ತೆರೆಕಂಡ 9 ವರ್ಷಗಳ ಬಳಿಕ ರೀಮೇಕ್ ಆಗುತ್ತಿದೆ ಯಶ್ ನಟನೆಯ 'ಗೂಗ್ಲಿ' ಸಿನಿಮಾ

Googly
  • ʼಗೂಗ್ಲಿʼ ರೀಮೇಕ್‌ ಬಗ್ಗೆ ಮಾಹಿತಿಯಿಲ್ಲ ಎಂದ ಪವನ್‌ ಒಡೆಯರ್‌
  • ರೀಮೇಕ್‌ ಹಕ್ಕು ಖರೀದಿಸಿದ ಮಹೇಶ್‌ ದಾನಣ್ಣವರ್‌

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ 'ಗೂಗ್ಲಿ' ಸಿನಿಮಾ ತೆರೆಕಂಡು 9 ವರ್ಷಗಳ ಬಳಿಕ ಬೇರೆ ಭಾಷೆಗಳಿಗೆ ರೀಮೇಕ್‌ ಆಗುತ್ತಿದೆ.

ಜುಲೈ 19ಕ್ಕೆ 'ಗೂಗ್ಲಿ' ತೆರೆಕಂಡು 9 ವರ್ಷಗಳು ಕಳೆದಿವೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಯಶ್ ಮತ್ತು ಕೃತಿ ಕರಬಂಧ ಜೊತೆಯಾಗಿ ನಟಿಸಿದ್ದರು. ಕಾಲೇಜು ಪ್ರೇಮಕತೆಯನ್ನು ಹೊಂದಿದ್ದ ʼಗೂಗ್ಲಿʼ ಚಿತ್ರ ಭರ್ಜರಿ ಯಶಸ್ಸುಗಳಿಸಿತ್ತು.

ಸ್ಯಾಂಡಲ್‌ವುಡ್‌ ಮಟ್ಟಿಗೆ ʼಬ್ಲಾಕ್ ಬಸ್ಟರ್ ಹಿಟ್ʼ ಎನ್ನಿಸಿಕೊಂಡಿದ್ದ ʼಗೂಗ್ಲಿʼ ಬರೋಬ್ಬರಿ 9 ವರ್ಷಗಳ ಬಳಿಕ ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿದೆ. ಮಹೇಶ್ ದಾನಣ್ಣವರ್ ಎಂಬುವವರು ʼಗೂಗ್ಲಿʼ ಚಿತ್ರವನ್ನು ರೀಮೇಕ್ ಮಾಡಲು ಮುಂದೆ ಬಂದಿದ್ದು, ಚಿತ್ರದ ಹಿಂದಿ, ಪಂಜಾಬಿ, ಮರಾಠಿ ಮತ್ತು ಗುಜರಾತಿ ರೀಮೇಕ್ ಹಕ್ಕನ್ನು ಖರೀದಿಸಿದ್ದಾರೆ.

 

ʼಗೂಗ್ಲಿʼ ರೀಮೇಕ್‌ ಹಕ್ಕುಗಳನ್ನು ಖರೀದಿ ಮಾಡಿದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಹೇಶ್‌, "ನಾನು ಯಶ್‌ ಅವರ ಸಿನಿ ಪ್ರಯಾಣ ಗಮನಿಸುತ್ತ ಬಂದಿದ್ದೇನೆ. ʼಗೂಗ್ಲಿʼ ಸೇರಿ ಹಲವು ಸಿನಿಮಾಗಳಲ್ಲಿ ನಟಿಸುತ್ತ ಹಂತ ಹಂತವಾಗಿ ಬೆಳೆದ ಅವರು ʼಕೆಜಿಎಫ್‌ʼ ಚಿತ್ರದ ಬಳಿಕ ʼನ್ಯಾಷನಲ್‌ ಸ್ಟಾರ್‌ʼ ಆಗಿ ಬೆಳೆದಿದ್ದಾರೆ. ಅವರು ನಟಿಸಿದ್ದ ʼಗೂಗ್ಲಿʼ ಸಿನಿಮಾ ಕನ್ನಡದ ಮಟ್ಟಿಗೆ ಬಹುದೊಡ್ಡ ಯಶಸ್ಸು ಗಳಿಸಿತ್ತು. ಈ ಚಿತ್ರವನ್ನು ಪರಭಾಷೆಯವರಿಗೂ ದಾಟಿಸುವ ಉದ್ದೇಶವಿದೆ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸ್ಯಾಂಡಲ್‌ವುಡ್‌ಗೆ ಸ್ಟಾರ್‌ ಕಲಾವಿದರನ್ನು ನೀಡಿದ 'ಮೊಗ್ಗಿನ ಮನಸ್ಸು' ಚಿತ್ರಕ್ಕೆ 14ರ ಸಂಭ್ರಮ

ʼಗೂಗ್ಲಿʼ ಸಿನಿಮಾ ರೀಮೇಕ್‌ ಹಕ್ಕುಗಳು ಮಾರಾಟವಾಗಿದೆ ಎಂಬ ವಿಚಾರ ನನಗೆ ತಿಳಿದಿರಲಿಲ್ಲ ಎಂದು ನಿರ್ದೇಶಕ ಪವನ್‌ ಒಡೆಯರ್‌ ತಿಳಿಸಿದ್ದಾರೆ. ಚಿತ್ರದ ರೀಮೇಕ್ ಹಕ್ಕುಗಳು ನಿರ್ಮಾಪಕರಾದ ಜಯಣ್ಣ ಅವರ ಬಳಿ ಇರುವುದರಿಂದ ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಜಯಣ್ಣ ಮತ್ತು ಮಹೇಶ್ ಅವರ ನಡುವೆ ಈ ಒಪ್ಪಂದ ನಡೆದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂತು ಎಂದು ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್