
- ರಜನಿಕಾಂತ್ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ
- ಶಿವರಾಜ್ಕುಮಾರ್ ಅಭಿಮಾನಿಗಳಲ್ಲೂ ಹೆಚ್ಚಿದ ಕುತೂಹಲ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಚಿತ್ರದ ಶೀರ್ಷಿಕೆ ಘೋಷಣೆಯಾಗಿದೆ. ತಮಿಳಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಹೊಸ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಿನಿಮಾದ ʼಟೈಟಲ್ ಪೋಸ್ಟರ್ʼ ಅನ್ನು ಟ್ವಿಟರ್ನಲ್ಲಿ ಬಿಡುಗಡೆ ಮಾಡಿದೆ.
ರಜನಿಕಾಂತ್ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ʼಜೈಲರ್ʼ ಎಂದು ಹೆಸರಿಡಲಾಗಿದೆ. ಈ ಹಿಂದೆ ʼಬೀಸ್ಟ್ʼ ಸಿನಿಮಾ ನಿರ್ದೇಶಿಸಿದ್ದ ತಮಿಳಿನ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ʼಜೈಲರ್ʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
#Thalaivar169 is #Jailer@rajinikanth @Nelsondilpkumar @anirudhofficial pic.twitter.com/tEtqJrvE1c
— Sun Pictures (@sunpictures) June 17, 2022
ರಜನಿಕಾಂತ್ ಅವರ 169ನೇ ಚಿತ್ರ ಯಾವುದು ಎಂಬದನ್ನು ತಿಳಿಯಲು ರಜನಿಕಾಂತ್ ಅವರ ಅಭಿಮಾನಿಗಳಂತೆ ಕನ್ನಡದ ಸ್ಟಾರ್ ನಟ ಶಿವರಾಜ್ಕುಮಾರ್ ಅವರ ಅಭಿಮಾನಿಗಳು ಕೂಡ ಕಾತುರಾಗಿದ್ದರು. ಯಾಕೆಂದರೆ ರಜನಿಕಾಂತ್ ಅವರ ಮುಂದಿನ ಚಿತ್ರದಲ್ಲಿ ತಾವು ನಟಿಸುತ್ತಿರುವ ಸುದ್ದಿಯನ್ನು ಶಿವಣ್ಣ ಇತ್ತೀಚೆಗಷ್ಟೇ ಖಚಿತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈದಿನ ಎಕ್ಸ್ಕ್ಲೂಸಿವ್ | ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಉಪಾಧ್ಯಕ್ಷ ಚಿಕ್ಕಣ್ಣ
ಇದೀಗ ರಕ್ತ ಮೆತ್ತಿದ ಕತ್ತಿಯ ಚಿತ್ರವನ್ನು ಸೂಚ್ಯವಾಗಿಟ್ಟು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ನಲ್ಲಿನ ಅಂಶಗಳು ಸೂಚಿಸುವಂತೆ ʼಜೈಲರ್ʼ ಪಕ್ಕಾ ಮಾಸ್ ಸಿನಿಮಾ ಆಗಿರಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಮತ್ತು ಶಿವಣ್ಣ ಅವರ ಪಾತ್ರಗಳು ಹೇಗಿರಲಿವೆ ಎಂಬ ಬಗ್ಗೆಯೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಚಿತ್ರಕ್ಕೆ ಬಂಡವಾಳ ಹೂಡಿರುವ ಸನ್ ಪಿಕ್ಚರ್ಸ್ ಸಂಸ್ಥೆ ಕೇವಲ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿಯಬೇಕಿದೆ.