'ಪೊನ್ನಿಯಿನ್ ಸೆಲ್ವನ್' ಮೆಚ್ಚಿದ ರಜನಿಕಾಂತ್

Rajinikanth
  • ಜಯಂ ರವಿಗೆ ಕರೆ ಮಾಡಿ ಅಭಿನಂದನೆ ತಿಳಿಸದ ತಲೈವಾ
  • ನಾಲ್ಕು ದಿನಕ್ಕೆ ₹250 ಕೋಟಿ ಮಾಡಿದ ಮಣಿರತ್ನಂ ಸಿನಿಮಾ

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರವನ್ನು ಇಂದು ಸೂಪರ್ ಸ್ಟಾರ್ ರಜನಿಕಾಂತ್ ವೀಕ್ಷಿಸಿದ್ದು ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ರಜನಿಕಾಂತ್ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ವೀಕ್ಷಿಸಿರುವ ಬಗ್ಗೆ ಖ್ಯಾತ ಸಿನಿಮಾ ವಿಶ್ಲೇಷಕ ಮನೊಬಾಲ ವಿಜಯಬಾಲನ್ ಮತ್ತು ಚಿತ್ರತಂಡದ ಭಾಗವಾಗಿರುವ ನಟ ಜಯಂ ರವಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

'ಪೊನ್ನಿಯಿನ್ ಸೆಲ್ವನ್' ಸಿನಿಮಾ ನೋಡಿದ ಬಳಿಕ ರಜನಿಕಾಂತ್ ತಮಗೆ ಕರೆ ಮಾಡಿ ಅಭಿನಂದಿಸಿದ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿರುವ ಜಯಂ ರವಿ, "ನಿಮ್ಮೊಂದಿಗಿನ ಆ ಒಂದು ನಿಮಿಷದ ಮಾತುಕತೆ ನನ್ನ ವೃತ್ತಿ ಬದುಕಿಗೆ ಹೊಸ ಅರ್ಥವನ್ನು ಕಲ್ಪಿಸಿದೆ. ನೀವು 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಮತ್ತು ನನ್ನ ನಟನೆಯನ್ನು ಮೆಚ್ಚಿಕೊಂಡಿದ್ದೀರಿ ಎಂಬ ಮಾತುಗಳನ್ನು ಕೇಳಿ ಖುಷಿಯಾಯಿತು. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದ. ನಿಮ್ಮಿಂದ ಪ್ರಶಂಸೆಯನ್ನು ಗಿಟ್ಟಿಸಿಕೊಂಡ ನಾನು ನಿಜಕ್ಕೂ ಅದೃಷ್ಟವಂತ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಿಯಾನ್ ವಿಕ್ರಮ್, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ಪ್ರಕಾಶ್ ರೈ, ಕಿಶೋರ್, ತ್ರಿಷಾ ಕೃಷ್ಣನ್ ಸೇರಿದಂತೆ ಬಹು ತಾರಾಗಣವನ್ನೇ ಹೊಂದಿರುವ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಚೋಳ ಸಾಮ್ರಾಜ್ಯದ ಗತ ವೈಭವದ ಸುತ್ತ ಹೆಣೆಯಲಾಗಿದೆ. ಅಂದಾಜು ₹500 ಕೋಟಿ  ಬಂಡವಾಳದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ತೆರೆಕಂಡ ನಾಲ್ಕೇ ದಿನಕ್ಕೆ ಬರೋಬ್ಬರಿ₹ 250 ಕೋಟಿ ಗಳಿಕೆ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app