ವೀಕೆಂಡ್ ಟೆಂಟ್ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಲೇಬೇಕಾದ ಹೊಸ ಸಿನಿಮಾ ಮತ್ತು ವೆಬ್‌ ಸರಣಿಗಳ ಪಟ್ಟಿ ಇಲ್ಲಿದೆ.

ಜುಲೈ ಮೊದಲ ವಾರದಲ್ಲಿ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಆದರೆ, ನಾವಿಲ್ಲಿ ನಿಮಗಾಗಿ ಆಯ್ಕೆ ಮಾಡಿ ನೋಡಬಹುದಾದ ಮತ್ತು ನೋಡಲೇಬೇಕಾದ ಸಿನಿಮಾಗಳು ಮತ್ತು ಸರಣಿಗಳ ಬಗ್ಗೆ ತಿಳಿಸುತ್ತಿದ್ದೇವೆ.

  • ಸ್ಟ್ರೇಂಜರ್ ಥಿಂಗ್ಸ್ ಸೀಸನ್ 4 ವಾಲ್ಯೂಮ್ 2, ನೆಟ್‌ಫ್ಲಿಕ್ಸ್‌

ಸ್ಟ್ರೇಂಜರ್ ಥಿಂಗ್ಸ್ ಸೀಸನ್ 4 ವಾಲ್ಯೂಮ್ 2 ಜುಲೈ ಒಂದರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಸ್ಟ್ರೇಂಜರ್ ಥಿಂಗ್ಸ್ ಸೀಸನ್ 4 ಅನ್ನು ಎರಡು ಭಾಗಗಳಾಗಿ ಪ್ರಸ್ತುತ ಪಡಿಸಿದ್ದು, ಎರಡನೇ ಭಾಗ ಸದ್ಯ ನೀವು ಒಟಿಟಿಯಲ್ಲಿ ನೋಡಬಹುದಾಗಿದೆ. ವೈಜ್ಞಾನಿಕ ಮತ್ತು ಭಯಾನಕ ವೆಬ್ ಸರಣಿಯ ಇದಾಗಿದ್ದು ಕುತೂಹಲಕಾರಿಯಾಗಿದೆ. 'ಡಫರ್ ಬ್ರದರ್ಸ್' ಅವರು ಸರಣಿಯನ್ನು ರಚಿಸಿದ್ದಾರೆ. ಈ ಹಿಂದಿನ ವೆಬ್ ಸಿರೀಸ್‌ಗಳನ್ನು ನೋಡಿದವರು ತಪ್ಪದೇ ನೋಡಬಹುದು.

  • ಮಿಯಾ ಬಿವಿ ಔರ್ ಮರ್ಡರ್ ರೋಮಾಂಚಕ ಕಥೆ

ಸುನೀಲ್ ಮಂಚಂದ ನಿರ್ದೇಶನದ ‘ಮಿಯಾ ಬೀವಿ ಔರ್ ಮರ್ಡರ್' ಚಿತ್ರ ರೋಮಾಂಚಕ ಕಥೆಯಾಗಿದ್ದು, ಜುಲೈ 1ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಮದುವೆಯಾದ ದಂಪತಿಗಳ ಸುತ್ತ ಕಥೆ ಸುತ್ತುತ್ತದೆ. ಅವರ ಜೀವನವು ಒಂದು ರಾತ್ರಿಯಲ್ಲಿ ಅನಿರೀಕ್ಷಿತ ತಿರುವು ಬಂದು ಕಥೆಯೇ ಬದಲಾಗುತ್ತದೆ. ರಾಜೀವ್ ಖಂಡೇಲ್ವಾಲ್, ಮಂಜರಿ ಫಡ್ನಿಸ್ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರವು ಎಂಎಕ್ಸ್‌ ಪ್ಲೇಯರ್‌ನಲ್ಲಿ ಲಭ್ಯವಿದ್ದು ಎಲ್ಲರೂ ನೋಡಬಹುದಾಗಿದೆ.

  • ದಿ ಟರ್ಮಿನಲ್ ಲಿಸ್ಟ್‌ನಲ್ಲಿ ಏನೆಲ್ಲಾ ಇದೆ?

ಅಮೆಜಾನ್ ಪ್ರೈಮ್ ವಿಡಿಯೋ ತನ್ನ ವೇದಿಕೆಯಲ್ಲಿ ‘ದಿ ಟರ್ಮಿನಲ್ ಲಿಸ್ಟ್’ ಎಂಬ ಸಾಹಸ ಕಥೆಯಿರುವ ಸರಣಿಯನ್ನು ಜುಲೈ 1ರಂದು ಬಿಡುಗಡೆ ಮಾಡಿದೆ. ಕ್ರಿಸ್ ಪ್ರ್ಯಾಟ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಾಹಸ ಕಥೆಯಲ್ಲಿ ಅನೇಕ ತಿರುವುಗಳಿದ್ದು, ಕುತೂಹಲಕಾರಿಯಾಗಿದೆ.

  • ದಿ ಗಾನ್ ಗೇಮ್ ಸೀಸನ್ 2ನ ಆಟ

ಸಂಜಯ್ ಕಪೂರ್, ಅರ್ಜುನ್ ಮಾಥುರ್ ಹಾಗೂ ಶ್ವೇತಾ ತ್ರಿಪಾಠಿ ಶರ್ಮಾ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ, ಅಭಿಷೇಕ್ ಸೇನ್‌ಗುಪ್ತ ಅವರ ನಿರ್ದೇಶನದ, ‘ದಿ ಗಾನ್ ಗೇಮ್’ ಸೀಸನ್ 2 ವೆಬ್‌ಸರಣಿಯು ಜುಲೈ 7ರಂದು ಬಿಡುಗಡೆಯಾಗಿದೆ. ಅನಿರೀಕ್ಷಿತವಾಗಿ ಕೊಲೆಯಾಗುತ್ತದೆ. ಪೊಲೀಸರು ಈ ಕೊಲೆ ಮಾಡಿದವರನ್ನು ಪತ್ತೆ ಹಚ್ಚುವ ಪ್ರತಿ ಹಂತವು ಕಾಯ್ದು ಕೂರುವಂತೆ ಮಾಡುತ್ತದೆ. ಆ ಕುತೂಹಲ ಏನು ಎಂಬುದನ್ನು ತಿಳಿಯಬೇಕಾದರೆ, 'ವೂಟ್‌ ಸೆಲೆಕ್ಟ್‌'ನಲ್ಲಿ ನೋಡಬಹುದಾಗಿದೆ.

  • ರಾಷ್ಟ್ರ ಪ್ರಶಸ್ತಿ ವಿಜೇತೆ ಅಮೃತಾ ಸುಭಾಷ್ ಸರಣಿ

ಆರು ಸಂಚಿಕೆಗಳ ವೆಬ್ ಸರಣಿಯಾದ ‘ಸಾಸ್ ಬಹು ಆಚಾರ್ ಪ್ರೈ. ಲಿ’ ಎಂಬ ವೆಬ್‌ ಸರಣಿಯನ್ನು ಅಪೂರ್ವ್ ಸಿಂಗ್ ಕರ್ಕಿ ಅವರು ನಿರ್ದೇಶನ ಮಾಡಿದ್ದು, ಜುಲೈ 8ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಸರಣಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಅಮೃತಾ ಸುಭಾಷ್ ಅವರು ಮುಖ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಬಂಧದಲ್ಲಿ ಬಿರುಕುಂಟಾಗಿ ದೂರವಾದ ಪತಿಯಿಂದ ಮಕ್ಕಳನ್ನು ಮರಳಿ ಪಡೆಯಲು ಸ್ವಂತ ಉದ್ಯೋಗ ಪ್ರಾರಂಭಿಸುತ್ತಾರೆ. ಹೀಗೆ ಸಣ್ಣ ಉದ್ಯಮದಿಂದ ಅಮೃತಾ ಅವರು ಉನ್ನತ ಸ್ಥಾನಕ್ಕೆ ಹೋಗುವ ಸ್ಫೂರ್ತಿದಾಯಕ ಕಥೆ ಇದಾಗಿದ್ದು, ಕುಟುಂಬ ಸಮೇತ ಎಲ್ಲರೂ ನೋಡಲೇಬೇಕಾಗಿದೆ.  

  • ಶೀತಲ್ ಶೆಟ್ಟಿ ಚೊಚ್ಚಲ ಚಿತ್ರ ವಿಂಡೋ ಸೀಟ್

ಶೀತಲ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ‘ವಿಂಡೋ ಸೀಟ್’ ಚಿತ್ರವು ಜುಲೈ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಮುಖ್ಯಪಾತ್ರದಲ್ಲಿ 'ರಂಗಿತರಂಗ' ಚಿತ್ರದ ಖ್ಯಾತಿಯ ಅನೂಪ್‌ ಭಂಡಾರಿ ಮತ್ತು ಅಮೃತ ಅಯ್ಯಂಗಾರ್ ಅವರು ಕಾಣಿಸಿಕೊಂಡಿದ್ದಾರೆ. 'ವಿಂಡೋ ಸೀಟ್' ಚಿತ್ರವು ರೋಮ್ಯಾಂಟಿಕ್ ಮತ್ತು ಕುತೂಹಲಕಾರಿ ಚಿತ್ರವಾಗಿದೆ. ಅನೇಕರಿಂದ ಮೆಚ್ಚುಗೆ ಪಡೆಯುತ್ತಿದ್ದು, ನೋಡಬಹುದಾದ ಚಿತ್ರವಾಗಿದೆ.

  • ಕ್ರೈಮ್ ಥ್ರಿಲ್ಲರ್ ಇಂದಿರಾ

‘ಇಂದಿರಾ’ ಎಂಬ ಕನ್ನಡದ ಚಿತ್ರ ನೇರವಾಗಿ ವೂಟ್‌ ಸೆಲೆಕ್ಟ್‌ನಲ್ಲಿ ಜುಲೈ 8ರಂದು ಬಿಡುಗಡೆಯಾಗಿದೆ. ರಿಷಿಕೇಶ ಅವರು ನಿರ್ದೇಶನ ಮಾಡಿದ್ದು, ಗಂಡನನ್ನು ಕಳೆದುಕೊಂಡು ದುಃಖದಲ್ಲಿರುವ ದೃಷ್ಟಿಚೇತನರಾದ ಹೆಂಡತಿಯ ಪ್ರೀತಿಯ ಕುರಿತಾದ ಚಿತ್ರವಾಗಿದೆ. ಚಿತ್ರದಲ್ಲಿ ಅನಿತಾ ಭಟ್, ರೆಹಮಾನ್ ಹಾಸನ್, ನೀತು ಶೆಟ್ಟಿ ಹಾಗೂ ಚಕ್ರವರ್ತಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ತೆಲುಗು ನಟ ಶಫಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಅನಿತಾ ಭಟ್ ಅವರೇ ನಿರ್ಮಿಸುತ್ತಿರುವ ಈ ಚಿತ್ರವು ಅವರ ಮೊದಲ ನಿರ್ಮಾಣವಾಗಿದೆ. ಪ್ರತಿಯೊಬ್ಬರು ನೋಡಲೇ ಬೇಕಾದ ಚಿತ್ರವಾಗಿದೆ.

  • ಮಾಡ್ರನ್‌ ಲವ್‌ನಿಂದ ಹೈದರಾಬಾದ್‌ ಪ್ರಯಾಣ

ಮಾಡ್ರನ್ ಲವ್ ಹೈದರಾಬಾದ್ ಎಂಬ ತೆಲುಗು ವೆಬ್‌ ಸರಣಿಯು ನಾಗೇಶ ಕುಕುನೂರ, ವೆಂಕಟೇಶ ಮಹಾ, ಉದಯ ಗುರಾಲ ಹಾಗೂ ದೇವಿಕಾ ಬಹುಧನಂ ಸೇರಿ ನಿರ್ದೇಶಿಸಿರುವ ಸರಣಿಯಾಗಿದೆ. ಆದಿ ಪಿನಿಸೆಟ್ಟಿ, ನಿತ್ಯಾ ಮೆನನ್ ಹಾಗೂ ಸುಹಾಸಿನಿ ಮಣಿರತ್ನಂ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜುಲೈ 8ರಂದು ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಕಾಮಿಡಿ ಸರಣಿಯಾಗಿದ್ದು, ಎಲ್ಲರಿಗೂ ಇಷ್ಟವಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್