ಲೈಗರ್‌ ಟ್ರೈಲರ್‌ | ಬಾಕ್ಸಿಂಗ್‌ ಚಾಂಪಿಯನ್‌ ಆಗಿ ಮಿಂಚಿದ ವಿಜಯ್‌ ದೇವರಕೊಂಡ

liger-vijay
  • ಭಿನ್ನ ಪಾತ್ರದಲ್ಲಿ ಗಮನ ಸೆಳೆದ ರಮ್ಯಾ ಕೃಷ್ಣನ್‌
  • ಲೈಗರ್‌ಗೆ ಎದುರಾಳಿಯಾದ ಮೈಕ್‌ ಟೈಸನ್‌

ತೆಲುಗಿನ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಲೈಗರ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. 2 ನಿಮಿಷಗಳ ಟ್ರೈಲರ್‌ನಲ್ಲಿ ವಿಜಯ್‌ ದೇವರಕೊಂಡ ಬಾಕ್ಸಿಂಗ್‌ ಚಾಂಪಿಯನ್‌ ಆಗಿ ಮಿಂಚಿದ್ದಾರೆ.

ಊರು ಬಿಟ್ಟು ತನ್ನ ತಾಯಿಯೊಂದಿಗೆ ಮುಂಬೈಗೆ ವಲಸೆ ಬರುವ ತೊದಲು ಮಾತನಾಡುವ ಹುಡುಗನೊಬ್ಬ ಮುಂದೆ ಬಾಕ್ಸಿಂಗ್‌ ಚಾಂಪಿಯನ್‌ ಆಗಿ ಬೆಳೆಯುತ್ತಾನೆ. ಬಡ ಕುಟುಂಬದ ಹಿನ್ನೆಲೆಯ ಲೈಗರ್‌ ಮುಂಬೈನ ಗಲ್ಲಿಗಳಿಂದ ಸಾಗಿ ಬಾಕ್ಸಿಂಗ್‌ ಅಖಾಡದಲ್ಲಿ ತಾರೆಯಾಗಿ ಮಿಂಚುವ ಝಲಕ್‌ ಟ್ರೈಲರ್‌ನಲ್ಲಿದೆ. ಚಿತ್ರದಲ್ಲಿ ವಿಜಯ್‌ ದೇವರಕೊಂಡ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ರಮ್ಯಾ ಕೃಷ್ಣನ್‌ ಖಡಕ್‌ ಡೈಲಾಗ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಬಾಲಿವುಡ್‌ ನಟಿ ಅನನ್ಯಾ ಪಾಂಡೆ ವಿಜಯ್‌ಗೆ ಜೊತೆಯಾಗಿದ್ದು, ಅಮೆರಿಕಾ ಮೂಲದ ಖ್ಯಾತ ಬಾಕ್ಸಿಂಗ್‌ ಪಟು ಮೈಕ್‌ ಟೈಸನ್‌ ವಿಜಯ್‌ಗೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ.

ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಚಿತ್ರದ ತೆಲುಗು ಅವತರಣಿಕೆಯ ಟ್ರೈಲರ್‌ ಎರಡೂವರೆ ಲಕ್ಷ ವೀಕ್ಷಣೆ ಪಡೆದರೆ, ಹಿಂದಿಯ ಟ್ರೈಲರ್‌ ಅನ್ನು 10 ಲಕ್ಷ ಮಂದಿ ನೋಡಿದ್ದಾರೆ. ತಮಿಳು ಟ್ರೈಲರ್‌ ನಾಲ್ಕುವರೆ ಲಕ್ಷ, ಕನ್ನಡ ಮತ್ತು ಮಲಯಾಳಂ ಅವತರಣಿಕೆಯ ಟ್ರೈಲರ್‌ಗಳು ತಲಾ ಒಂದು ಲಕ್ಷ ವೀಕ್ಷಣೆ ಪಡೆದಿವೆ.

ಈ ಸುದ್ದಿ ಓದಿದ್ದೀರಾ? ಸುದೀಪ್‌ಗೆ ಕೋವಿಡ್‌ ಸೋಂಕು ತಗಲಿಲ್ಲ; ಜಾಕ್‌ ಮಂಜು ಸ್ಪಷ್ಟನೆ

ಟಾಲಿವುಡ್‌ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಲೈಗರ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಬಾಲಿವುಡ್‌ನ ಜನಪ್ರಿಯ ಚಿತ್ರನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್‌ ಬಂಡವಾಳ ಹೂಡಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ 5 ಭಾಷೆಗಳಲ್ಲಿ 'ಲೈಗರ್‌' ಸಿದ್ಧಗೊಂಡಿದ್ದು, ಆಗಸ್ಟ್‌ 25ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್