
- 5ನೇ ದಿನ ₹6 ಕೋಟಿಗೆ ಇಳಿದ ಸುದೀಪ್ ಸಿನಿಮಾ ಗಳಿಕೆ
- ರಣಬೀರ್ ಕಪೂರ್ ಸಿನಿಮಾ ಮೀರಿಸಿ ಆದಾಯ ಸಂಗ್ರಹ
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಗಳಿಕೆ ಗಣನೀಯವಾಗಿ ಇಳಿಕೆಯಾಗಿದೆ. ತೆರೆಕಂಡ ಮೊದಲ ದಿನವೇ ಬರೋಬ್ಬರಿ ₹35 ಕೋಟಿ ಕಲೆ ಹಾಕಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದ್ದ ಸಿನಿಮಾ, ವಾರ ಕಳೆಯುವ ಮೊದಲೇ ಒಂದಂಕಿಯ ಗಳಿಕೆಗೆ ಬಂದು ನಿಂತಿದೆ.
ಚಿತ್ರತಂಡ ಘೋಷಿಸಿಕೊಂಡಿದ್ದ ಮೊದಲ ದಿನದ ಗಳಿಕೆ ಬಿಟ್ಟರೆ ಈವರೆಗೆ ಚಿತ್ರ ನಿಖರವಾಗಿ ಎಷ್ಟು ಗಳಿಕೆ ಮಾಡಿದೆ ಎಂದು ನಿರ್ಮಾಪಕರಾಗಲಿ, ವಿತರಕರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ರಾಷ್ಟ್ರೀಯ ಮಾಧ್ಯಮಗಳ ವರದಿ ಮತ್ತು ಕೆಲ ಸಿನಿ ವಿಶ್ಲೇಷಕರ ಪ್ರಕಾರ ಚಿತ್ರ ಮೊದಲ ದಿನ ₹35 ಕೋಟಿ, ಎರಡನೇ ದಿನ ₹20 ರಿಂದ ₹25 ಕೋಟಿ, ಮೂರನೇ ದಿನ ₹15 ಕೋಟಿ ಗಳಿಸಿದ್ದು, ನಾಲ್ಕನೇ ದಿನವಾದ ಭಾನುವಾರ ₹29 ಕೋಟಿ ಗಳಿಸಿದೆ ಎನ್ನಲಾಗಿತ್ತು. ಆದರೆ, ಸೋಮವಾರದ ಹೊತ್ತಿಗೆ ಚಿತ್ರದ ಗಳಿಕೆ ಗಣನೀಯವಾಗಿ ಕಡಿಮೆಯಾಗಿದ್ದು, 5ನೇ ದಿನ ಎಲ್ಲ ಭಾಷೆಗಳಲ್ಲೂ ಸೇರಿ ವಿಕ್ರಾಂತ್ ರೋಣ ಗಳಿಸಲು ಸಾಧ್ಯವಾಗಿದ್ದು ಕೇವಲ ₹6 ಕೋಟಿ.
ಅನಗತ್ಯ ತಿರುವುಗಳು, 'ರಂಗಿತರಂಗ' ಚಿತ್ರದ ಛಾಯೆ ಈ ಎಲ್ಲ ಕಾರಣಗಳಿಗೆ 'ವಿಕ್ರಾಂತ್ ರೋಣ' ಚಿತ್ರ ಟೀಕೆಗೆ ಒಳಗಾಗುತ್ತಿದೆ. ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ನೀಡುತ್ತಿರುವ ಮಿಶ್ರ ಪ್ರತಿಕ್ರಿಯೆಗಳ ಪರಿಣಾಮದಿಂದಾಗಿ 'ವಿಕ್ರಾಂತ್ ರೋಣ' ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.
ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಇಳಿಮುಖ ಕಾಣುತ್ತಿದ್ದರೂ, ಬಾಲಿವುಡ್ ಚಿತ್ರಗಳಿಗೆ 'ವಿಕ್ರಾಂತ್ ರೋಣ' ಪ್ರಬಲ ಪೈಪೋಟಿ ನೀಡುತ್ತಿದೆ. 'ವಿಕ್ರಾಂತ್ ರೋಣ'ಗಿಂತಲೂ ಒಂದು ವಾರ ಮುಂಚೆ ತೆರೆಕಂಡಿದ್ದ ರಣಬೀರ್ ಕಪೂರ್ ನಟನೆಯ ʼಶಂಶೇರಾʼ ಸಿನಿಮಾ 9 ದಿನಗಳಲ್ಲಿ ವಿಶ್ವಾದ್ಯಂತ ₹60 ಕೋಟಿ ಗಳಿಕೆ ಮಾಡಿದೆ. ಅರ್ಜುನ್ ಕಪೂರ್ ಮತ್ತು ಜಾನ್ ಅಬ್ರಹಂ ಮುಖ್ಯಭೂಮಿಕೆಯ ʼಏಕ್ ವಿಲನ್ ರಿಟರ್ನ್ಸ್ʼ ಸಿನಿಮಾ ಕೂಡ ಜುಲೈ 29ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಈವರೆಗೆ ಗಳಿಕೆ ಮಾಡಿದ್ದು ಕೇವಲ ₹25 ಕೋಟಿ ರೂಪಾಯಿ. ಈ ಎರಡು ಸಿನಿಮಾಗಳಿಗೆ ತೀವ್ರ ಪೈಪೋಟಿ ನೀಡಿರುವ ವಿಕ್ರಾಂತ್ ತೆರೆಕಂಡ ಐದೇ ದಿನಕ್ಕೆ ₹110 ಕೋಟಿ ಗಳಿಕೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ದಯವಿಟ್ಟು ನನ್ನ ಸಿನಿಮಾ ನೋಡಿ; ಅಭಿಮಾನಿಗಳಿಗೆ ಆಮೀರ್ ಖಾನ್ ಮನವಿ
ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ವಿಕ್ರಾಂತ್ ರೋಣ ಅಲ್ಪ ಅವಧಿಯಲ್ಲಿ 100 ಕೋಟಿ ಕ್ಲಬ್ ಸೇರಿದ ಹಿನ್ನೆಲೆ ಸುದೀಪ್ ಮತ್ತು ಚಿತ್ರತಂಡ ವಿಜಯಯಾತ್ರೆ ಆರಂಭಿಸಿದ್ದು, ಇಂದು ಹೈದರಾಬಾದ್ನಲ್ಲಿ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಕೂಡ ನಡೆದಿದೆ.