ಜೊತೆ ಜೊತೆಯಲಿ ಧಾರಾವಾಹಿ ಆಫರ್ ಬಂದಿದ್ದು ಸತ್ಯ | ಅನೂಪ್ ಭಂಡಾರಿ

jote joteyali
  • ಮುಗಿಯದ ʼಜೊತೆ ಜೊತೆಯಲಿʼ ಜಟಾಪಟಿ
  • ಆರ್ಯವರ್ಧನ್‌ ಪಾತ್ರ ನಿರಾಕರಿಸಿದ ಅನೂಪ್‌ ಭಂಡಾರಿ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ತಮಗೆ ಆಫರ್‌ ಬಂದಿತ್ತೇ ಎಂಬ ಪ್ರಶ್ನೆಗೆ ವಿಕ್ರಾಂತ್‌ ರೋಣ ನಿರ್ದೇಶಕ ಅನೂಪ್‌ ಭಂಡಾರಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ʼಜೊತೆ ಜೊತೆಯಲಿʼ ಧಾರಾವಾಹಿಯಿಂದ ನಟ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಅನಿರುದ್ಧ್ ಮತ್ತು ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಅವರ ನಡುವಿನ ವೈಮನಸ್ಸೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಧಾರಾವಾಹಿಯಿಂದ ಹೊರಬಂದ ಮೇಲೆ ಆ ಪಾತ್ರವನ್ನು ಯಾರು ಮುಂದುವರೆಸುತ್ತಾರೆ ಎಂಬ ಪ್ರಶ್ನೆಗಳು ಗರಿಗೆದರಿವೆ. ಆರ್ಯವರ್ಧನ್‌ ಪಾತ್ರಕ್ಕೆ ಸರಿ ಹೊಂದುವ ಕಲಾವಿದರ ಹುಡುಕಾಟದಲ್ಲಿರುವ ಆರೂರು ಜಗದೀಶ್‌ ಮತ್ತು ತಂಡ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಸಂಪರ್ಕಿಸಿದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿರಲಿಲ್ಲ.

ಈ ಬೆಳವಣಿಗೆಗೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅನೂಪ್‌ ಭಂಡಾರಿ, ಜೊತೆ ಜೊತೆಯಲಿ ಧಾರಾವಾಹಿಯಿಂದ ನನಗೆ ʼಆಫರ್ʼ ಬಂದಿದ್ದು ನಿಜ. ನಾನು ಆರ್ಯವರ್ಧನ್‌ ಪಾತ್ರಕ್ಕೆ ಹೋಲುವ ರೀತಿ ಇದ್ದೇನೆ ಎಂಬ ಕಾರಣಕ್ಕೆ ನಿರ್ದೇಶಕರು ನನ್ನನ್ನು ಸಂಪರ್ಕ ಮಾಡಿದರು. ಆದರೆ, ನಾನು ಅವರ ಆಫರ್ ಅನ್ನು ತಿರಸ್ಕರಿಸಿದ್ದೇನೆ. ಸದ್ಯ ಹೊಸ ಸಿನಿಮಾವೊಂದರ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಆ ಸಿನಿಮಾ ಚಿತ್ರಕಥೆ ಸಿದ್ಧಪಡಿಸುತ್ತಿದ್ದೇನೆ. ಹೀಗಾಗಿ ಧಾರಾವಾಹಿಯಲ್ಲಿ ನಟಿಸಲು ಸಾಧ್ಯವಾಗುವುತ್ತಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್‌ ಪಾತ್ರ ನಿಭಾಯಿಸುತ್ತಿದ್ದ ಅನಿರುದ್ಧ್‌ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ಬಳಿಕ ಚಿಕ್ಕಪುಟ್ಟ ವಿಚಾರಗಳಿಗೂ ತಂತ್ರಜ್ಞರ ಜತೆಗೆ ತಗಾದೆ ತೆಗೆಯುತ್ತಿದ್ದರು. ಇತ್ತೀಚೆಗೆ ಚಿತ್ರೀಕರಣದ ವೇಳೆ ಸಹಾಯಕ ನಿರ್ದೇಶಕರಿಗೆ ಮೂರ್ಖ ಎಂದು ನಿಂದಿಸಿ ರಂಪಾಟ ಮಾಡಿ ಶೂಟಿಂಗ್‌ ಸೆಟ್‌ನಿಂದ ಹೊರ ನಡೆದಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಅನಿರುದ್ಧ್‌ ಅವರನ್ನು ಧಾರಾವಾಹಿಯಿಂದ ಕೈಬಿಟ್ಟಿರುವುದಾಗಿ ನಿರ್ದೇಶಕ ಆರೂರು ಜಗದೀಶ್‌ ಸ್ಪಷ್ಟನೆ ನೀಡಿದ್ದರು. ಕಿರುತೆರೆ ನಿರ್ಮಾಪಕರ ಸಂಘದ ಸದಸ್ಯರು ತಾವು ನಿರ್ಮಾಣ ಮಾಡುವ ಯಾವುದೇ ಧಾರಾವಾಹಿಯಲ್ಲೂ ಅನಿರುದ್ಧ್‌ಗೆ ಅವಕಾಶ ನೀಡದಿರಲು ಒಕ್ಕೊರಲ ನಿರ್ಣಯ ಕೈಗೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊನೆಗೂ ಸೆಟ್ಟೇರಿತು ಪುಷ್ಪ-2 ; ಸಿನಿಮಾ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್‌

ಈ ವಿಚಾರಕ್ಕೆ ಸಂಬಂಧಿಸಿ ಅನಿರುದ್ಧ್‌ ಕೂಡ ಎರಡು ಬಾರಿ ಸುದ್ದಿಗೋಷ್ಠಿಯನ್ನು ನಡೆಸಿದ್ದು, ನಿರ್ದೇಶಕರು ಕಲಾವಿದರಿಗೆ ಮೂಲಸೌಕರ್ಯಗಳನ್ನು ಒದಗಿಸುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ʼಸೀನ್‌ ಪೇಪರ್‌ʼ ನೀಡುತ್ತಿರಲಿಲ್ಲ. ಕಥೆಯ ವಿಚಾರದಲ್ಲಿ ಮಾತ್ರ ನನ್ನ ಮತ್ತು ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ನಾನು ಅಹಂಕಾರದಿಂದ ನಡೆದುಕೊಂಡಿಲ್ಲ ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.  

ನಿಮಗೆ ಏನು ಅನ್ನಿಸ್ತು?
1 ವೋಟ್