ವೀಕೆಂಡ್ ಟೆಂಟ್ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಲೇಬೇಕಾದ ಹೊಸ ಸಿನಿಮಾ ಮತ್ತು ವೆಬ್‌ ಸರಣಿಗಳ ಪಟ್ಟಿ ಇಲ್ಲಿದೆ.

ಜುಲೈನ ಈ ವಾರದಲ್ಲಿ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಆದರೆ, ನಾವಿಲ್ಲಿ ನೀವು ನೋಡಬಹುದಾದ ಮತ್ತು ನೋಡಲೇಬೇಕಾದ ಸಿನಿಮಾಗಳು ಮತ್ತು ಸರಣಿಗಳ ಬಗ್ಗೆ ತಿಳಿಸುತ್ತಿದ್ದೇವೆ.

  • ಹಾಲಿವುಡ್ 'ದಿ ಗ್ರೇ ಮ್ಯಾನ್‌'ನಲ್ಲಿ ತಮಿಳು ನಟ ಧನುಷ್

ಭಾರತದ ಅದರಲ್ಲೂ ತಮಿಳುನಾಡಿನ ಪ್ರಖ್ಯಾತ ನಟ ಧನುಷ್‌ ಅವರು ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರುಸ್ಸೋ ಬ್ರದರ್ಸ್ ಅವರ ‘ದಿ ಗ್ರೇ ಮ್ಯಾನ್’ ಹಾಲಿವುಡ್ ಚಿತ್ರದಲ್ಲಿ ಧನುಷ್‌ ಅಭಿನಯಿಸಿದ್ದು, ಚಿತ್ರ ಎಲ್ಲರ ಗಮನ ಸೆಳೆದಿದೆ. ಚಿತ್ರದ ಆಕರ್ಷಣೆಯೇ ಧನುಷ್ ಅವರಾಗಿದ್ದು, ಎರಡು ಗಂಟೆಗಳ ಚಿತ್ರದಲ್ಲಿ ಸುಮಾರು 15 ನಿಮಿಷ ಕಾಣಿಸಕೊಳ್ಳಲಿದ್ದಾರೆ. ಆದರೆ, ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡರೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಸದ್ಯ ಚಿತ್ರ ‘ನೆಟ್‌ಫ್ಲಿಕ್ಸ್‌’ನಲ್ಲಿ ಜುಲೈ 22ರಂದು ಬಿಡುಗಡೆಯಾಗಿದೆ. 

  • ನೈಜ ಅಪರಾಧದ ಸಾಕ್ಷ್ಯಚಿತ್ರ ‘ದಿ ಬುಚರ್ ಆಫ್ ಡೆಲ್ಲಿ’

ನೈಜ ಅಪರಾಧ ಕೃತ್ಯವನ್ನಾಧರಿಸಿದ, ಆಯೇಷಾ ಸೂದ್ ನಿರ್ದೇಶನದ ಸಾಕ್ಷ್ಯಚಿತ್ರ ದಿ ಬುಚರ್ ಆಫ್ ಡೆಲ್ಲಿ ಜುಲೈ 20ರಂದು ಬಿಡುಗಡೆಯಾಗಿದೆ. ವೆಬ್‌ಸರಣಿಯು ತನಿಖೆಯ ಸ್ವರೂಪವನ್ನು ಹೊಂದಿದ್ದು, ಕುತೂಹಲಕಾರಿಯಾಗಿದೆ. 2003 ಮತ್ತು 2007ರ ನಡುವೆ ದೆಹಲಿಯಲ್ಲಿ ನಡೆದ ಮೂರು ಕೊಲೆಗಳಿಗೆ ಸಂಬಂಧಿಸಿದ್ದು, 2013ರಲ್ಲಿ ಶಿಕ್ಷೆಗೊಳಗಾದ ಚಂದ್ರಕಾಂತ್ ಝಾ ಪ್ರಕರಣವನ್ನು ‘ನೆಟ್‌ಫ್ಲಿಕ್ಸ್‌’ನಲ್ಲಿ ನೋಡಬಹುದಾಗಿದೆ.

  • 'ನೋಡಿ ಸ್ವಾಮಿ ಇವನು ಇರೋದು' ಹೀಗೆಯಲ್ಲಿ ರಿಷಿ ಹೇಗಿದ್ದಾರೆ? 

'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಟ ರಿಷಿ, ಇದೀಗ ʼನೋಡಿ ಸ್ವಾಮಿ ಇವನು ಇರೋದು ಹೀಗೆʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರಿಷಿ ನಟನೆಯ ʼಸೈಕಾಲಜಿಕಲ್ʼ ಕಥಾಹಂದರದ ʼನೋಡಿ ಸ್ವಾಮಿ ಇವನು ಇರೋದು ಹೀಗೆʼ ಸಿನಿಮಾ ʼಝೀ 5ʼನಲ್ಲಿ ಬಿಡುಗಡೆಯಾಗಿದೆ. ವಿಕೇಂಡ್‌ನಲ್ಲಿ ಮನರಂಜನೆಗಾಗಿ ತಪ್ಪದೇ ಈ ಚಿತ್ರ ನೋಡಿ. 

  • 'ಎನಿಥಿಂಗ್'ಸ್ ಪಾಸಿಬಲ್' ಚಿತ್ರದಲ್ಲಿ ಎಲ್ಲವು ಸಾಧ್ಯ 

‘ಕೆಲ್ಸಾ’ ಎಂಬ ಕಾಲೇಜಿನಲ್ಲಿ ಓದುತ್ತಿರುವ ‘ಟ್ರಾನ್ಸ್ ಗರ್ಲ್’ ಆಗಿ ಬದಲಾಗುವ ಹುಡುಗಿಯ ಕಥೆಯೇ ಎನಿಥಿಂಗ್'ಸ್ ಪಾಸಿಬಲ್. ಓದುವ ಸಮಯದಲ್ಲಿ ‘ಖಾಲ್’ ಎಂಬ ಹುಡುಗನೊಂದಿಗೆ ಪ್ರೀತಿ ಬೆಳೆಯುತ್ತದೆ. ಆದರೆ, ಅವರ ಪ್ರಣಯದ ಬಗ್ಗೆ ಇತರ ಸ್ನೇಹಿತರಿಗೆ ತಿಳಿದಾಗ, ಕಥೆ ತಿರುವನ್ನು ಪಡೆದುಕೊಳ್ಳುತ್ತದೆ. ಜುಲೈ 22ರಂದು 'ಅಮೇಜಾನ್ ಪ್ರೈಮ್‌'ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 

  • 'ಮಲಯಂಕುಂಜು' ಚಿತ್ರ ಕೇರಳದ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ನೈಜ ಕಥೆ

ಸಜಿಮೋನ್ ಪ್ರಭಾಕರ್ ನಿರ್ದೇಶನದ ನೈಜ ಕಥೆ ಆಧಾರಿತ ಸಿನಿಮಾ ಮಲಯಂಕುಂಜು. ಚಿತ್ರದಲ್ಲಿ ಫಹದ್ ಫಾಸಿಲ್, ರಜಿಶಾ ವಿಜಯನ್ ಹಾಗೂ ಇಂದ್ರನ್ಸ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೇರಳದ ಎತ್ತರದ ಪ್ರದೇಶಗಳಲ್ಲಿ ಸಂಭವಿಸುವ ಭೂಕುಸಿತದಿಂದ ಅನೇಕರು ತಮ್ಮ ಪ್ರಾಣ, ಮನೆ ಹಾಗೂ ಸಂಬಂಧಿಕರನ್ನೇ ಕಳೆದುಕೊಂಡ ನೈಜ ಕಥೆಯಾಗಿದೆ. ಜುಲೈ 22ರಂದು ಬಿಡುಗಡೆಯಾಗಿದ್ದು, ಚಿತ್ರಮಂದಿರದಲ್ಲಿ ನೋಡಬಹುದು. 

  • ಲೈಂಗಿಕ ಸಮಸ್ಯೆಗೆ ಮದ್ದು 'ಡಾ ಅರೋರಾ' ವೆಬ್‌ಸರಣಿ

ಭಾರತದಲ್ಲಿ ಮಡಿವಂತಿಕೆ ಇನ್ನೂ ಉಳಿದಿದ್ದು, ಲೈಂಗಿಕ ಸಮಸ್ಯೆ ಗಂಭೀರವಾಗಿದ್ದರೂ ಹೊರಗೆ ಹೇಳಿಕೊಳ್ಳಲು ಮುಜುಗರ. ಆದರೆ, 'ಡಾ ಅರೋರಾ' ವೆಬ್‌ಸರಣಿಯಲ್ಲಿ ಸೂಕ್ಷ್ಮವಾಗಿ ಅದರಲ್ಲು ಮಧ್ಯವಯಸ್ಕರಾದ ಪುರುಷ ಅಥವಾ ಮಹಿಳೆಯರ ಸಮಸ್ಯೆ ಬಗ್ಗೆ ಇಲ್ಲಿ ತೋರಿಸಲಾಗಿದೆ. ಜೊತೆಗೆ ದಾಂಪತ್ಯದಲ್ಲಿ ಗಂಡ ಹೆಂಡಿತಿಯರ ನಡುವೆ ಆಗುವ ವೈಮನಸ್ಸಿನ ಬಗ್ಗೆ ತಿಳಿಸಿದೆ. ಇಮ್ತಿಯಾಜ್ ಅಲಿ ರಚನೆಯ ಎಂಟು ಕಂತಿನ ವೆಬ್‌ಸರಣಿಯು ಜುಲೈ 22ರಂದು ಬಿಡುಗಡೆಯಾಗಿದ್ದು, ಸೋನಿ ಲೈವ್‌ನಲ್ಲಿ ನೋಡಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್