ಸುದ್ದಿಯಾದವರು | ಮತ್ತೊಮ್ಮೆ ಕನ್ನಡದ ಕಿಚ್ಚು ಹೊತ್ತಿಸಿದ ಸುದೀಪ

kichcha sudeep

ಸುಮ್ಮನೆ ಯೋಚಿಸುವವರ ಪಾಲಿಗೆ ಸುದೀಪ್ ಒಬ್ಬ ನಟ ಅಷ್ಟೇ ಎನಿಸಬಹುದು. ಆದರೆ, ಹಾಗೆ ಯೋಚಿಸುವವರು ಕೂಡ, "ಓಹ್... ಭಯಂಕರ..." ಎಂದು ಉದ್ಗರಿಸುವಂತೆ ಮಾಡುವ ಬೆಳವಣಿಗೆಯೊಂದು ನಡೆದಿದೆ. 'ಹಿಂದಿ ರಾಷ್ಟ್ರಭಾಷೆ' ಎಂದು ಬೀಗುತ್ತಿದ್ದ ಮಂದಿಗೆ ಕರ್ನಾಟಕದ ಈ ನಟ ಕೊಟ್ಟದ್ದು ಭರ್ಜರಿ ಚಾಟಿಯೇಟು. ಇಂಥ ಸುದೀಪ್ ಬದುಕಿನ ಕುರಿತ ಬರಹವಿದು

ಕನ್ನಡ ಚಿತ್ರರಂಗದ ಖ್ಯಾತನಾಮರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಟ ಕಿಚ್ಚ ಸುದೀಪ್. ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡವರು.

ಶಿವಮೊಗ್ಗ ಮೂಲದ ಸುದೀಪ್, ಬಾಲ್ಯದಲ್ಲಿಯೇ ತಮ್ಮ ಕುಟುಂಬದೊಂದಿಗೆ ಬೆಂಗಳೂರು ಸೇರಿದವರು. ತಂದೆ ಸಂಜೀವ್ ಹೋಟೆಲ್ ಉದ್ಯಮಿ. ಅಪ್ಪನ ಉದ್ಯಮವನ್ನೇ ಮುನ್ನಡೆಸಿಕೊಂಡು ಹೋಗುವ ಸುಲಭದ ಆಯ್ಕೆ ಎದುರಿಗಿದ್ದರೂ ಭಿನ್ನ ಹಾದಿ ತುಳಿಯುವ ಸುದೀಪ್, ನಟನೆಯತ್ತ ಒಲವು ತೋರುತ್ತಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ. ನಟನಾಗದಿದ್ದರೆ ಕ್ರಿಕೆಟಿಗನಾಗುತ್ತಿದ್ದೆ ಎನ್ನುವ ಅವರು, 19 ವಯಸ್ಸಿನವರೊಳಗಿನ ಕ್ರಿಕೆಟ್ ತಂಡದಲ್ಲೂ ಆಟವಾಡಿದ್ದಾರೆ. ಪದವಿ ಮುಗಿದ ಬಳಿಕ ನಿರ್ದೇಶಕ ಉಪೇಂದ್ರ ಅವರ ಸಂಪರ್ಕ. ಸಿನಿಮಾ ಪ್ರೀತಿ ಹೆಚ್ಚಿ, ನಟನೆ ಮತ್ತು ನಿರ್ದೇಶನ ಕಲಿಯುವ ಸಲುವಾಗಿ ಮುಂಬೈಗೆ ಪಯಣ. ಅಲ್ಲಿ ʼರೋಶನ್ ತನೇಜಾʼ ಅವರ ನಟನಾ ಶಾಲೆಯಲ್ಲಿ ಪಳಗುವ ಸುದೀಪ್, ಶ್ರದ್ಧೆಯಿಂದ ಕಲಿಯುತ್ತಾರೆ.

Image
sudeep family
ಕುಟುಂಬದೊಂದಿಗೆ ಸುದೀಪ್

ಅದಾದ ಬಳಿಕ ಬೆಂಗಳೂರಿಗೆ ವಾಪಸ್. ಕೆಲವು ಖಾಸಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 1996ರ ಜನವರಿ 31ರಂದು ಸುದೀಪ್ ಮುಖ್ಯಭೂಮಿಕೆಯಲ್ಲಿ 'ಬ್ರಹ್ಮʼ ಸಿನಿಮಾ ಸೆಟ್ಟೇರುತ್ತದೆ. ಆದರೆ, ಮುಹೂರ್ತವಾದ ಕೇವಲ 15 ದಿನಕ್ಕೆ ಚಿತ್ರೀಕರಣ ನಿಲ್ಲುತ್ತದೆ. ನಂತರ ʼಓ ಕುಸುಮ ಬಾಲೆʼ ಚಿತ್ರ ಕೂಡ ಅರ್ಧಕ್ಕೆ ನಿಂತುಹೋಗುತ್ತದೆ. ಮೊದಲ ಎರಡೂ ಚಿತ್ರಗಳು ಸ್ಥಗಿತಗೊಂಡ ಬೆನ್ನಲ್ಲೇ ಸುದೀಪ್ ʼತಾಯವ್ವʼ ಚಿತ್ರದಲ್ಲಿ ನಟಿಸುತ್ತಾರೆ. ಆದರೆ, ತೆರೆಕಂಡ ಮೂರೇ ದಿನಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುತ್ತದೆ.

ಸಿನಿಮಾ ಸೋಲಿನಿಂದ ಕಂಗೆಡುವ ಸುದೀಪ್, ಬೆಳ್ಳಿ ಪರದೆಯಿಂದ ದೂರ ಉಳಿಯಲು ನಿರ್ಧರಿಸುತ್ತಾರೆ. ನಂತರ ʼಪ್ರೇಮದ ಕಾದಂಬರಿʼ ಧಾರಾವಾಹಿಯಲ್ಲಿ ನಟಿಸುವ ಅವರಿಗೆ, ಕಿರುತೆರೆಯಲ್ಲಿ ತಕ್ಕ ಮಟ್ಟಿಗೆ ಜನಪ್ರಿಯತೆ ಸಿಗುತ್ತದೆ. ಧಾರಾವಾಹಿಯಲ್ಲಿ ಗಳಿಸಿದ ಜನಪ್ರಿಯತೆಯ ಆಧಾರದ ಮೇಲೆ 1999ರಲ್ಲಿ ಮತ್ತೆ ಸಿನಿರಂಗ ಪ್ರವೇಶ. ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ಮೂಡಿಬಂದ ʼಪ್ರತ್ಯರ್ಥʼ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ನಂತರ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ʼಸ್ಪರ್ಶʼ ಚಿತ್ರದಿಂದ ಸುದೀಪ್ ಕನ್ನಡಿಗರಿಗೆ ಹತ್ತಿರವಾಗುತ್ತಾರೆ.

Image
sparsha movie
'ಸ್ಪರ್ಶ' ಚಿತ್ರದ ದೃಶ್ಯ

2001ರಲ್ಲಿ ತೆರೆಕಂಡ ʼಹುಚ್ಚʼ ಸಿನಿಮಾ, ಸುದೀಪ್ ಸಿನಿಮಾ ಬದುಕಿಗೆ ದೊಡ್ಡ ಮಟ್ಟದ ತಿರುವು ನೀಡುತ್ತದೆ. ಈ ಚಿತ್ರ ತೆರೆಕಾಣುವ ಮೊದಲು ಕೇವಲ ಸುದೀಪ್ ಆಗಿದ್ದ ಅವರು, ನಂತರ ಸಿನಿ ರಸಿಕರ ಪಾಲಿಗೆ ಪ್ರೀತಿಯ 'ಕಿಚ್ಚ'ನಾಗಿ ಬದಲಾಗುತ್ತಾರೆ. ‘ಹುಚ್ಚ’ ಸಿನಿಮಾ ಯಶಸ್ಸಿನ ಬಳಿಕ ಸುದೀಪ್ ಹಿಂದಿರುಗಿ ನೋಡುವ ಅಗತ್ಯ ಬೀಳಲೇ ಇಲ್ಲ. ನಂತರದ ದಿನಗಳಲ್ಲಿ ಮೂಡಿಬಂದ ʼವಾಲಿ,' ʼಚಂದು,' ʼನಂದಿ,' ʼಕಿಚ್ಚಾ,' ʼಸ್ವಾತಿಮುತ್ತುʼ ಹಾಗೂ ʼಕಾಶಿʼ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಯಶಸ್ವಿಯಾದವು.

2005-06ರ ಹೊತ್ತಿಗೆ ಕನ್ನಡದಲ್ಲಿ ಭರವಸೆಯ ನಟನಾಗಿ ಬೆಳೆದಿದ್ದ ಸುದೀಪ್, ಮುಂದೆ ನಿರ್ದೇಶಕನಾಗಿಯೂ ಮೋಡಿ ಮಾಡಿದರು. ಅವರೇ ಹಣ ಹೂಡಿ, ನಟಿಸಿ, ನಿರ್ದೇಶಿಸಿದ್ದ ʼಮೈ ಆಟೋಗ್ರಾಫ್ʼ ಸಿನಿಮಾ ನೋಡುಗರನ್ನು ಭಾವನೆಯ ಅಲೆಯಲ್ಲಿ ತೇಲಿಸಿತ್ತು. ಪ್ರೇಕ್ಷಕರ ಕೈ ಹಿಡಿದು ಬಾಲ್ಯಕ್ಕೆ ಕರೆದೊಯ್ದಿತ್ತು. ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಎಲ್ಲರನ್ನೂ ಸೆಳೆದ ಕಿಚ್ಚ, ತಾವು ಕನ್ನಡದ ಪ್ರತಿಭಾವಂತ ನಿರ್ದೇಶಕ ಎಂಬುದನ್ನು ಸಾಬೀತು ಮಾಡಿದರು. ʼಮೈ ಆಟೋಗ್ರಾಫ್ʼ ಸಿನಿಮಾ ಸುದೀಪ್ ಪಾಲಿಗೆ ಕನಸಿನ ಪ್ರಯೋಗವಾಗಿತ್ತು. ಹೀಗಾಗಿ, ಚಿತ್ರಕ್ಕೆ ತಾವೇ ಬಂಡವಾಳ ಹೂಡುವ ಮೂಲಕ ನಿರ್ಮಾಪಕನ ಜವಾಬ್ದಾರಿಯನ್ನೂ ನಿಭಾಯಿಸಿದ್ದರು.

ʼಮೈ ಆಟೋಗ್ರಾಫ್ʼ ಬಳಿಕ ʼನಂ.73 ಶಾಂತಿ ನಿವಾಸ,' ʼವೀರ ಮದಕರಿ,ʼ ʼಜಸ್ಟ್ ಮಾತ್ ಮಾತಲ್ಲಿ,ʼ 'ಕೆಂಪೇಗೌಡʼ ಮತ್ತು ʼಮಾಣಿಕ್ಯʼ ಸಿನಿಮಾಗಳನ್ನು ಸುದೀಪ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಟನೆಯ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿರುವ ಅವರು, 2016ರಲ್ಲಿ ತೆರೆಕಂಡ 'ಜಿಗರ್‌ಥಂಡಾʼ ಮತ್ತು ಅವರದ್ದೇ ನಟನೆಯ ʼಅಂಬಿ ನಿಂಗೆ ವಯಸ್ಸಾಯ್ತೋʼ ಸಿನಿಮಾಗಳನ್ನು ತಮ್ಮ ʼಕಿಚ್ಚಾ ಕ್ರಿಯೇಶನ್ಸ್ʼ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

Image
kichcha
'ಬಿಗ್‌ಬಾಸ್' ಕಾರ್ಯಕ್ರಮದ ದೃಶ್ಯ

2010ರಲ್ಲಿ ʼಪ್ಯಾಟೆ ಹುಡುಗೀರ್ ಹಳ್ಳಿ ಲೈಫುʼ ಎಂಬ ʼರಿಯಾಲಿಟಿ ಶೋ'ವೊಂದರ ಸಾರಥ್ಯ ವಹಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆ ಒಡನಾಟ. 'ಬಿಗ್‌ಬಾಸ್‌ ರಿಯಾಲಿಟಿ ಶೋ' ಮೂಲಕ ಸ್ಟಾರ್ ನಿರೂಪಕನ ಪಟ್ಟ. 'ಬಿಗ್‌ಬಾಸ್‌' ಕಾರ್ಯಕ್ರಮ ಇಂದಿಗೂ ಸುದೀಪ್ ಸಾರಥ್ಯದಲ್ಲಿಯೇ ಮೂಡಿಬರುತ್ತಿರುವುದು ಗಮನಾರ್ಹ. 

ಇದೆಲ್ಲದರ ನಡುವೆಯೇ 2009ರಲ್ಲಿ ಬಾಲಿವುಡ್‌ಗೆ ಕಾಲಿಡುವ ಸುದೀಪ್, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ʼರನ್ʼ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಾರೆ. ಅದಾದ ಬಳಿಕ 'ಫೂಂಕ್ 2,' 'ರಕ್ತ ಚರಿತ್ರ ಭಾಗ-1' ಮತ್ತು ಭಾಗ 2ರಲ್ಲಿಯೂ ನಟಿಸಿ, ಹಿಂದಿ ನೆಲದಲ್ಲಿಯೂ ಮೆಚ್ಚುಗೆ ಗಳಿಸುತ್ತಾರೆ. 

ನೋಡುನೋಡುತ್ತಲೇ ಬಹುಭಾಷಾ ನಟನಾಗಿ ಬೆಳೆಯುವ ಸುದೀಪ್, 2012ರ ವೇಳೆಗೆ ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ʼಈಗʼ ಚಿತ್ರದಲ್ಲಿ ನಟಿಸುತ್ತಾರೆ. ಸುದೀಪ್ ನಿರ್ವಹಿಸಿದ ಖಳನ ಪಾತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತದೆ. ಅದಾದ ನಂತರ 'ಬಾಹುಬಲಿ' ಚಿತ್ರದಲ್ಲಿಯೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ.  

Image
eega movie
'ಈಗ' ಚಿತ್ರದ ದೃಶ್ಯ

2015ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸುವ ಕಿಚ್ಚ, ದಳಪತಿ ವಿಜಯ್ ನಟನೆಯ ʼಪುಲಿʼ ಚಿತ್ರದಲ್ಲಿ ನಟಿಸುತ್ತಾರೆ. 2019ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯಭೂಮಿಕೆಯಲ್ಲಿ ಮೂಡಿಬಂದ ʼಸೈರಾ ನರಸಿಂಹ ರೆಡ್ಡಿ,' ಬಾಲಿವುಡ್‌ನ 'ದಬಾಂಗ್-3' ಚಿತ್ರದಲ್ಲಿಯೂ ಸುದೀಪ್ ಕಾಣಿಸಿಕೊಂಡಿದ್ದು, ಬಹುಭಾಷಾ ನಟನಾಗಿ ಮಿಂಚುತ್ತಿದ್ದಾರೆ.

ಚಿಕ್ಕಂದಿನಿಂದಲೂ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಹೊಂದಿರುವ ಸುದೀಪ್, ʼಸಿಸಿಎಲ್ʼ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ರೂವಾರಿ. ʼಸಿಸಿಎಲ್ʼನಲ್ಲಿ ʼಕರ್ನಾಟಕ ಬುಲ್ಡೋಜರ್ಸ್ʼ ತಂಡವನ್ನು ಮುನ್ನಡೆಸಿ, ಸತತ ಎರಡು ಬಾರಿ ಕಪ್ ಗೆದ್ದು ಕೊಟ್ಟಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿ, ಪ್ರಮುಖ ಭಾರತೀಯ ಸಿನಿತಾರೆಯರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಅವರು, ಹಲವು ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದರೂ ಕನ್ನಡತನವನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ. ನೆಲ, ಜಲ, ಭಾಷೆಯ ವಿಚಾರ ಬಂದಾಗಲೆಲ್ಲ ಸುದೀಪ್ ಕನ್ನಡಿಗರ ಪರವಾಗಿ ನಿಂತಿದ್ದಾರೆ. 

Image
sudeep
ಸಿಸಿಎಲ್ ಕ್ರೀಡಾಕೂಟದ ಕ್ಷಣ

2015ರಲ್ಲಿ ಉತ್ತರ ಕರ್ನಾಟಕದ ನರಗುಂದದಲ್ಲಿ ನೀರಿಗಾಗಿ ರೈತರ ʼಮಹದಾಯಿ ಹೋರಾಟʼ ತೀವ್ರಗೊಂಡಿತ್ತು. ಆಗ ಚಿತ್ರರಂಗದ ಹಿರಿಯ ಕಲಾವಿದರ ಜೊತೆಗೆ ವೇದಿಕೆ ಏರಿದ್ದ ಸುದೀಪ್, ರೈತ ಹೋರಾಟಕ್ಕೆ ಬೇಷರತ್ ಬೆಂಬಲ ಸೂಚಿಸಿದ್ದರು. 

2016ರಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರತಿಭಟನೆ ನಡೆದು ರಾಜ್ಯದಲ್ಲಿ ಅಶಾಂತಿ ಉಂಟಾದಾಗ, ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣದಲ್ಲಿದ್ದ ಸುದೀಪ್, ಅಲ್ಲಿಂದಲೇ ಕನ್ನಡಿಗರ ಹಕ್ಕಿನ ಹೋರಾಟಕ್ಕೆ ಬೆಂಬಲ ಸೂಚಿಸಿ ಸರಣಿ ಟ್ವೀಟ್ ಮಾಡಿದ್ದರು. ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. "ಕಾವೇರಿ ಹೋರಾಟಕ್ಕೆ ಯಾವತ್ತಿಗೂ ನನ್ನ ಬೆಂಬಲವಿದೆ," ಎಂದಿದ್ದರು.

2020ರಲ್ಲಿ ತೆಲುಗು ನಟ ವಿಜಯ್ ರಂಗರಾಜು, ನಟ ವಿಷ್ಣು ವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆಗಲೂ ವಿಷ್ಣುವರ್ಧನ್ ಅಭಿಮಾನಿಯಾಗಿ ಮತ್ತು ಕನ್ನಡಿಗರ ಪ್ರತಿನಿಧಿಯಾಗಿ ಪ್ರತಿಕ್ರಿಯಿಸಿದ್ದ ಸುದೀಪ್, ತೆಲುಗು ನಟನ ಬೆವರಿಳಿಸಿದ್ದರು. ಸುದೀಪ್ ಮಧ್ಯಪ್ರವೇಶಿಸುತ್ತಲೇ ಲೈವ್‌ನಲ್ಲಿ ಮಾತನಾಡಿದ್ದ ರಂಗರಾಜು, ಕೈ ಮುಗಿದು ಕನ್ನಡಿಗರ ಕ್ಷಮೆ ಯಾಚಿಸಿದ್ದರು.

ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ, "ಹಿಂದಿ ರಾಷ್ಟ್ರಭಾಷೆಯಲ್ಲ," ಎಂದು ಗಟ್ಟಿಯಾಗಿ ಹೇಳುವ ಮೂಲಕ ಸುದೀಪ್ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ. ಜೊತೆಗೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. "ಹಿಂದಿ ರಾಷ್ಟ್ರಭಾಷೆ ಅಲ್ಲವಾದರೆ ನಿಮ್ಮ ಸಿನಿಮಾಗಳನ್ನು ಹಿಂದಿಯಲ್ಲೇಕೆ ಡಬ್ ಮಾಡುತ್ತೀರಿ?" ಎಂದು ಕೇಳಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಘನತೆಯಿಂದಲೇ ಉತ್ತರಿಸಿದ್ದಾರೆ. “ನಾವು ಹಿಂದಿಯನ್ನು ಗೌರವಿಸಿ, ಪ್ರೀತಿಸಿ ಕಲಿತ ಕಾರಣಕ್ಕೆ ನೀವು ಹಿಂದಿಯಲ್ಲಿ ಬರೆದುದನ್ನು ಅರ್ಥೈಸಿಕೊಂಡು ಪ್ರತಿಕ್ರಿಯಿಸುತ್ತಿದ್ದೇನೆ. ಒಂದು ವೇಳೆ ನಾನು ಕೂಡ ಕನ್ನಡದಲ್ಲಿ ಟ್ವೀಟ್ ಮಾಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಕನ್ನಡಿಗರು ಭಾರತಕ್ಕೆ ಸೇರಿದವರಲ್ಲವೇ?" ಎಂದು ಪ್ರಶ್ನಿಸಿದ್ದರು. ಸುದೀಪ್ ಅವರ ಕನ್ನಡ ಪ್ರೀತಿಗೆ ಕೇವಲ ಕರ್ನಾಟಕವಲ್ಲ, ಇಡೀ ದಕ್ಷಿಣ ಭಾರತವೇ ತಲೆದೂಗಿತ್ತು.

ಈಗಲೂ ಸುದೀಪ್ ಅವರ ಆ ಟ್ವೀಟ್ ಹಂಚಿಕೆ ಆಗುತ್ತಲೇ ಇದೆ. ಅಜಯ್ ದೇವಗನ್‌ಗೆ ಅವರು ಕೊಟ್ಟ ಉತ್ತರದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಒಟ್ಟಾರೆ, ಕನ್ನಡ ಭಾಷೆಯ ವಿಷಯದಲ್ಲಿ ಯಾರೇ ಎಡವಟ್ಟಿನ ಮಾತಾಡಿದರೂ, ಸುದೀಪ್ ಅವರ ವಿರೋಧ ಇದ್ದೇ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಿಮಗೆ ಏನು ಅನ್ನಿಸ್ತು?
6 ವೋಟ್