ಕ್ರೀಡೆ, ಕ್ರೀಡಾಳುಗಳ ಬದುಕು ಆಧರಿತ ಪ್ರಮುಖ ಭಾರತೀಯ ಚಿತ್ರಗಳು

ಕಳೆದ 3 ದಶಕಗಳಲ್ಲಿ ಕ್ರೀಡಾಲೋಕದ ಸುತ್ತ ಮೂಡಿಬಂದ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.
dangal

ಕ್ರಿಕೆಟ್‌, ಹಾಕಿ, ಬಾಕ್ಸಿಂಗ್‌, ಕಬ್ಬಡ್ಡಿ, ಕುಸ್ತಿ ಸೇರಿದಂತೆ ಹಲವು ಕ್ರೀಡೆಗಳು ಮತ್ತು ದೇಶೀಯ ಕ್ರೀಡಾಪಟುಗಳ ಜೀವನದ ಕಥೆಗಳನ್ನು ಆಧರಿಸಿ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳು ತೆರೆಗೆ ಬಂದಿವೆ.

ತಾಜಾ ಉದಾಹರಣೆ ಎಂಬಂತೆ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಅವರ ಜೀವನಾಧಾರಿತ ʼಶಾಭಾಷ್‌ ಮಿಥುʼ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ನಿರೂಪಣೆಯಲ್ಲಿನ ವೈಫಲ್ಯಗಳಿಂದಾಗಿ ʼಶಾಬಾಷ್‌ ಮಿಥುʼ ಗಲ್ಲಾ ಪೆಟ್ಟಿಗೆಯಲ್ಲಿ ಸೋತರೂ ನಟಿ ತಾಪ್ಸಿ ಪನ್ನು, ಮಿಥಾಲಿ ರಾಜ್‌ ಅವರ ಪಾತ್ರವನ್ನು ನಿರ್ವಹಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ʼಶಾಭಾಷ್‌ ಮಿಥುʼ ಚರ್ಚೆಯ ನೆಪದಲ್ಲಿ ಕ್ರೀಡೆಯನ್ನು ಆಧರಿಸಿ ತೆರೆಗೆ ಬಂದ ಪ್ರಮುಖ ಭಾರತೀಯ ಸಿನಿಮಾಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 

 • ಜೋ ಜೀತಾ ವಹಿ ಸಿಖಂದರ್‌

1992ರಲ್ಲಿ ನಟ ಆಮಿರ್‌ ಖಾನ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ಜೋ ಜೀತಾ ವಹಿ ಸಿಖಂದರ್‌ ಸಿನಿಮಾ ಕಾಲೇಜು ಹುಡುಗರ ಪ್ರೇಮ ಕಥನವನ್ನು ಹೊಂದಿತ್ತಾದರೂ ಸೈಕಲ್‌ ಮ್ಯಾರಥಾನ್‌ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿತ್ತು. ಮನ್ಸೂರ್‌ ಖಾನ್‌ ನಿರ್ದೇಶನದ ಈ ಚಿತ್ರದಲ್ಲಿ ಆಮಿರ್‌ ಖಾನ್‌ಗೆ ನಟಿ ಆಯೇಷಾ ಝಲ್ಕಾ ಜೊತೆಯಾಗಿದ್ದರು. ಹಿರಿಯ ನಟರಾದ ಕುಲ್‌ಭೂಷಣ್‌ ಕರಬಂಧ, ದೀಪಕ್‌ ತಿಜೋರಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದರು.

 • ಲಗಾನ್‌ 

ಕ್ರಿಕೆಟ್‌ ಪಂದ್ಯಾವಳಿಯ ಸುತ್ತ ಮೂಡಿಬಂದಿದ್ದ ಲಗಾನ್‌ ಸಿನಿಮಾ 2001ರಲ್ಲಿ ತೆರೆಕಂಡಿತ್ತು. ನಟ ಆಮಿರ್‌ ಖಾನ್‌ ಈ ಚಿತ್ರದಲ್ಲಿ ಮುಖ್ಯಭೂಮಿಕೆಯನ್ನು ನಿಭಾಯಿಸಿದ್ದರು. ಬ್ರಿಟೀಷ್‌ ಆಳ್ವಿಕೆಯ ಭಾರತದಲ್ಲಿ ಆಂಗ್ಲರು ಮತ್ತು ಭಾರತದ ಹಳ್ಳಿಗರ ನಡುವೆ ಏರ್ಪಡುವ ಷರತ್ತಿನ ಪಂದ್ಯಾವಳಿಯನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದರು ನಿರ್ದೇಶಕ ಅಶುತೋಷ್‌ ಗೋವಾರಿಕರ್‌. ನಟಿಯರಾದ ಗ್ರೇಸಿ ಸಿಂಗ್‌ ಮತ್ತು ರಾಕೆಲ್‌ ಶೆಲ್ಲಿ ಚಿತ್ರದಲ್ಲಿ ಆಮಿರ್‌ ಖಾನ್‌ಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.

 

 • ಇಕ್ಬಾಲ್‌

ಶ್ರೇಯಸ್‌ ತಲ್ಪಾಡೆ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಇಕ್ಬಾಲ್‌ ಸಿನಿಮಾ 2005ರಲ್ಲಿ ತೆರೆಕಂಡಿತ್ತು. ಹಳ್ಳಿಯ ಬಡ ರೈತನ ಮಗ, ಅದರಲ್ಲೂ ವಿಶೇಷ ಚೇತನನಾದ ಯುವಕ ಕ್ರಿಕೆಟ್‌ ಆಡುವ ಕನಸು ಕಂಡಾಗ ಆತ ಎದುರುಗೊಳ್ಳುವ ಸವಾಲುಗಳನ್ನು ನಿರ್ದೇಶಕ ನಾಗೇಶ್‌ ಕುಕುನೂರ್‌ ಮನಮುಟ್ಟುವಂತೆ ದಾಖಲಿಸಿದ್ದರು. ಹಿರಿಯ ನಟ ನಾಸಿರುದ್ದೀನ್‌ ಶಾ, ಕನ್ನಡದ ಹಿರಿಯ ಸಾಹಿತಿ, ನಟ ಮತ್ತು ನಿರ್ದೇಶಕರಾದ ಗಿರೀಶ್‌ ಕಾರ್ನಾಡ್‌ ಮತ್ತು ಬಾಲಾಜಿ ಮನೋಹರ್‌ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

 • ಚಕ್‌ ದೇ ಇಂಡಿಯಾ

2007ರಲ್ಲಿ ಶಾರುಖ್‌ ಖಾನ್‌ ಮುಖ್ಯಭೂಮಿಕೆಯಲ್ಲಿ ತೆರೆಗೆ ಬಂದಿದ್ದ ‌ʼಚೆಕ್‌ ದೇ ಇಂಡಿಯಾʼ ಸಿನಿಮಾ ಹಾಕಿ ಆಟಗಾರ್ತಿಯರ ಸುತ್ತ ಮೂಡಿಬಂದಿತ್ತು. ಈ ಚಿತ್ರದಲ್ಲಿ ಶಾರುಖ್‌ ಖಾನ್‌ ಹಾಕಿ ತರಬೇತುದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ರಾಜ್ಯಗಳ ಭಿನ್ನ ಹಿನ್ನೆಲೆಯ ಆಟಗಾರ್ತಿಯರು ಜೊತೆಗೂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಸ್ಪೂರ್ತಿದಾಯಕ ಕಥೆ ಅದ್ಭುತವಾಗಿ ಮೂಡಿಬಂದಿತ್ತು. ಶಿಮಿತ್‌ ಅಮಿನ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು. ಆದಿತ್ಯ ಚೋಪ್ರಾ ನಿರ್ಮಾಣದ ʼಚೆಕ್‌ ದೇ ಇಂಡಿಯಾʼ ಗೆ ಸಲೀಂ ಮತ್ತು ಸುಲೇಮಾನ್‌ ಮರ್ಚಂಟ್‌ ಜೋಡಿ ಸಂಗೀತ ನಿರ್ದೇಶನ ಮಾಡಿತ್ತು.

 • ಪಾನ್‌ ಸಿಂಗ್‌ ತೋಮರ್‌ 

ಸ್ಟೀಪಲ್‌ ಚೇಸ್‌ ಕ್ರೀಡೆಯಲ್ಲಿ ಏಳು ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟವನ್ನು ಗೆದ್ದುಕೊಂಡು ʼಟೋಕ್ಯೋ ಒಲಂಪಿಕ್ಸ್‌ʼನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದ ʼಪಾನ್‌ ಸಿಂಗ್‌ ತೋಮರ್‌ʼ ಆಸ್ತಿ ವಿವಾದಿಂದಾಗಿ ಚಂಬಲ್‌ ಕಣಿವೆಯ ಡಕಾಯಿತನಾಗಿ ಬದಲಾದ ನೈಜ ಕತೆಯನ್ನಾಧರಿಸಿ ಬಾಲಿವುಡ್‌ ನಟ, ನಿರ್ದೇಶಕ ತಿಗ್ಮಾನ್ಷು ದುಲಿಯಾ ʼಪಾನ್‌ ಸಿಂಗ್‌ ತೋಮರ್‌ʼ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದರು. 2012ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಖ್ಯಾತ ನಟ ಇರ್ಫಾನ್‌ ಖಾನ್‌, ಪಾನ್‌ ಸಿಂಗ್‌ ಪಾತ್ರವನ್ನು ನಿಭಾಯಿಸಿದ್ದರು. ಕ್ರೀಡಾಳು ಮತ್ತು ಸೈನಿಕನಾಗಿದ್ದ ಪಾನ್‌ ಸಿಂಗ್‌ ಜೀವನಾಧಾರಿತ ಚಿತ್ರ ತೆರೆಕಂಡ ಬಳಿಕ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ʼಪಾನ್‌ ಸಿಂಗ್‌ ತೋಮರ್‌ʼ ಚಿತ್ರಕ್ಕೆ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿ ಮತ್ತು ಚಿತ್ರದಲ್ಲಿನ ಮನೋಜ್ಞ ನಟನೆಗಾಗಿ ಇರ್ಫಾನ್‌ ಖಾನ್‌ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು.

 • ಭಾಗ್‌ ಮಿಲ್ಕಾ ಭಾಗ್‌

ಕಾಮನ್‌ ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ನ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದ ಓಟಗಾರ ಮಿಲ್ಕಾ ಸಿಂಗ್‌ ಅವರ ಜೀವನ ಕತೆಯನ್ನು ಆಧರಿಸಿ 2013ರಲ್ಲಿ ʼಭಾಗ್‌ ಮಿಲ್ಕಾ ಭಾಗ್‌ʼ ಸಿನಿಮಾ ತೆರೆಗೆ ಬಂದಿತ್ತು. ರಾಕೇಶ್‌ ಓಂ ಪ್ರಕಾಶ್‌ ಮೆಹ್ರಾ ನಿರ್ದೆಶನದ ಈ ಚಿತ್ರದಲ್ಲಿ ಫರಾನ್‌ ಅಖ್ತರ್‌ ಮಿಲ್ಕಾ ಸಿಂಗ್‌ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರಕ್ಕೆ ಫಿಲ್ಮ್‌ಫೇರ್‌ ಸೇರಿದಂತೆ ಹಲವು ಪ್ರಶಸ್ತಿಗಳು ಕೂಡ ಲಭಿಸಿದ್ದವು.

 • 1983

2014ರಲ್ಲಿ ನಿವಿನ್‌ ಪೌಲಿ ಮುಖ್ಯಭೂಮಿಕೆಯಲ್ಲಿ ತೆರೆ ಕಂಡಿದ್ದ ಮಲಯಾಳಂನ ʼ1983ʼ ಸಿನಿಮಾ ಕ್ರಿಕೆಟ್‌ ಸುತ್ತ ಮೂಡಿ ಬಂದಿತ್ತು. ಕಪೀಲ್‌ ದೇವ್‌ ನಾಯಕತ್ವದ ಭಾರತೀಯ ಕ್ರಿಕೆಟ್‌ ತಂಡ 1983ರಲ್ಲಿ ವಿಶ್ವಕಪ್‌ ಗೆದ್ದಿದ್ದನ್ನು ಕಂಡು ಸ್ಫೂರ್ತಿಗೊಳಗಾಗುವ ಯುವಕನೊಬ್ಬ ತಾನು ಕೂಡ ಕ್ರಿಕೆಟಿಗನಾಗುವ ಕನಸು ಕಂಡು ಅದಕ್ಕಾಗಿ ಶ್ರಮ ಪಡುತ್ತಾನೆ. ತನ್ನ ಕನಸು ಈಡೇರದಿದ್ದಾಗ ಮಗನನ್ನು ಕ್ರಿಕೆಟಿಗನನ್ನಾಗಿಸುವ ನಿರ್ಧಾರಕ್ಕೆ ಬರುತ್ತಾನೆ. 1983ರಲ್ಲಿ ಭಾರತೀಯ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದ ಬಳಿಕ ದೇಶದಲ್ಲಿ ಕ್ರಿಕೆಟ್‌ ಬಗೆಗೆ ಹುಟ್ಟಿಕೊಂಡ ಅಭಿಮಾನದ ಅಲೆಯನ್ನು ಈ ಚಿತ್ರದಲ್ಲಿ ಕಾಣಬಹುದು.

 • ಮೇರಿ ಕೋಮ್

ಭಾರತದ ಖ್ಯಾತ ಬಾಕ್ಸಿಂಗ್‌ ಪಟು ಮೇರಿ ಕೋಮ್‌ ಅವರ ಜೀವನ ಕತೆಯನ್ನಾಧರಿಸಿ 2014ರಲ್ಲಿ ʼಮೇರಿ ಕೋಮ್‌ʼ ಚಿತ್ರ ತೆರೆಗೆ ಬಂದಿತ್ತು. ಓಮಂಗ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ‌ ಈ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಮೇರಿ ಕೋಮ್ ಪಾತ್ರವನ್ನು ನಿಭಾಯಿಸಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿತ್ತು.

 • ಎಂ ಎಸ್‌ ಧೋನಿ : ದಿ ಅನ್‌ಟೋಲ್ಡ್‌ ಸ್ಟೋರಿ

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಜೀವನಾಧಾರಿತ ʼಎಂ.ಎಸ್‌ ಧೋನಿ : ದಿ ಅನ್‌ಟೋಲ್ಡ್‌ ಸ್ಟೋರಿʼ ಚಿತ್ರ 2016ರಲ್ಲಿ ಬಿಡುಗಡೆಯಾಗಿತ್ತು. ರೈಲ್ವೆ ಉದ್ಯೋಗಿಯಾಗಿದ್ದ ಧೋನಿ ಭಾರತೀಯ ಕ್ರಿಕೆಟ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕತೆಯನ್ನು ತೆರೆಗೆ ಅಳವಡಿಸುವಲ್ಲಿ ನಿರ್ದೇಶಕ ನೀರಜ್‌ ಪಾಂಡೆ ಯಶಸ್ವಿಯಾಗಿದ್ದರು. ಚಿತ್ರದಲ್ಲಿ ನಟ ಸುಶಾಂತ್‌ ಸಿಂಗ್‌ ಧೋನಿ ಪಾತ್ರವನ್ನು ನಿಭಾಯಿಸಿದ್ದರು. ನಟಿ ಕಿಯಾರ ಅಡ್ವಾನಿ ಧೋನಿ ಪತ್ನಿ ಸಾಕ್ಷಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧೋನಿ ಜೀವನಾಧಾರಿತ ಕತೆಯಾದ್ದರಿಂದ ಚಿತ್ರ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು.

 • ದಂಗಲ್‌

ಖ್ಯಾತ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಪೊಗಾಟ್‌ ಸಹೋದರಿಯರ ಜೀವನಾಧಾರಿತ ದಂಗಲ್‌ ಸಿನಿಮಾ 2016ರಲ್ಲಿ ತೆರೆಗೆ ಬಂದಿತ್ತು. ಗೀತಾ ಮತ್ತು ಬಬಿತಾರ ತಂದೆ ಮಹಾವೀರ್‌ ಸಿಂಗ್‌ ಪೊಗಾಟ್‌ ಪಾತ್ರದಲ್ಲಿ ಆಮಿರ್‌ ಖಾನ್‌ ನಟಿಸಿದ್ದರು. ಸಾಧಾರಣ ಹಳ್ಳಿ ಹುಡುಗಿಯರು ತಂದೆಯ ನೆರವಿನಿಂದ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ರೋಚಕ ಕಥೆಯನ್ನು ನಿರ್ದೇಶಕ ನಿತೇಶ್‌ ತಿವಾರಿ ಮನಮುಟ್ಟುವಂತೆ ಹೇಳಿದ್ದರು.‌ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಬಹುಕೋಟಿ ಮೊತ್ತವನ್ನು ಕಲೆ ಹಾಕಿತ್ತು.

 • ಸುಲ್ತಾನ್‌

2016ರಲ್ಲಿ ಸಲ್ಮಾನ್‌ ಖಾನ್‌ ಮತ್ತು ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಬಿಡುಗಡೆಯಾದ ಸುಲ್ತಾನ್‌ ಸಿನಿಮಾ ಕುಸ್ತಿ ಮತ್ತು ಬಾಕ್ಸಿಂಗ್‌ ಸುತ್ತ ಮೂಡಿಬಂದಿತ್ತು. ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಜೊತೆಗೆ ಅನುಷ್ಕಾ ಶರ್ಮಾ ಕೂಡ ಕುಸ್ತಿ ಪಟುವಾಗಿ ಮಿಂಚಿದ್ದರು. ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್‌ ಹೂಡ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು.

 • ಬುಧಿಯಾ ಸಿಂಗ್‌ : ಬಾರ್ನ್‌ ಟು ರನ್

5ನೇ ವಯಸ್ಸಿನಲ್ಲಿ ಒಡಿಶಾದ ʼಪುರಿʼಯಿಂದ 65 ಕಿಲೋ ಮೀಟರ್‌ ದೂರದಲ್ಲಿರುವ ಭುವನೇಶ್ವರಕ್ಕೆ ಕೇವಲ 7 ಗಂಟೆ 2 ನಿಮಿಷದಲ್ಲಿ ಮ್ಯಾರಥಾನ್‌ ಓಡಿ ದಾಖಲೆ ಬರೆದಿದ್ದ ಪೋರ ಬುಧಿಯಾ ಸಿಂಗ್‌ ಬದುಕಿನ ನೈಜ ಕತೆಯನ್ನಾಧರಿಸಿ 2016ರಲ್ಲಿ ʼಬುಧಿಯಾ ಸಿಂಗ್‌ : ಬಾರ್ನ್‌ ಟು ರನ್ʼ ತೆರೆಗೆ ಬಂದಿತ್ತು. ಚಿತ್ರದಲ್ಲಿ ಬುಧಿಯಾ ಸಿಂಗ್‌ ಪಾತ್ರವನ್ನು ಬಾಲನಟ ಮಯೂರ್‌ ಮಹೇಂದ್ರ ಪಟೋಲೆ ನಿಭಾಯಿಸಿದರೆ, ಮನೋಜ್‌ ಬಾಜಪೇಯಿ ಬುಧಿಯಾ ಸಿಂಗ್‌ ಗುರುವಿನ ಪಾತ್ರದಲ್ಲಿ ನಟಿಸಿದ್ದರು. 

 • ಮುಕ್ಕಾಬಾಜ್‌

2018ರಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ನಿರ್ದೇಶನದಲ್ಲಿ ತೆರೆಕಂಡಿದ್ದ ʼಮುಕ್ಕಾಬಾಜ್‌ʼ ಸಿನಿಮಾ ಬಾಕ್ಸಿಂಗ್‌ ಕಥಾಹಂದರವನ್ನು ಒಳಗೊಂಡಿತ್ತು. ಗ್ರಾಮೀಣ ಹಿನ್ನೆಲೆಯ ಕ್ರೀಡಾಪಟುಗಳು ಅನುಭವಿಸುವ ಸಂಕಷ್ಟಗಳನ್ನು ಈ ಚಿತ್ರದಲ್ಲಿ ತೀವ್ರವಾಗಿ ತೋರಿಸಲಾಗಿತ್ತು. ನಟ ವಿನೀತ್‌ ಕುಮಾರ್‌ ಸಿಂಗ್‌ ಚಿತ್ರದಲ್ಲಿ ಬಾಕ್ಸಿಂಗ್‌ ಪಟುವಾಗಿ ಮಿಂಚಿದ್ದರು.   

 • ಗೋಲ್ಡ್‌

2018ರಲ್ಲಿ ಅಕ್ಷಯ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿದ್ದ ʼಗೋಲ್ಡ್‌ʼ ಸಿನಿಮಾ ಸ್ವಾತಂತ್ರ್ಯ ಭಾರತದ ಮೊದಲ ಹಾಕಿ ತಂಡದ ಚರಿತ್ರೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿತ್ತು. ಭಾರತೀಯ ಹಾಕಿ ತಂಡ 1948ರ ಸಮ್ಮರ್‌ ಒಲಂಪಿಕ್ಸ್‌ನಲ್ಲಿ ಬ್ರಿಟಿಷರ ವಿರುದ್ಧ ಚಿನ್ನದ ಪದಕ ಗೆದ್ದ ರೋಚಕ ಕತೆಯನ್ನು ನಿರ್ದೇಶಕಿ ರೀಮಾ ಕಾಗ್ತಿ ಅಚ್ಚುಕಟ್ಟಾಗಿ ತೆರೆಗೆ ಅಳವಡಿಸಿದ್ದರು. ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ʼಗೋಲ್ಡ್‌ʼ ಗಲ್ಲಾ ಪೆಟ್ಟಿಗೆಯಲ್ಲೂ ಸಖತ್‌ ಸದ್ದು ಮಾಡಿತ್ತು.

 • ಸರಪಟ್ಟ ಪರಂಬರೈ

ಬಾಕ್ಸಿಂಗ್‌ ಕಥಾಹಂದರವನ್ನು ಹೊಂದಿದ್ದ ʼಸರಪಟ್ಟ ಪರಂಬರೈʼ ಸಿನಿಮಾ 2021ರಲ್ಲಿ ಬಿಡುಗಡೆಯಾಗಿತ್ತು. ತಮಿಳಿನ ಖ್ಯಾತ ನಿರ್ದೇಶಕ ಪಾ. ರಂಜಿತ್‌ ಈ ಚಿತ್ರಕ್ಕೆ ಆಕ್ಷನ್‌ ಹೇಳಿದ್ದರು. 70ರ ದಶಕದಲ್ಲಿ ತಮಿಳುನಾಡಿನಲ್ಲಿ ಬಾಕ್ಸಿಂಗ್‌ ಕ್ರೇಜ್‌ ಎಷ್ಟರ ಮಟ್ಟಿಗಿತ್ತು ಎಂಬುದನ್ನು ರಂಜಿತ್‌ ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ತಮಿಳಿನ ಖ್ಯಾತ ನಟ ಆರ್ಯ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು.

 •  83

2021ರಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಜೀವನಾಧಾರಿತ  '83' ಸಿನಿಮಾ ತೆರೆಗೆ ಬಂದಿತ್ತು. ಕಪಿಲ್‌ ದೇವ್‌ ನಾಯಕ್ವತದಲ್ಲಿ ಭಾರತೀಯ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದ ಕಾಲಘಟ್ಟವನ್ನೇ ಕೇಂದ್ರ ಬಿಂದುವಾಗಿಸಿ ಚಿತ್ರದ ಕಥೆ ಹೆಣೆಯಲಾಗಿತ್ತು. ಕಬೀರ್‌ ಖಾನ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ 83 ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ರಣವೀರ್‌ ಸಿಂಗ್‌ ಕಪಿಲ್‌ ದೇವ್‌ ಪಾತ್ರವನ್ನು ನಿಭಾಯಿಸಿದರೆ, ದೀಪಿಕಾ ಪಡುಕೊಣೆ ಕಪಿಲ್‌ ದೇವ್‌ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು. ಪಂಕಜ್‌ ತ್ರಿಪಾಠಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್