ತಮಿಳು ಚಿತ್ರಕ್ಕೆ ಬಂಡವಾಳ ಹೂಡಲು ಸಜ್ಜಾದ 'ತಲಾ ಧೋನಿ'

dhoni
  • ತಮಿಳರ ಮೇಲಿನ ಪ್ರೀತಿಗಾಗಿ ಕಾಲಿವುಡ್‌ ಚಿತ್ರಕ್ಕೆ ಬಂಡವಾಳ ಹೂಡಿದ ಧೋನಿ
  • ಧೋನಿ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲಿರುವ ತಮಿಳ್‌ಮಣಿ ರಮೇಶ್‌

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಮೊದಲಿನಿಂದಲೂ ಭಾರತೀಯ ಚಿತ್ರರಂಗದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆಗಾಗ ಜಾಹೀರಾತುಗಳಲ್ಲಿ ಮಿಂಚುವ ಅವರು ಇತ್ತೀಚೆಗೆ ಚಿತ್ರ ನಿರ್ಮಾಣದತ್ತ ಒಲವು ತೋರಿದ್ದು, ಅದಕ್ಕಾಗಿಯೇ ʼಧೋನಿ ಎಂಟರ್‌ಟೈನ್‌ಮೆಂಟ್‌ʼ ಸಂಸ್ಥೆಯನ್ನು ಹುಟ್ಟುಹಾಕಿದ್ದು ಎಲ್ಲರಿಗೂ ತಿಳಿದಿದೆ.

ಹಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿರುವ ಧೋನಿ ತಮ್ಮ ನೂತನ ಚಿತ್ರ ನಿರ್ಮಾಣ ಸಂಸ್ಥೆಯ ಮೊದಲ ಪ್ರಯತ್ನವಾಗಿ ತಮಿಳು ಚಿತ್ರವೊಂದಕ್ಕೆ ಬಂಡವಾಳ ಹೂಡಲಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ.

Eedina App

ಕ್ಯಾಪ್ಟನ್‌ ಕೂಲ್‌ ಒಡೆತನದ ʼಧೋನಿ ಎಂಟರ್‌ಟೈನ್‌ಮೆಂಟ್‌ʼ ಸಂಸ್ಥೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಪತ್ರವನ್ನು ಹಂಚಿಕೊಂಡಿದ್ದು, "ಧೋನಿ ಮತ್ತು ತಮಿಳುನಾಡು ಜನತೆಯ ನಡುವೆ ಅವಿನಾಭಾವ ಸಂಬಂಧವಿದೆ. ಈ ಬಂಧವನ್ನು ಇನ್ನಷ್ಟು ವಿಶೇಷಗೊಳಿಸುವ ಸಲುವಾಗಿ ʼಧೋನಿ ಎಂಟರ್‌ಟೈನ್‌ಮೆಂಟ್‌ʼ ತಮಿಳು ಚಿತ್ರವನ್ನು ನಿರ್ಮಿಸಲು ಸಜ್ಜಾಗಿದೆ. ನಮ್ಮ ನೂತನ ಚಿತ್ರ ಕೌಟುಂಬಿಕ ಕಥಾಹಂದರವನ್ನು ಹೊಂದಿದ್ದು, ಈ ಕಥೆ ಸಾಕ್ಷಿ ಧೋನಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಈ ಹಿಂದೆ ಧೋನಿ ಅವರನ್ನೇ ಕೇಂದ್ರವಾಗಿರಿಸಿಕೊಂಡು ʼಅಥರ್ವ- ದಿ ಒರಿಜಿನ್‌ʼ ಎಂಬ ಗ್ರಾಫಿಕ್‌ ಆಧರಿತ ಕೃತಿಯನ್ನು ರಚಿಸಿದ್ದ ತಮಿಳ್‌ಮಣಿ ರಮೇಶ್‌, ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ. ಸದ್ಯದಲ್ಲೇ ಚಿತ್ರತಂಡದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು" ಎಂದು ಮಾಹಿತಿ ಪ್ರಕಟಿಸಿದೆ.

ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿರುವ ರಮೇಶ್‌ ತಮಿಳ್‌ಮಣಿ, "ಸಾಕ್ಷಿ ಧೋನಿ ಅವರು ಬರೆದ ಚಿತ್ರಕಥೆಯನ್ನು ಗಮನಿಸಿದ ಕೂಡಲೇ ಇದೊಂದು ವಿಶೇಷ ಕಥಾಹಂದರ ಎಂಬುದು ನನಗೆ ಅರಿವಾಯಿತು. ಕಥೆಯಲ್ಲಿ ಹೊಸತನವಿದೆ. ಹಾಸ್ಯಭರಿತ ಕೌಟುಂಬಿಕ ಚಿತ್ರವಾಗುವ ಎಲ್ಲ ಲಕ್ಷಣಗಳು ಸಾಕ್ಷಿ ಅವರ ಪರಿಕಲ್ಪನೆಯ ಈ ಕಥೆಗಿದೆ. ಇಂತಹ ಉತ್ತಮ ಕಥಾಹಂದರದ ಭಾಗವಾಗಿ ಚಿತ್ರವನ್ನು ನಿರ್ದೇಶಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಚಿತ್ರೀಕರಣವನ್ನು ಪ್ರಾರಂಭಿಸಲು ನಿಜಕ್ಕೂ ಉತ್ಸುಕನಾಗಿದ್ದೇನೆ" ಎಂದಿದ್ದಾರೆ.

ಈ ನೂತನ ಚಿತ್ರ ಮೂಲತಃ ತಮಿಳು ಭಾಷೆಯಲ್ಲಿ ಸಿದ್ಧಗೊಳ್ಳಲಿದ್ದು, ಬೇರೆ ಭಾಷೆಗಳಿಗೂ ಡಬ್‌ ಆಗಲಿದೆ ಎಂದು ಧೋನಿ ಎಂಟರ್‌ಟೈನ್‌ಮೆಂಟ್‌ ಪತ್ರದಲ್ಲಿ ತಿಳಿಸಿದೆ.

2019ರಲ್ಲಿ ಆರಂಭಗೊಂಡಿರುವ ʼಧೋನಿ ಎಂಟರ್‌ಟೈನ್‌ಮೆಂಟ್‌ʼ ಸಂಸ್ಥೆ ಈವರೆಗೆ ಜಾಹೀರಾತುಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಿದೆ. ತಮಿಳು ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app