ಒಂದು ನಿಮಿಷದ ಓದು | ಮುಂಬೈ ಸುತ್ತುವವರಿಗಾಗಿ ಕಾದಿವೆ ಹೊಸ ವಿನ್ಯಾಸದ ಹವಾನಿಯಂತ್ರಿತ ಬಸ್‌

Mumbai

ಮುಂಬೈ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಯಾಣವನ್ನು ಸುಲಭಗೊಳಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹೊಸ ವಿನ್ಯಾಸದ ಹವಾನಿಯಂತ್ರಿತ ಬಸ್ ಸೇವೆ ಆರಂಭವಾಗಲಿದೆ.

ಮುಂಬೈನ ಬೆಸ್ಟ್ (ಬೃಹತ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‌ಪೋರ್ಟ್) ಮತ್ತೊಂದು 'ಹಾಪ್ ಆನ್ ಹಾಪ್' ಯೋಜನೆಯನ್ನು ಆಗಸ್ಟ್ 7ರ ಭಾನುವಾರದಂದು ಘೋಷಿಸಿದೆ. 'ಬೆಸ್ಟ್‌'ನ 75ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಈ ಯೋಜನೆ ಆರಂಭವಾಗಿದ್ದು, ಆಗಸ್ಟ್ 8ರಿಂದ ಹೊಸ ಬಸ್‌ ಸೇವೆ ಶುರುವಾಗಲಿದೆ.

"ಪ್ರವಾಸಿಗರು 150 ರೂಪಾಯಿಯ ಟಿಕೆಟ್ ಪಡೆದರೆ ಸಾಕು, ಇಡೀ ದಿನ ಈ ಬಸ್‌ನಲ್ಲಿ ಪ್ರಯಾಣ ಮಾಡಬಹುದು. ಮಾರ್ಗ ಮಧ್ಯೆ ಇಳಿಯುವವರು ಇತರ ಬಸ್‌ಗಳಲ್ಲೂ ಪ್ರಯಾಣಿಸಬಹುದು. ಇದೇ ವಿನ್ಯಾಸದಲ್ಲಿ ಡಬಲ್ ಡೆಕ್ಕರ್‌ ಬಸ್‌ಗಳನ್ನು ಕೂಡ ಪ್ರಾರಂಭಿಸುವ ಆಲೋಚನೆ ಇದ್ದು, ಇದರಿಂದ ಪ್ರವಾಸಿಗರ ʼಮುಂಬೈ ದರ್ಶನʼ ಇನ್ನಷ್ಟು ಆಕರ್ಷಕವಾಗಲಿದೆ," ಎಂದಿದ್ದಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.

ಸದ್ಯ ಇರುವ 'ಹೋ-ಹೋ' ಬಸ್‌ಗಳು ಗೇಟ್‌ ವೇ ಆಫ್‌ ಇಂಡಿಯಾದಿಂದ ಜುಹು ಚೌಪಾಟಿಯವರೆಗೆ ಕಾರ್ಯನಿರ್ವಹಿಸುತ್ತಿವೆ. ಈ ಮಾರ್ಗದಲ್ಲಿ ಹಲವಾರು ಪ್ರವಾಸಿ ಬಸ್‌ ನಿಲುಗಡೆಗಳು ಸಹ ಇವೆ. ಹೊಸ 'ಹೋ-ಹೋ' ಬಸ್‌ಗಳು ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ನಿಂದ ನಗರದ ಸುತ್ತಮುತ್ತಲ ಸ್ಥಳಗಳಿಗೆ ಸೇವೆ ಒದಗಿಸಲಿವೆ.

2023ರ ವೇಳೆಗೆ ಶೇಕಡ 50ರಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಆರಂಭಿಸುವ ಯೋಜನೆ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯದ್ದು. ಜೊತೆಗೆ, 2026ರ ವೇಳೆಗೆ ಮುಂಬೈನ ಎಲ್ಲ ಬಸ್‌ಗಳನ್ನು ಎಲೆಕ್ಟ್ರಿಕ್‌ ಬಸ್‌ಗಳನ್ನಾಗಿ ಪರಿವರ್ತಿಸಲು ಕೂಡ ಯೋಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್