ಈ ಸಿನಿಮಾ | ಗೊಂದಲದ ತಿರುವುಗಳ ನಡುವೆ ಸುದೀಪ್ ಅಭಿಮಾನಿಗಳಿಗೆ ರಸದೌತಣ ನೀಡುವ ವಿಕ್ರಾಂತ್‌ ರೋಣ

ಅನಗತ್ಯ ತಿರುವುಗಳಿಂದ ತ್ರಾಸದಾಯಕ ಎನ್ನಿಸಿದರೂ ಸುದೀಪ್‌ ಅಭಿಮಾನಿಗಳು ಒಮ್ಮೆ ನೋಡಬಹುದಾದ ಸಿನಿಮಾ. 
Kichcha-Sudeep

ಚಿತ್ರ: ವಿಕ್ರಾಂತ್‌ ರೋಣ | ನಿರ್ದೇಶನ: ಅನೂಪ್‌ ಭಂಡಾರಿ | ತಾರಾಗಣ: ಸುದೀಪ್‌, ನಿರೂಪ್‌ ಭಂಡಾರಿ, ಮಿಲನ ನಾಗರಾಜ್‌, ನೀತಾ ಅಶೋಕ್‌, ಜಾಕ್ವೆಲೀನ್‌ ಫರ್ನಾಂಡೀಸ್‌, ರವಿಶಂಕರ್‌ ಗೌಡ, ಸಿಧು ಮೂಲಿಮನಿ | ಭಾಷೆ: ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ | ಅವಧಿ: 2 ಗಂಟೆ 30 ನಿಮಿಷ

'ರಂಗಿತರಂಗ' ಚಿತ್ರದ ಮೂಲಕ ಹೊಸ ನಿರೂಪಣಾ ಶೈಲಿಯನ್ನು ಕಂಡುಕೊಂಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಈ ಬಾರಿ ಕಮರೊಟ್ಟು ಎಂಬ ನಿಗೂಢ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.‌ 3ಡಿಯಲ್ಲಿ ಸಿನಿಮಾ ಅದ್ಭುತ ಅನುಭವ ನೀಡುತ್ತದೆ. 'ವಿಕ್ರಾಂತ್ ರೋಣ'ನ ಊರಲ್ಲೂ 'ರಂಗಿತರಂಗ'ದ ಛಾಯೆ ಬಹುವಾಗಿ ಕಾಣುತ್ತದೆ.

ದಟ್ಟ ಕಾಡಿನ ನಡುವೆ ಹಬ್ಬಿರುವ ಕಮರೊಟ್ಟು. ನಿಗೂಢತೆಯ ಹಾಸು ಹೊಕ್ಕಾಗಿರುವ ಆ ಊರಿನಲ್ಲಿ ಸರದಿಯಾಗಿ ಕಾಣೆಯಾಗುವ ಎಳೆಯ ಮಕ್ಕಳು ಕೊನೆಗೆ ಪತ್ತೆಯಾಗುವುದು ಶವವಾಗಿ. ಈ ಸರಣಿ ಸಾವುಗಳ ಹಿನ್ನೆಲೆ ಹುಡುಕಿ ಹೊರಟ ಪೊಲೀಸ್ ಇನ್‌ಸ್ಪೆಕ್ಟರ್‌‌ನ ಕಗ್ಗೊಲೆ. ಈ ಎಲ್ಲಾ ಅನಾಹುತಗಳಿಗೂ ಭೂತಯ್ಯ, ಬ್ರಹ್ಮರಾಕ್ಷಸನೇ ಕಾರಣ ಎಂದು ಬಲವಾಗಿ ನಂಬಿರುವ ಕಮರೊಟ್ಟು ಜನತೆ. ಈ ರಹಸ್ಯವನ್ನು ಭೇದಿಸಲು ಬರುವ ದಕ್ಷ ಅಧಿಕಾರಿ 'ವಿಕ್ರಾಂತ್ ರೋಣ' ಅಸಲಿ ಸತ್ಯವನ್ನು ಬಯಲು ಮಾಡುತ್ತಾನೆಯೇ ಎಂಬುದೇ ಚಿತ್ರದಲ್ಲಿನ ಕುತೂಹಲಕಾರಿ ಅಂಶ.

ನಿರ್ದೇಶಕರು ಕತೆಯಲ್ಲಿ ಕಣ್ಣಾ ಮುಚ್ಚಾಲೆ ಆಟದಲ್ಲೇ ಹೆಚ್ಚು ಹೊತ್ತು ವ್ಯಯಿಸಿದ್ದಾರೆ ಎನ್ನಿಸುತ್ತದೆ. ಅಸಲಿ ಆರೋಪಿಗಳ ಹುಡುಕಾಟಕ್ಕಾಗಿ ನಡೆಯುವ ಅವರನ್ ಬಿಟ್ಟು ಇವರನ್ ಬಿಟ್ಟು ಅವರ್ಯಾರು ಎಂಬ ರೀತಿಯ ತಿರುವುಗಳ ಆಟ ಸರಾಗವಾಗಿ ಸಾಗಬೇಕಿದ್ದ ಚಿತ್ರಕಥೆಯನ್ನು ಅನಗತ್ಯ ಗೊಂದಲಕ್ಕೆ ಸಿಲುಕಿಸುತ್ತದೆ. 3ಡಿಯ ಅನುಭವ ನೋಡುಗರ ಕಣ್ಣಿಗೆ ಹಬ್ಬ ಎನ್ನಬಹುದು. ಆದರೆ, 3ಡಿಗೆ ಇನ್ನಷ್ಟು ಹಾರರ್ ಅಂಶಗಳು ಬೇಕಿದ್ದವು ಎನ್ನಿಸದೆ ಇರದು. ಸಸ್ಪೆನ್ಸ್‌‌, ಕ್ರೈಂ ಥ್ರಿಲ್ಲರ್ ಜಾನರ್ ಕಥೆಗೆ 3ಡಿ ಸಮ್ಮಿಲನ ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ.

'ವಿಕ್ರಾಂತ್ ರೋಣ'ನಾಗಿ ಸುದೀಪ್ ಅಬ್ಬರಿಸಿದ್ದಾರೆ. ಸ್ಟಾರ್ ನಟನ ಗತ್ತು ಇಟ್ಟುಕೊಂಡೇ ಸಹಜವಾಗಿ ನಟಿಸುವ ಪ್ರಯತ್ನ ಮಾಡಿದ್ದಾರೆ. 'ವಿಕ್ರಾಂತ್ ರೋಣ'ನನ್ನು ನೋಡುತ್ತ ಮದಕರಿ ಐಪಿಎಸ್ ಕೂಡ ನಿಮಗೆ ನೆನಪಾಗಬಹುದು. ದಕ್ಷ ಅಧಿಕಾರಿಯಾಗಿ, ಒಬ್ಬ ತಂದೆಯಾಗಿ ಸುದೀಪ್ ನಟನೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಕಿಚ್ಚನ ಬಾಯಲ್ಲಿ ಉತ್ತರ ಕರ್ನಾಟಕ ಭಾಷೆಯನ್ನ ಕೇಳುವುದು ಕೂಡ ಚೆಂದ.

ಸುದೀಪ್ ನಂತರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರೂಪ್ ಭಂಡಾರಿ ಅವರ ಪಾತ್ರ ನಿರ್ವಹಣೆ ಕೂಡ ಅಭಿನಂದನಾರ್ಹ. ಉಳಿದಂತೆ ನೀತಾ ಅಶೋಕ್‌, ಸಿಧು ಮೂಲಿಮನಿ, ಮಧುಸೂಧನ್‌ ರಾವ್‌, ರವಿಶಂಕರ್‌ ಗೌಡ ಅವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆಗಾಗ ನಗು ತರಿಸುವ ಫಕ್ರು ನೆನಪಿನಲ್ಲಿ ಉಳಿಯುತ್ತಾನೆ. ಗಡಂಗ್‌ ರಕ್ಕಮ್ಮನ ಕುಣಿತ ಚಿತ್ರದ ಮತ್ತೊಂದು ಹೈಲೈಟ್‌ ಎನ್ನಬಹುದು.

ಬಿ ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಚಿತ್ರದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಚಿತ್ರದ ರೋಚಕತೆಯ ಅನುಭವವನ್ನು ಪ್ರೇಕ್ಷಕರಿಗೆ ತೀವ್ರವಾಗಿ ದಾಟಿಸುವಲ್ಲಿ ಅಜನೀಶ್‌ ಹಿನ್ನೆಲೆ ಸಂಗೀತದ ಪಾತ್ರ ದೊಡ್ಡದು. ಅದ್ದೂರಿ ಮೇಕಿಂಗ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿದ್ದ 'ವಿಕ್ರಾಂತ್‌ ರೋಣ' ದೃಶ್ಯಗಳು ಅದ್ಭುತವಾಗಿವೆ. ಸೆಟ್‌ ಪ್ರಾಪರ್ಟಿ ಬಳಸಿ ಹೊಸ ಫ್ಯಾಂಟಸಿ ಪ್ರಪಂಚವನ್ನೇ ಪ್ರಸ್ತುತ ಪಡಿಸಿರುವ ಕಲಾ ನಿರ್ದೇಶಕ ಶಿವಕುಮಾರ್‌ ಅವರಿಗೆ ಅಭಿನಂದನೆ ಹೇಳಲೇಬೇಕು. ವಿಲಿಯಂ ಡೇವಿಡ್‌ ಛಾಯಾಗ್ರಹಣ ಆಕರ್ಷಣೀಯ. ನಿರ್ಮಲ್‌ ಕುಮಾರ್‌ ಅವರ ವಿಎಫ್‌ಕ್ಸ್‌ ತಂತ್ರಗಾರಿಕೆ ಚಿತ್ರವನ್ನು ಗೆಲ್ಲಿಸುವ ಪ್ರಮುಖ ಅಂಶಗಳಲ್ಲಿ ಒಂದು. ಆಶಿಕ್‌ ಕುಸುಗೊಳ್ಳಿ ಎಡಿಟಿಂಗ್‌ ಕೂಡ ಚೊಕ್ಕವಾಗಿದೆ.

ಅನಗತ್ಯ ತಿರುವುಗಳಿಂದ ತ್ರಾಸದಾಯಕ ಎನ್ನಿಸಿದರೂ ಸುದೀಪ್‌ ಅಭಿಮಾನಿಗಳು ಒಮ್ಮೆ ನೋಡಬಹುದಾದ ಸಿನಿಮಾ. 

ನಿಮಗೆ ಏನು ಅನ್ನಿಸ್ತು?
0 ವೋಟ್