
- ರಾಜಕೀಯ ಸೇರುವ ಇಚ್ಛೆಯಿಲ್ಲ ಎಂದು ಸ್ಪಷ್ಟಪಡಿಸಿದ ತ್ರಿಷಾ ಕೃಷ್ಣನ್
- ಯಾವ ಕಾರಣಕ್ಕೆ ವದಂತಿ ಹಬ್ಬಿದೆಯೆಂದು ತಿಳಿದಿಲ್ಲ ಎಂದ ನಟಿ
ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ತ್ರಿಷಾ ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಚರ್ಚೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ತ್ರಿಷಾ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಣಿರತ್ನಂ ನಿರ್ದೇಶನದ 'ಪೊನ್ನಿನ್ ಸೆಲ್ವನ್' ಚಿತ್ರದಲ್ಲಿ ತ್ರಿಷಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷಿತ 'ಪೊನ್ನಿನ್ ಸೆಲ್ವನ್' ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ತ್ರಿಷಾ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾಜಕೀಯ ಪ್ರವೇಶದ ಬಗ್ಗೆ ನಟಿಯನ್ನು ಪ್ರಶ್ನಿಸಲಾಗಿದೆ.
ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ತ್ರಿಷಾ, “ನನಗೆ ರಾಜಕೀಯದ ಗಂಧ ಗಾಳಿಯೂ ಅರ್ಥವಾಗುವುದಿಲ್ಲ. ನಾನು ರಾಜಕೀಯ ಸೇರುತ್ತೇನೆ ಎಂಬ ಸುದ್ದಿ ನಿಜಕ್ಕೂ ಸುಳ್ಳು. ಈ ರೀತಿಯ ವದಂತಿಗಳನ್ನು ಯಾರು, ಯಾವ ಕಾರಣಕ್ಕೆ ಹಬ್ಬಿಸುತ್ತಿದ್ದಾರೆ ಎಂಬುದು ಕೂಡ ಗೊತ್ತಿಲ್ಲ. ನನಗೆ ರಾಜಕೀಯ ಸೇರುವ ಯಾವ ಯೋಚನೆಯೂ ಇಲ್ಲ" ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಸಬರಿಗೆ ಅವಕಾಶ ನೀಡಲು ಸಜ್ಜಾದ ಡಾಲಿ ಧನಂಜಯ್
ತ್ರಿಷಾ ಸದ್ಯದಲ್ಲೇ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ತಮಿಳುನಾಡಿನ ಸ್ಥಳೀಯ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿದ್ದವು. ತಮಗೆ ರಾಜಕೀಯ ಸೇರುವ ಯಾವುದೇ ಇಚ್ಛೆಯಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ನಟಿ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.