೆ ಈ ಚಿತ್ರ ನನಗೆ ತುಂಬಾ ವಿಶೇಷವಾಗಿದೆ. ನನ್ನ ಕಥೆ ಮತ್ತು ನಿರೂಪಣೆಯಲ್ಲಿ ನಂಬಿಕೆ ಇಟ್ಟು ಶ್ರದ್ಧೆಯಿಂದ ನಟಿಸಿ, ಶ್ರೇಷ್ಠ ಸಿನಿಮಾ ಮೂಡಿಬರಲು ಕಾರಣರಾದ ಕಲಾವಿದರಿಗೆ ನಾನು ಕೃತಜ್ಞ. ಒಟಿಟಿ ಪ್ರೇಕ್ಷಕರು ಕೂಡ ನಮ್ಮ ಚಿತ್ರವನ್ನು ಇಷ್ಟಪಡುತ್ತಾರೆ. ಚಿತ್ರದಲ್ಲಿನ ಸಾಮಾಜಿಕ ಸಂದೇಶ ಅವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್