ವೀಕೆಂಡ್‌ ಟೆಂಟ್‌ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್‌ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಬಹುದಾದ ಇತ್ತೀಚಿನ ಸಿನಿಮಾ ಮತ್ತು ವೆಬ್‌ ಸರಣಿಗಳ ಪಟ್ಟಿ ಇಲ್ಲಿದೆ.
gargi

ವಾರಾಂತ್ಯದಲ್ಲಿ ಇತ್ತೀಚಿನ ಯಾವ ಸಿನಿಮಾಗಳನ್ನು ಮತ್ತು ಸರಣಿಗಳನ್ನು ನೋಡಬೇಕು ಎಂಬ ಗೊಂದಲ ನಿಮಗಿದ್ದರೆ. ನೀವು ನೋಡಬಹುದಾದ ಮತ್ತು ನೋಡಲೇಬೇಕಾದ ಸಿನಿಮಾಗಳು ಮತ್ತು ಸರಣಿಗಳ ಪಟ್ಟಿ ಇಲ್ಲಿದೆ ನೋಡಿ.

  • ಗಾರ್ಗಿ - ಕೋರ್ಟ್‌ ರೂಮ್‌ ಕಥನ

ಬಹುಭಾಷಾ ನಟಿ ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ 'ಗಾರ್ಗಿ' ಸಿನಿಮಾ ಜುಲೈ 15ರಂದು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತೆರೆಕಂಡಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಶಿಕ್ಷಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಸುಳ್ಳು ಪ್ರಕರಣವೊಂದರಲ್ಲಿ ಜೈಲು ಪಾಲಾಗುವ ತಂದೆಯ ಬಿಡುಗಡೆಗಾಗಿ ಹೋರಾಡುವ ದಿಟ್ಟ ಹೆಣ್ಣುಮಗಳ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಚಿತ್ರದ ಕನ್ನಡ ಅವತರಣಿಕೆಗೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್ ಮಾಡಿರುವುದು ಈ ಚಿತ್ರದ ವಿಶೇಷ. 'ಗಾರ್ಗಿ' ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. 

  • ಶಾಬಾಷ್‌ ಮಿಥು - ಮಿಥಾಲಿ ರಾಜ್‌ ಬಯೋಪಿಕ್‌

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಜೀವನದ ಕಥೆಯನ್ನಾಧರಿಸಿ ʼಶಾಬಾಷ್‌ ಮಿಥುʼ ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ. ಸಾಧಾರಣ ಹಳ್ಳಿ ಹುಡುಗಿಯೊಬ್ಬಳು ಕ್ರಿಕೆಟ್‌ ಜಗತ್ತಿನಲ್ಲಿ ದಶಕಗಳ ಕಾಲ ತಾರೆಯಾಗಿ ಮೆರೆದ ರೋಚಕ ಕಥೆಯನ್ನು ತೆರೆಗೆ ಅಳವಡಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶ್ರೀಜಿತ್‌ ಮುಖರ್ಜಿ. ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ಅವರು ಮಿಥಾಲಿ ರಾಜ್‌ ಪಾತ್ರದಲ್ಲಿ ನಟಿಸಿದ್ದಾರೆ.

  • ಜಾದೂಗರ್‌, ನೆಟ್‌ಫ್ಲಿಕ್ಸ್‌

ಜಿತೇಂದ್ರ ಕುಮಾರ್‌ ಮುಖ್ಯಭೂಮಿಕೆಯ ಜಾದುಗರ್‌ ಸಿನಿಮಾ ಜುಲೈ 15ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ. ಸಮೀರ್‌ ಸಕ್ಸೆನಾ ನಿರ್ದೇಶನದ ಈ ಚಿತ್ರದಲ್ಲಿ ಜಿತೇಂದ್ರ ಕುಮಾರ್‌ ಜಾದುಗಾರನ ಪಾತ್ರದಲ್ಲಿ ಮಿಂಚಿದ್ದಾರೆ. ಜಾದುಗಾರನಾಗಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳುವ ಸಲುವಾಗಿ ಫುಟ್‌ಬಾಲ್‌ ಅಖಾಡಕ್ಕಿಳಿದು ಪೀಕಲಾಟಕ್ಕೆ ಸಿಲುಕಿಕೊಳ್ಳುತ್ತಾನೆ. ಫುಟ್‌ಬಾಲ್‌ ಕಂಡರೆ ಬೆನ್ನು ತೋರಿಸಿ ಕಾಲ್ಕಿಳುವ ಆತ ಪ್ರೇಯಸಿಯ ಸಲುವಾಗಿ ಫುಟ್‌ಬಾಲ್‌ ಪಂದ್ಯಾವಳಿಯನ್ನು ಗೆಲ್ಲುತ್ತಾನೆಯೇ ಎಂಬುದೇ ಕಥೆಯಲ್ಲಿರುವ ಟ್ವಿಸ್ಟ್‌. ಹದಿ ಹರೆಯದ ಯುವಕನೊಬ್ಬ ಪ್ರೀತಿಗಾಗಿ ಪಡುವ ಪೀಕಲಾಟಗಳನ್ನು ಚಿತ್ರದಲ್ಲಿ ಹಾಸ್ಯಮಯವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಜಿತೇಂದ್ರ ಕುಮಾರ್‌ಗೆ ಜೊತೆಯಾಗಿ ಆರುಷಿ ಶರ್ಮಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ್‌ ಹಿರಿಯ ನಟ ಜಾವೇದ್‌ ಜಾಫ್ರಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

  • ಹಿಟ್‌- ದಿ ಫಸ್ಟ್‌ ಕೇಸ್‌

ರಾಜ್‌ಕುಮಾರ್‌ ರಾವ್‌ ನಟನೆಯ ಹಿಟ್‌- ದಿ ಫಸ್ಟ್‌ ಕೇಸ್‌ ಸಿನಿಮಾ ಜುಲೈ 15ರಂದು ತೆರೆಗೆ ಬಂದಿದೆ. ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಕಥಾ ಹಂದರದ ಈ ಚಿತ್ರಕ್ಕೆ ತೆಲುಗಿನ ನಿರ್ದೇಶಕ ಸೈಲೇಶ್‌ ಕೊಲನು ಆಕ್ಷನ್‌ ಕಟ್‌ ಹೇಳಿದ್ದಾರೆ. 2020ರಲ್ಲಿ ವಿಶ್ವಕ್‌ ಸೇನ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದ್ದ ಹಿಟ್‌ ಚಿತ್ರದ ರೀಮೇಕ್‌ನಲ್ಲಿ ರಾಜ್‌ಕುಮಾರ್‌ ರಾವ್‌ ದಕ್ಷ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 'ದಂಗಲ್‌' ಬೆಡಗಿ ಸಾನ್ಯ ಮಲ್ಹೋತ್ರ, ರಾಜ್‌ಕುಮಾರ್‌ ರಾವ್‌ಗೆ ಜೊತೆಯಾಗಿದ್ದಾರೆ.  

  • ಪರ್ಸುವೇಶನ್‌, ನೆಟ್‌ಫ್ಲಿಕ್ಸ್

ಹಾಲಿವುಡ್‌ನ ಖ್ಯಾತ ನಟಿ ಡಕೋಟಾ ಜಾನ್ಸನ್‌ ಮುಖ್ಯಭೂಮಿಕೆಯ 'ಪರ್ಸುವೇಶನ್‌' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಕ್ಯಾರಿ ಕ್ರ್ಯಾಕ್‌ನೆಲ್‌ ನಿರ್ದೇಶನದ ಈ ಸಿನಿಮಾ ಲಂಡನ್‌ ಮೂಲದ ಖ್ಯಾತ ಕಾದಂಬರಿಕಾರ್ತಿ ಜೇನ್‌ ಆಸ್ಟಿನ್‌ ಅವರ 'ಪರ್ಸುವೇಶನ್‌' ಕಾದಂಬರಿಯನ್ನು ಆಧರಿಸಿದೆ. 

 

  • ಕುಂಗ್‌ಫು ಪಾಂಡಾ- ಡ್ರ್ಯಾಗನ್‌ ನೈಟ್‌, ನೆಟ್‌ಫ್ಲಿಕ್ಸ್‌

ಕುಂಗ್‌ಫು ಪಾಂಡಾ-ಡ್ರ್ಯಾಗನ್‌ ನೈಟ್‌ ಅನಿಮೇಟೆಡ್‌ ವೆಬ್‌ ಸರಣಿ ಜುಲೈ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮಿಚ್‌ ವ್ಯಾಟ್ಸನ್‌ ಮತ್ತು ಪೀಟರ್‌ ಹಾಸ್ಟಿಂಗ್ಸ್‌ ಈ ಸರಣಿ ನಿರ್ಮಿಸಿದ್ದಾರೆ. ಹಾಲಿವುಡ್‌ನ ಖ್ಯಾತ ನಟ ಥಾಮಸ್‌ ಜೇಕಬ್‌, ನಟಿ ರೀಟಾ ಓರಾ ಮುಂತಾದವರು ಪ್ರಮುಖ ಪಾತ್ರಗಳಿಗೆ ಧ್ವನಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್