
- ಇಂದು ಸಂಜೆ 'ಡೊಳ್ಳು' ಚಿತ್ರ ವೀಕ್ಷಿಸಲಿರುವ ಸಿದ್ದರಾಮಯ್ಯ
- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಆಹ್ವಾನ
ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಡೊಳ್ಳು' ಸಿನಿಮಾ ಇತ್ತೀಚೆಗೆ ಕನ್ನಡದ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಚಿತ್ರ ಆಗಸ್ಟ್ 26ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಪ್ರೀಮಿಯರ್ ಶೋ ವೀಕ್ಷಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದೆ.
ಚಿತ್ರದ ನಿರ್ದೇಶಕ ಸಾಗರ್ ಮತ್ತು ನಿರ್ಮಾಪಕ ಪವನ್ ಒಡೆಯರ್ ಇಬ್ಬರೂ ದಂಪತಿ ಸಮೇತ ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಚಿತ್ರ ವೀಕ್ಷಣೆಗೆ ಆಹ್ವಾನಿಸಿದ್ದಾರೆ. ಚಿತ್ರತಂಡದ ಮನವಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಪ್ರೀಮಿಯರ್ ಶೋಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

'ಡೊಳ್ಳು' ಚಿತ್ರದ ಪ್ರೀಮಿಯರ್ ಶೋ ಬೆಂಗಳೂರಿನ ಒರಾಯನ್ ಮಾಲ್ನಲ್ಲಿರುವ ಪಿವಿಆರ್ ಚಿತ್ರಮಂದಿರದಲ್ಲಿ ಆಯೋಜನೆಗೊಂಡಿದೆ. ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಪ್ರದರ್ಶನದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಸಿದ್ದರಾಮಯ್ಯ ಮಾತ್ರವಲ್ಲದೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಈ ಪ್ರೀಮಿಯರ್ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇತ್ತೀಚೆಗೆ ರಾಜ್ಯಪಾಲರನ್ನು ಭೇಟಿಯಾಗಿದ್ದ ಚಿತ್ರತಂಡ ಅವರನ್ನು ಕೂಡ ಪ್ರೀಮಿಯರ್ ಶೋ ವೀಕ್ಷಣೆಗೆ ಆಹ್ವಾನಿಸಿತ್ತು.

ಡೊಳ್ಳು ಕುಣಿತದ ಸುತ್ತ ಮೂಡಿ ಬಂದಿರುವ ಈ ಸಿನಿಮಾ, ರಾಷ್ಟ್ರ ಪ್ರಶಸ್ತಿಯ ಹೊರತಾಗಿ 18 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವುದು ವಿಶೇಷ.