
- ಕನ್ನಡದಲ್ಲಿಯೇ ಕರುನಾಡ ಸಿನಿ ಪ್ರೇಕ್ಷಕರಿಗೆ ಕಮಲ್ ಧನ್ಯವಾದ
- ನಾಲ್ಕು ದಿನಕ್ಕೆ 150 ಕೋಟಿ ಗಳಿಸಿದ ʼವಿಕ್ರಮ್ʼ
ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಮುಖ್ಯಭೂಮಿಕೆಯ ʼವಿಕ್ರಮ್ʼ ಸಿನಿಮಾ ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ʼವಿಕ್ರಮ್ʼ ವಿಜಯಯಾತ್ರೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಗೆಲುವಿಗೆ ಕಾರಣರಾದ ಕನ್ನಡಿಗರಿಗೆ ನಟ ಕಮಲ್ ಹಾಸನ್ ಧನ್ಯವಾದ ತಿಳಿಸಿದ್ದಾರೆ.
ಕಮಲ್ ಹಾಸನ್ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಅವರ ಒಡೆತನದ ʼರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ʼ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಎರಡು ನಿಮಿಷಗಳ ವಿಡಿಯೋದಲ್ಲಿ ಕನ್ನಡದಲ್ಲೇ ಮಾತನಾಡಿರುವ ಕಮಲ್, "ಕನ್ನಡ ಪ್ರೇಕ್ಷಕರು ಒಂದೊಳ್ಳೆಯ ಸಿನಿಮಾವನ್ನು ಯಾವಾಗಲೂ ಬೆಂಬಲಿಸುತ್ತ ಬಂದಿದ್ದಾರೆ. ಹಾಗೆ ಒಳ್ಳೆಯ ನಟರನ್ನು ಕೂಡ ಬೆಂಬಲಿಸಿದ್ದಾರೆ. ಅದೇ ರೀತಿ ನನ್ನನ್ನು ಮತ್ತು ನಮ್ಮ ವಿಕ್ರಮ್ ಸಿನಿಮಾವನ್ನು ನೀವು ಬೆಂಬಲಿಸುತ್ತಿರುವುದು ನನಗೆ ಅತೀವ ಸಂತೋಷ ತಂದು ಕೊಟ್ಟಿದೆ. ನಿಮ್ಮೆಲ್ಲರ ಅಭಿಮಾನ, ಪ್ರೀತಿ ಹೀಗೆ ಇರಲಿ ಎಂದು ಕನ್ನಡ ಸಿನಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
Thank you
— Raaj Kamal Films International (@RKFI) June 7, 2022
With love
Kamal Haasan @ikamalhaasan @Dir_Lokesh @Suriya_offl @VijaySethuOffl #FahadhFaasil @anirudhofficial #Mahendran @RKFI @turmericmediaTM @spotifyindia @SonyMusicSouth @SKVFCS @anbariv @girishganges @philoedit @ArtSathees @MrRathna @gopiprasannaa pic.twitter.com/NkaTAzk2uz
ವಿಕ್ರಮ್ ಸಿನಿಮಾ ತೆರೆಕಂಡು ನಾಲ್ಕು ದಿನ ಕಳೆದಿದೆ. ಮೊದಲ ದಿನವೇ 48 ಕೋಟಿ ಗಳಿಸಿದ್ದ ಚಿತ್ರ ನಾಲ್ಕನೇ ದಿನದ ಹೊತ್ತಿಗೆ ಬರೋಬ್ಬರಿ 150 ಕೋಟಿ ರೂಪಾಯಿಗಳನ್ನು ಕಲೆ ಹಾಕಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ.
ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ 'ವಿಕ್ರಮ್' ಚಿತ್ರದಲ್ಲಿ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರೆ, ತಮಿಳಿನ ಖ್ಯಾತ ನಟರಾದ ವಿಜಯ್ ಸೇತುಪತಿ, ಸೂರ್ಯ ಮತ್ತು ಮಲಯಾಳಂ ಚಿತ್ರರಂಗದ ಫಹದ್ ಫಾಸಿಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.