ವ್ಯಕ್ತಿಗತವಾದ ಪ್ರತಿಭೆಯನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ: ನಾಗತಿಹಳ್ಳಿ ಚಂದ್ರಶೇಖರ್

  • ಚಿತ್ರ ನಿರ್ಮಾಣ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಹೇಳಿಕೆ
  • ನಮ್ಮಲ್ಲಿರುವ ಪ್ರತಿಭೆಯನ್ನು ಹೊರಗಿನಿಂದ ಯಾರು ಕಲಿಸಲು ಸಾಧ್ಯವಿಲ್ಲ: ನಾಗತಿಹಳ್ಳಿ

ವ್ಯಕ್ತಿಗತವಾದ ಪ್ರತಿಭೆಯನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ. ಎಲ್ಲರೂ ಆಸಕ್ತಿಯಿಂದ ಕಲಿಯಬೇಕು. ಕಲಿಕೆಗಾಗಿ ಯಾವುದೇ ವೇದಿಕೆಯಲ್ಲಿ ಸಿಗುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಕಲಿಕೆ ನಿರಂತರವಾಗಿರಬೇಕು ಎಂದು ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ದಸರಾ ಪ್ರಯುಕ್ತ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ  ದಸರಾ ಚಲನಚಿತ್ರೋತ್ಸವ ಉಪಸಮಿತಿಯ ವತಿಯಿಂದ ಗುರುವಾರ (ಸೆ.22) ನಡೆದ ಚಿತ್ರ ನಿರ್ಮಾಣ ಪೂರ್ವ ತಯಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಮೂರು ದಿನಗಳಲ್ಲಿ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಸಿನಿಮಾರಂಗದ ಕಲಿಕೆಗಾಗಿ ನಾನು ಒಂದು ಪುಟ್ಟ ಸಿನಿಮಾ ಶಾಲೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದೇನೆ. ಶಾಲೆಗಳನ್ನು ನಡೆಸುವುದರ ಕಷ್ಟಗಳ ಬಗ್ಗೆ ನನಗೆ ಅರಿವಿದೆ. ದಸರಾ ಪ್ರಯುಕ್ತ ಮೈಸೂರಿನಲ್ಲಿ ವಿಶೇಷವಾಗಿ ಹಲವಾರು ವೇದಿಕೆಗಳು ಸಿದ್ದಗೊಳ್ಳುತ್ತದೆ. ಅಂತಹ ವೇದಿಕೆಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಸಿನಿಮಾಸಕ್ತರಿಗೆ ಕಿವಿಮಾತು ಹೇಳಿದರು.

“ಇಲ್ಲಿಗೆ ಬಂದರೆ ಯಾರೇ ಆಗಲಿ ಬರಿಗೈಯಲ್ಲಿ ಹೋಗಬಾರದು. ಏನನ್ನಾದರೂ ಕಲಿತು  ಪಡೆದುಕೊಂಡು ಹೋಗಬೇಕು.  ಅರಿವು ತುಂಬ ಮುಖ್ಯ. ಸಮಾಜದ ಜತೆ ಒಡನಾಟದ ಮೂಲಕ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿರುವ ದಟ್ಟವಾದ ಪ್ರತಿಭೆಯನ್ನು ಹೊರಗಿನಿಂದ ಯಾರೂ ಕಲಿಸಲು ಸಾಧ್ಯವಿಲ್ಲ. ಯಾರಿಂದಲೂ ನೀಡಲು ಅಥವಾ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಭೆ ಅನ್ನುವುದು ಆಸ್ತಿ ಇದ್ದ ಹಾಗೆ. ಪ್ರತಿಭೆಯು ಸೃಜನಶೀಲ ಕಾರ್ಯದ ಮೂಲಕ ಹೊರಹೊಮ್ಮುತ್ತದೆ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಆಸ್ಕರ್‌ ಪ್ರಶಸ್ತಿಗೆ ಚಿತ್ರಕಥೆ ಮುಖ್ಯವೇ ಹೊರತು ಗಳಿಕೆಯಲ್ಲ: ಟಿ.ಎಸ್‌ ನಾಗಾಭರಣ

“ಸಾವಿರಾರು ವರ್ಷಗಳಿಂದ ಬಂದಿದ್ದ ಸಂಗೀತ, ಸಾಹಿತ್ಯ, ನಾಟಕಗಳನ್ನು ಮೊಟಕುಗೊಳಿಸಿ ಅದರ ಮೇಲೆ ನಿಂತು ವಿಜೃಂಭಿಸುತ್ತಿರುವ ಒಂದು ಪ್ರಭಾವಶಾಲಿ ಮಾಧ್ಯಮವಾಗಿ ಚಿತ್ರರಂಗ ಬೆಳೆದು ನಿಂತಿದೆ. ಚಲನಚಿತ್ರ ಮಾಧ್ಯಮದ ಭಾಗವಾಗಿ ವೆಬ್ ಸಿರೀಸ್, ಸಾಕ್ಷ್ಯಚಿತ್ರಗಳು ಹಾಗೂ ಕಿರುಚಿತ್ರಗಳಿವೆ. ಇವುಗಳಲ್ಲಿ ನೀವು ತೊಡಗಿಸಿಕೊಳ್ಳಲು ಮತ್ತು ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶಗಳಿವೆ.  ಇದರಲ್ಲಿ ಯಶಸ್ಸು ಪಡೆಯಲು ಬಯಸುವವರು ಶ್ರಮ ಪಡಬೇಕು” ಎಂದು ಸಲಹೆ ನೀಡಿದರು.

“ಚಿತ್ರರಂಗಕ್ಕೆ ತನ್ನದೇ ಆದ, ವ್ಯಾಕರಣ ಮತ್ತು ಮಾನದಂಡಗಳಿವೆ. ಇದರತ್ತ ವಿದ್ಯಾರ್ಥಿಗಳು, ಸಿನಿಮಾಸಕ್ತರು ಗಮನ ಹರಿಸಬೇಕು. ಸಿನಿಮಾ ಎಂಬುದು ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಹಾಗೂ ಚಿತ್ರಕಲೆಗಳಿಗಿಂತ ತುಂಬ ಭಿನ್ನವಾದದ್ದು. ಇದೊಂದು ಬಹುಪ್ರತಿಭೆಗಳನ್ನು ಬೆಳಕಿಗೆ ತರುವ ಮಾಧ್ಯಮವಾಗಿದೆ” ಎಂದು ಚಿತ್ರರಂಗದ ಬಗ್ಗೆ ಮಾಹಿತಿ ನೀಡಿದರು.

ವಿಶೇಷಾಧಿಕಾರಿ ಆರ್. ಶೇಷ ಅವರು ಮಾತನಾಡಿ, ಚಲನಚಿತ್ರೋತ್ಸವು ಶೀಘ್ರದಲ್ಲೇ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಟ ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್