ಜನುಮ ದಿನ | ಹಾಸ್ಯಕ್ಕೊಂದು ಅಪೂರ್ವ ಭಾಷ್ಯ ಬರೆದ ನಟ ನರಸಿಂಹರಾಜು

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶೇಷ ಹಾಸ್ಯ ಪ್ರಜ್ಞೆಯಿಂದ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ 99ನೇ ಹುಟ್ಟು ಹಬ್ಬದ ಸಂಭ್ರಮ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ 1923 ಜುಲೈ 24ರಂದು ಜನಿಸಿದ ನರಸಿಂಹರಾಜು ಅವರು, ತಮ್ಮ ನಾಲ್ಕನೇ ವಯಸ್ಸಿಗೆ ರಂಗಭೂಮಿಗೆ ಕಾಲಿಟ್ಟರು. ನಂತರ ಕನ್ನಡ ಚಿತ್ರರಂಗದ ಹಾಸ್ಯ ಲೋಕದಲ್ಲಿ ಬರೆದದ್ದು ಇತಿಹಾಸವೇ ಸರಿ.

‍ಡಾ. ರಾಜ್‌ಕುಮಾರ್ ಅವರೊಂದಿಗೆ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ 1954ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಆಗಿನ ಕಾಲದಲ್ಲಿ ನಿರ್ಮಾಪಕರು, ನಿರ್ದೇಶಕರು, ಸಿನಿಮಾ ಮಾಡುವ ಮೊದಲು ನರಸಿಂಹರಾಜು ಅವರ ಡೆಟ್ ಪಡೆದು ನಂತರ ನಮ್ಮನ್ನು ಸಂಪರ್ಕಿಸುತ್ತಿದ್ದರು ಎಂದು ರಾಜ್‌ಕುಮಾರ್‍‌ ಅವರೇ ಹೇಳಿದ ಮಾತಿದೆ. ಅಷ್ಟರ ಮಟ್ಟಿಗೆ ಹಾಸ್ಯ ಪ್ರಜ್ಞೆಯನ್ನು ಹೊಂದಿದ ಇವರು ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದರು.

  • ನಾನಲ್ಲ ಸ್ಟಾರ್ ನರಸಿಂಹರಾಜು ಕನ್ನಡದ ಮೊದಲ ಸೂಪರ್ ಸ್ಟಾರ್ ಎಂದಿದ್ದ ರಾಜ್‌

ನರಸಿಂಹರಾಜು ಅವರ ನೆನಪಿನ ಬಗ್ಗೆ, ಅವರ ಮೊಮ್ಮಗ ಮತ್ತು ಚಲನಚಿತ್ರ ನಿರ್ದೇಶಕ ಎಸ್ ಡಿ ಅರವಿಂದ್ ನರಸಿಂಹರಾಜು ಅವರು ಈದಿನ.ಕಾಮ್‌ ಜೊತೆ ಹೀಗೆ ಮಾತನಾಡಿದ್ದಾರೆ.

"ನಾನು ನನ್ನ ಚಿಕ್ಕಮ್ಮ ಸುಧಾ ನರಸಿಂಹರಾಜು ಅವರು ಸೇರಿ 'ದೂರದರ್ಶನ' ವಾಹಿನಿಗೆ 'ಹಾಸ್ಯ ಚರ್ಕವರ್ತಿ' ಎಂಬ ಸರಣಿ ಮಾಡಿದಾಗ, ರಾಜ್‌ಕುಮಾರ್‌, ದ್ವಾರಕೀಶ್, ಹಾಗೂ ವಿಷ್ಣುವರ್ಧನ್ ಅವರನ್ನು ಸೇರಿದಂತೆ 1998ರ ಕಾಲದಲ್ಲಿ ತಾತಾರ ಜೊತೆಗೆ ಅಭಿನಯಿಸಿದ್ದ ಎಲ್ಲ ಕಲಾವಿದರ ಸಂದರ್ಶನ ಮಾಡಿದ್ದೆ. ರಾಜ್‌ಕುಮಾರ್ ಅವರ ಜೊತೆ ಮಾತನಾಡುವಾಗ ನಾವೇನು ಸ್ಟಾರ್‌ಗಳಲ್ಲ. 'ನರಸಿಂಹರಾಜು ಅವರೇ ಕನ್ನಡದ ಮೊದಲ ಸೂಪರ್ ಸ್ಟಾರ್' ಎಂದು ಹೇಳಿದಾಗ, ಇಷ್ಟು ದೊಡ್ಡ ಕಲಾವಿದರು, ನಮ್ಮ ತಾತಾರ ಬಗ್ಗೆ ಈ ರೀತಿ ಹೇಳಿದಾಗ ಆಶ್ಚರ್ಯವಾಗಿತ್ತು. ಹಿರಿಯ ಕಲಾವಿದರ ಜೊತೆ ಮಾತನಾಡಿದಾಗ ನನಗೆ ತಿಳಿದಿದ್ದು ಒಬ್ಬ ಕಲಾವಿದ ಆಗಿ, ವ್ಯಕ್ತಿಯಾಗಿ, ಅವರ ಜೀವನ ಶೈಲೆ ಹೇಗಿತ್ತು. ರಾಜ್‌ಕುಮಾರ್ ಅವರ ಜೊತೆ ನಾಟಕ ಮಾಡುವಾಗ, ಅವರು ಪಟ್ಟ ಕಷ್ಟಗಳು, ಮದ್ರಾಸ್ ಜೀವನದ ಬಗ್ಗೆ ನನಗೆ ಪರಿಚಯವಾಯಿತು" ಎಂದು ಹೇಳಿದರು.

"ಅವರ ಕೊನೆ ಸಿನಿಮಾ 'ಪ್ರೀತಿ ಮಾಡು ತಮಾಷೆ ನೋಡು' ಎಂಬ ಸಿನಿಮಾ ಡಬ್ಬಿಂಗ್‌ ನಡೆಯುವಾಗ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋಗಿದ್ದ ನೆನಪಿದೆ" ಎಂದರು

  • ಸಾಹಿತ್ಯದ ಆಸಕ್ತಿ ಹೊಂದಿದ್ದ ನರಸಿಂಹರಾಜು ಅವರು

“ತಾತಾ ನಮ್ಮನ್ನು ಬಿಟ್ಟುಹೋದಾಗ ನಾನು ಚಿಕ್ಕವನು. ಅವರನ್ನು ಸಿನಿಮಾದಲ್ಲಿ ನೋಡಿದಕ್ಕಿಂತ ಹೆಚ್ಚಾಗಿ ಮನೆಯಲ್ಲೇ ನೋಡಿದ ನೆನಪು ನನಗೆ. ಅವರ ಆಪ್ತರ ಜೊತೆ ತುಂಬಾ ಮಾತನಾಡುತ್ತಿದ್ದರು. ಹಾಸ್ಯ ಮಾಡುತ್ತಿದ್ದರು, ಮುಖ್ಯವಾಗಿ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದುದರಿಂದ ಸಾಹಿತ್ಯ ಮತ್ತು ಪುಸ್ತಕದ ಬಗ್ಗೆ ಮಾತನಾಡುತ್ತಿದ್ದರು. ಪುಸ್ತಕ ಓದುತ್ತಿದ್ದರು. ಮನೆಯಲ್ಲಿ ಇದ್ದಾಗ ತುಂಬಾ ಗಂಭೀರವಾಗಿ ಇರುತ್ತಿದ್ದರು. ಸಿನಿಮಾದಂತೆ ಮನೆಯಲ್ಲಿ ಹೆಚ್ಚು ಹಾಸ್ಯ ಮಾಡುತ್ತಿರಲಿಲ್ಲ. ಒಬ್ಬ ತಾತಾ ಹೇಗಿರಬೇಕು ಹಾಗೇ ನಮ್ಮೊಂದಿಗೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದರು. ಹಬ್ಬ ಬಂದರೆ ಸಾಕು ತಾತಾ ಅವರೇ ಎಲ್ಲ ಮೊಮ್ಮಕಳನ್ನು ಸೇರಿಸಿ, ತೆಲೆಗೆ ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಿದ್ದರು. ಮಕ್ಕಳಿಗೆ ತಲೆ ಕೂದಲ ವಿನ್ಯಾಸದ ಬಗ್ಗೆ ಆಗಿರಬೇಕು ಈಗಿರಬೇಕು ಎಂದು ತಾತಾನೇ ಕುದ್ದಾಗಿ ನಿಂತು ಹೇರ್‍ಕಟ್‌ ಮಾಡಿಸುತ್ತಿದ್ದರು".

  • ಹುಟ್ಟೂರಲ್ಲಿ ನರಸಿಂಹರಾಜು ಅವರ ಸ್ಮಾರಕ ಭವನ ನಿರ್ಮಾಣ

"ಮುಂದಿನ ವರ್ಷ ತಾತಾ ಜನಿಸಿ ನೂರು ವರ್ಷ ತುಂಬುತ್ತದೆ. ಜೊತೆಗೆ ಅವರ ಹುಟ್ಟೂರು ತಿಪಟೂರಿನಲ್ಲಿ ಸ್ಮಾರಕ ಭವನ ನಿರ್ಮಾಣವಾಗುತ್ತಿದೆ. ಸರ್ಕಾರ ಅವರ ಸ್ಮಾರಕ ಕೆಲಸವನ್ನು ಮುಗಿಸಿ ನೂರನೇ ವರ್ಷಕ್ಕೆ ಆದರೂ ಉದ್ಘಾಟನೆ ಮಾಡಲಿ ಅನ್ನೋದು ನಮ್ಮ ಆಸೆ. ಊರು ಊರಿಗೆ ನಾಟಕ ಮಾಡಲು ಹೋದಾಗ, ಊರಿನ ಜನರ ಜೊತೆ ಕೂತು ಮಾತನಾಡುತ್ತಾ, ಹರಟೆ ಹೊಡೆಯುತ್ತಾ, ಆಟವಾಡುತ್ತಾ ಇರುತ್ತಿದ್ದರು. ಆ ಊರಿನ ವಿಶೇಷತೆ ಬಗ್ಗೆ ತಿಳಿದುಕೊಂಡು ಬರುತ್ತಿದ್ದರು ಎಂದು 'ಹಾಸ್ಯ ಚರ್ಕವರ್ತಿ' ಕಾರ್ಯಕ್ರಮ ಮಾಡಿದಾಗ ಅವರನ್ನು ನೋಡಿದವರು ಈ ಬಗ್ಗೆ ಹೇಳಿದ್ದಾರೆ".

"ಉತ್ತರ ಕರ್ನಾಟಕದಲ್ಲಿ ತಾತಾನನ್ನು ‘ಹಲ್ಲುಬ್ಬ’ ಎಂದು ಕರೆಯುತ್ತಿದ್ದರು. 'ಹೇಯ್ ಹಲ್ಲುಬ್ಬ ಬಂದ ಹಲ್ಲುಬ್ಬ ಬಂದ' ಎಂದು ಅಷ್ಟು ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರಂತೆ. ನಾವೇನಾದರೂ ಅವರ ಊರಿಗೆ ಹೋದಾಗ ನರಸಿಂಹರಾಜು ಅವರ ಮೊಮ್ಮಗ ಎಂದು ತಿಳಿದಾಗ, ಮನೆಗೆ ಕರೆದು ಬಹಳ ಆತ್ಮೀಯವಾಗಿ ಊಟ ಮಾಡಿಸಿ ಕಳಿಸುತ್ತಾರೆ. ಅಷ್ಟೊಂದು ಪ್ರೀತಿ ಅವರು ಗಳಿಸಿದ್ದರು. ನಮಗೆ ಅವರಿಂದ ಸಿಕ್ಕ ಆಸ್ತಿ ಅದು. ಆ ಆಸ್ತಿ ಮುಂದೆ ಯಾವುದು ಲೆಕ್ಕಕ್ಕೆ ಬರುವುದಿಲ್ಲ" ಎಂದು ತಾತಾನನ್ನು ನೆನೆದು ಮಾತನಾಡಿದರು. 

  • ಪರಿಸ್ಥಿತಿ ಏನಿದ್ದರೂ ಮನೆಗೆ ಬಂದವರನ್ನು ಉಪಚರಿಸುತ್ತಿದ್ದರು ಅಪ್ಪ

ನರಸಿಂಹರಾಜು ಅವರ ಬಗ್ಗೆ ಮಗಳಾದ ಸುಧಾ ನರಸಿಂಹರಾಜು ಅವರು ಈದಿನ.ಕಾಮ್‌ ಜೊತೆ ಮಾತನಾಡುತ್ತ, " ಅಪ್ಪನಿಗೆ ಮನೆ ತುಂಬಾ ಜನರಿರಬೇಕಿತ್ತು. ಮನೆ ಪರಿಸ್ಥಿತಿ ಏನೇ ಇದ್ದರೂ ಮನೆಗೆ ಯಾರೇ ಬಂದರೂ ಉಪಾಚಾರ ಮಾಡಿ ಕಳಿಸುತ್ತಿದ್ದರು. ನಮ್ಮ ಮನೆ ಒಲೆಯೇ ಆರುತ್ತಿರಲಿಲ್ಲ ಅನ್ನುವಷ್ಟು ಜನರು ಬರುತ್ತಿದ್ದರು. ತಂದೆ ಸರಳವಾಗಿ ಬದುಕಿದ್ದರು. ಅಪ್ಪನ ಜೊತೆ ಕಳೆದ ಬಾಲ್ಯ ತುಂಬ ಸುಂದರವಾಗಿತ್ತು. ನಮ್ಮ ಶಿಕ್ಷಣದ ಮೇಲೆ ತುಂಬಾ ಕಾಳಜಿ ಮಾಡುತ್ತಿದ್ದರು. ಬಿಡುವಿನ ಸಮಯದಲ್ಲಿ  ಮದ್ರಾಸ್‌ನಲ್ಲಿ ಇದ್ದಾಗ ಸಮುದ್ರದ ಕಡೆ ಕರೆದುಕೊಂಡು ಹೋಗುತ್ತಿದ್ದರು. ಕೋಪಿಷ್ಟನು ಆಗಿದ್ದರು. ಆದರೆ, ಆ ಕೋಪಕ್ಕೆ ಪ್ರಮುಖ ಕಾರಣವಿರುತ್ತಿತ್ತು" ಎಂದು ಹೇಳಿದರು.

  • ಬಾಲ ನರಸಿಂಹರಾಜ ಅಯ್ಯರ್ ಎಂದು ನಾಮಕರಣ ಮಾಡಿದ ಜಿ ವಿ ಅಯ್ಯರ್ ಪತ್ನಿ

"ರಾಜ್‌ಕುಮಾರ್‍‌, ನರಸಿಂಹರಾಜು, ಬಾಲಣ್ಣ ಹಾಗೂ ಜಿ ವಿ ಅಯ್ಯರ್ ಅವರಿಗೆ ಕೈ ತುತ್ತು ನೀಡುತ್ತಿದ್ದ, ಜಿ ವಿ ಅಯ್ಯರ್ ಅವರ ಪತ್ನಿ ಸುಂದರಮ್ಮ ಅವರು ಈ ನಾಲ್ವರನ್ನು ಸೇರಿ 'ಬಾಲ ನರಸಿಂಹರಾಜ ಅಯ್ಯರ್' ಎಂದು ನಾಮಕರಣ ಮಾಡಿದ್ದರಂತೆ".

  • ಮಾವಿನ ಮರದ ಕೆಳಗೆ ಒಂದೇ ತಟ್ಟೆಯಲ್ಲಿ ಊಟ

"ಅಪ್ಪ ಸೆಟ್‌ನಲ್ಲಿ ತಮಾಷೆ ಮಾಡುತ್ತಾ ಇರುತ್ತಿದ್ದರಂತೆ. ರಾಜ್‌ಕುಮಾರ್ ಬಾಲಣ್ಣ ಅಯ್ಯರ್ ಅವರು ಒಬ್ಬರಿಗೊಬ್ಬರು ಚೆಷ್ಟೆ ಮಾಡುತ್ತಿದ್ದರಂತೆ. ಅವರಿಗೆ ದೇಸಿ ಊಟ ಇಷ್ಟವಾಗುತ್ತಿತ್ತು. ಎಲ್ಲ ಹಂಚಿಕೊಂಡು ಮಾವಿನ ಮರದ ಕೆಳಗೆ ಕೂತು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು" ಎಂದು ಹೇಳಿದರು.

  • ಒಂದು ದಿನದಲ್ಲಿ ಮೂರು ರಾಜ್ಯಕ್ಕೆ ಪ್ರಯಾಣ ಮಾಡಿದ್ದು, ಆಶ್ಚರ್ಯ

"ಅಪ್ಪನಿಗೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಬರುತ್ತಿತ್ತು. 24 ಗಂಟೆಯಲ್ಲಿ ನಾಲ್ಕು ಊರಿಗೆ ಹೋಗಿ ಬರುತ್ತಿದ್ದರು. ಚೆನ್ನೈಯಿಂದ ಬೆಂಗಳೂರಿಗೆ, ಬೆಂಗಳೂರಿಂದ ಮೈಸೂರು, ಮೈಸೂರಿಂದ ವಾಪಸ್ ಚೆನ್ನೈಗೆ ಹೋಗಿ ಅಲ್ಲಿಂದ ಹೈದ್ರಾಬಾದ್‌ಗೆ ಹೋಗಿ ಮತ್ತೆ ವಾಪಸ್ ಚೆನ್ನೈಗೆ ಬಂದಿದ್ದರು. ಈ ಬಗ್ಗೆ ನನಗೆ ಇವತ್ತಿಗೂ ಆಶ್ಚರ್ಯವಾಗುತ್ತದೆ. ಅಪ್ಪ ಅಷ್ಟು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದರು. ಅವರ 26 ವರ್ಷದ ಸಿನಿ ಬದುಕಿನಲ್ಲಿ 256 ಸಿನಿಮಾಗಳನ್ನು ಮಾಡಿದ್ದಾರೆ. ಆಗಿನ ಕಾಲದಲ್ಲಿ ಮಾಡುತ್ತಿದ್ದ ಎಲ್ಲ ಸಿನಿಮಾದಲ್ಲಿ ಅಪ್ಪ ಇರುತ್ತಿದ್ದರು. ನಾಯಕ ನಟರಿಗೆ ಸಮನಾಗಿ ಇವರಿಗೂ ಕಥೆಯನ್ನು ಎಣೆಯುತ್ತಿದ್ದರು. ಅಪ್ಪ ಇದ್ದ ಕಾಲ ಸ್ವರ್ಣಯುಗ" ಎಂದು ಅಪ್ಪನನ್ನು ನೆನೆದರು.

ನರಸಿಂಹರಾಜು ಮತ್ತು ರಾಜ್ ಕುಮಾರ್ ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಅದ್ಭುತವೇ ಸರಿ. ತಾಯಿ ವೆಂಕಟಲಕ್ಷ್ಮಮ್ಮ, ತಂದೆ ರಾಮರಾಜು ಪೋಲೀಸ್ ಇಲಾಖೆಯ ನೌಕರರಾಗಿದ್ದರು. ಬಾಲ್ಯದಲ್ಲೇ ಅಭಿನಯಕ್ಕೆ ಬಂದ ಅವರ ಬದುಕೇ ಕಲೆಯಾಗಿತ್ತು. 1979 ಜುಲೈ 11ರಂದು ನಿಧನರಾದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಹಾಸ್ಯ ಲೋಕವೇ ದುಃಖದ ಮಡಿಲಲ್ಲಿ ಮುಳುಗಿತು. ಹಾಸ್ಯ ಚಕ್ರವರ್ತಿ, ಹಾಸ್ಯ ಬ್ರಹ್ಮ , ಹಾಸ್ಯ ರತ್ನ ಬಿರುದು ಅವರ ಪ್ರತಿಭೆಗೆ ಸಿಕ್ಕ ಕೀರಿಟ.

ನಿಮಗೆ ಏನು ಅನ್ನಿಸ್ತು?
3 ವೋಟ್