3,200ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ ವಿಕ್ರಾಂತ್‌ ರೋಣ

Kichcha-Sudeep
  • ಕರ್ನಾಟಕದಲ್ಲಿ 400 ಚಿತ್ರಮಂದಿರಗಳಲ್ಲಿ ತೆರೆಗೆ
  • ಪಾಕಿಸ್ತಾನದಲ್ಲೂ ಸಿನಿಮಾ ಪ್ರದರ್ಶನಕ್ಕೆ ಚಿಂತನೆ

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್‌ ರೋಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು ಮುಂಬೈನಲ್ಲಿ ಚಿತ್ರದ ಸೆಲೆಬ್ರೆಟಿ ಶೋ ಕೂಡ ಆಯೋಜನೆಗೊಂಡಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಚಿತ್ರದ ನಿರ್ಮಾಪಕ ಜ್ಯಾಕ್‌ ಮಂಜು, 'ವಿಕ್ರಾಂತ್‌ ರೋಣ' ಜಗತ್ತಿನಾದ್ಯಂತ 3,200ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ 'ವಿಕ್ರಾಂತ್‌ ರೋಣ' ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜು, "ಸದ್ಯಕ್ಕೆ ರಾಜ್ಯದಲ್ಲಿ 390 ಚಿತ್ರಮಂದಿರಗಳು ಬುಕ್‌ ಆಗಿವೆ. ಇನ್ನೂ 15ರಿಂದ 20 ಚಿತ್ರಮಂದಿರಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿವೆ. ಜುಲೈ 28ರ ವೇಳೆಗೆ 400ರಿಂದ 425 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಕೆಲ ಕಿಡಿಕೇಡಿಗಳು ನಮ್ಮ ಚಿತ್ರ 3ಡಿಯಲ್ಲಿ ತೆರೆ ಕಾಣುವುದಿಲ್ಲ ಎಂದು ಅಪಪ್ರಚಾರ ಶುರುವಿಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, "ವಿಕ್ರಾಂತ್‌ ರೋಣ ಜಗತ್ತಿನಾದ್ಯಂತ 3ಡಿ ಮತ್ತು 2ಡಿ ಎರಡರಲ್ಲೂ ತೆರೆಗೆ ಬರುತ್ತಿದೆ. 3ಡಿ ಪರದೆಗಳಿಲ್ಲದ ಊರುಗಳಲ್ಲಿ 2ಡಿಯಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಊರ್ವಶಿ ಚಿತ್ರಮಂದಿರದ ವಿಚಾರದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾಗಿತ್ತು. ಊರ್ವಶಿ ಚಿತ್ರಮಂದಿರದ ಪರದೆಗಳನ್ನು ಈಗ 3ಡಿಗೆ ಗುಣಮಟ್ಟಕ್ಕೆ ಬದಲಾಯಿಸುತ್ತಿದ್ದಾರೆ. ವೀಕ್ಷಕರು 3ಡಿ ಎಫೆಕ್ಟ್‌ನಲ್ಲಿ ಸಿನಿಮಾ ನೋಡಲು ಬೇಕಾದ ಆಕ್ಟೀವ್‌ ಗ್ಲಾಸ್‌ಗಳನ್ನು ಚಿತ್ರಮಂದಿರದ ಮಾಲೀಕರು ಹೊರದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸಿನಿಮಾ ಬಿಡುಗಡೆಗೂ ಆಗುವುದಕ್ಕೂ ಮೊದಲು ಆ ಗ್ಲಾಸ್‌ಗಳು ಬೆಂಗಳೂರು ತಲುಪುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ನಿಗದಿತ ವೇಳೆಗೆ ಗ್ಲಾಸ್‌ಗಳು ಸಿಗದಿದ್ದರೆ ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ಕೆಲ ದಿನಗಳು 2ಡಿಯಲ್ಲಿಯೇ ಪ್ರದರ್ಶನ ಮಾಡಲಾಗುವುದು, ನಂತರ 3ಡಿ ವ್ಯವಸ್ಥೆಯನ್ನು ಅಳವಡಿಸಲಾಗುವುದು" ಎಂದಿದ್ದಾರೆ.

ಜುಲೈ 27ರಂದು 27 ದೇಶಗಳಲ್ಲಿ ವಿಕ್ರಾಂತ್‌ ರೋಣ ಪ್ರೀಮಿಯರ್‌ ಶೋಗಳು ನಡೆಯಲಿವೆ ಎಂದಿರುವ ಮಂಜು, ದುಬೈ, ಜರ್ಮನಿ ಅಮೆರಿಕ ಸೇರಿದಂತೆ ಕನಿಷ್ಠ 30ರಿಂದ 31 ದೇಶಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಕಳೆದ ಮೂರು ತಿಂಗಳಿನಿಂದ ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಹೀಗಾಗಿ ಪಾಕಿಸ್ತಾನದಲ್ಲೂ ಸಿನಿಮಾ ಬಿಡುಗಡೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.

'ವಿಕ್ರಾಂತ್‌' ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರವಾದ್ದರಿಂದ ಚಿತ್ರದ ಟಿಕೆಟ್‌ ದರ ಹೆಚ್ಚಿರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸರ್ಕಾರ ನಿಗದಿ ಮಾಡಿರುವಂತೆ ಟಿಕೆಟ್‌ ದರ ₹236 ರೂಪಾಯಿಯೇ ಇರಲಿದೆ. ನಾವು ಟಿಕೆಟ್‌ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುತ್ತಿಲ್ಲ. ವಾರಾಂತ್ಯದಲ್ಲಿ ದರದಲ್ಲಿ ಕೊಂಚ ಮಟ್ಟಿಗೆ ವ್ಯತ್ಯಯವಾಗಬಹುದು. ಉಳಿದಂತೆ ಸಾಮಾನ್ಯ ದರವೇ ಇರಲಿದೆ ಎಂದು ಸ್ಪಷ್ಟಪಡಿಸಿದರು. 

ಈ ಸುದ್ದಿ ಓದಿದ್ದೀರಾ? ಲಕ್ಕಿಮ್ಯಾನ್‌ ಟೀಸರ್‌ ಬಿಡುಗಡೆ; ದೇವರಾಗಿ ಬಂದ ಪುನೀತ್‌ ರಾಜ್‌ಕುಮಾರ್‌

ಇದೇ ವೇಳೆ ಸಿನಿಮಾ ಟಿಕೆಟ್‌ ಖರೀದಿಸಲು ಬಳಕೆಯಾಗುವ ʼಬುಕ್‌ ಮೈ ಶೋʼ ಜಾಲತಾಣದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, "ಈ ʼಬುಕ್‌ ಮೈ ಶೋʼನವರು ಸಿನಿಮಾ ಮಂದಿಯ ಮೇಲೆ ಸವಾರಿ ಮಾಡುತ್ತಿದ್ದಾರೆ. ನಾವು ಕಷ್ಟಪಟ್ಟು ಮಾಡಿದ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲೂ ಕೂಡ ಹಣ ಪಾವತಿಸಿ ಎಂದು ಬೇಡಿಕೆ ಇಡುತ್ತಾರೆ. ಒಬ್ಬ ನಿರ್ಮಾಪಕ ಹಣ ಹೂಡಿ ಸಿನಿಮಾ ಮಾಡುವುದರಿಂದಲೇ ಈ ಬುಕ್‌ ಮೈಶೋನಂತಹ ವೇದಿಕೆಗಳು ಜೀವಂತವಾಗಿವೆ. ನಮ್ಮಿಂದಲೇ ವ್ಯವಹಾರ ನಡೆಸುವ ಇವರು ನಮ್ಮ ಮೇಲೆ ಸವಾರಿ ಮಾಡುವಂತಾಗಿದ್ದಾರೆ" ಎಂದು ಕಿಡಿಕಾರಿದರು.

ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿರುವ 'ವಿಕ್ರಾಂತ್‌ ರೋಣ' ಸಿನಿಮಾ ಕನ್ನಡ, ತಮಿಳು, ತೆಲುಗು ಸೇರಿ 5 ಭಾಷೆಗಳಲ್ಲಿ ಸಿದ್ಧಗೊಂಡಿದ್ದು, ಜುಲೈ 28ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್