ಸುದ್ದಿ ವಿವರ | ಆಫ್ರಿಕಾದ ಬರಪೀಡಿತ ಪ್ರದೇಶಗಳ ಹಸಿವು ನೀಗಿಸಲಿದೆಯೇ ಕೀಟ ಕೃಷಿ?

Insect Eating

ಆಹಾರದ ಕೊರತೆ ಎದುರಿಸುತ್ತಿರುವ ಆಫ್ರಿಕಾ ರಾಷ್ಟ್ರಗಳಿಗೆ ಕೀಟಾಹಾರದ ಮೊರೆ ಹೋಗುವಂತೆ ಸಲಹೆ ಸಿಕ್ಕಿದೆ. ಈ ಬಗ್ಗೆ 'ದಿ ಗಾರ್ಡಿಯನ್ʼ ಪತ್ರಿಕೆ ಸ್ವಾರಸ್ಯಕರ ವರದಿ ಮಾಡಿದ್ದು, ಕೀಟ ಕೃಷಿಗೆ ಅವಶ್ಯ ಸಹಾಯ ಮಾಡುವುದಾಗಿ ದತ್ತಿ (ಚಾರಿಟಿ) ಸಂಸ್ಥೆಯೊಂದು ಮುಂದೆ ಬಂದಿದೆ. ಏನಿದು ಕೀಟ ಕೃಷಿ, ಆಫ್ರಿಕಾದಲ್ಲೇ ಯಾಕೆ ಈ ಯೋಜನೆ ಇತ್ಯಾದಿ ಮಾಹಿತಿ ಇಲ್ಲಿದೆ

ಯೋಜನೆಯ ರೂಪುರೇಷೆಗಳೇನು?

ಮಾನವ ಮತ್ತು ಪಶು ಆಹಾರಕ್ಕಾಗಿ ಕೀಟಗಳ ಉತ್ಪಾದನೆಯನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಯೋಜನೆಯ ಭಾಗವಾಗಿ ಈ ಕೀಟ ಕೃಷಿ ಪ್ರಸ್ತಾವನೆ ಮಾಡಲಾಗಿದೆ. ಈಗಾಗಲೇ ಕಾಂಗೋ ಮತ್ತು ಜಿಂಬಾಬ್ವೆಯಲ್ಲಿ ಪ್ರಾಯೋಗಿಕ ಕೀಟ ಕೃಷಿ ಜಾರಿಯಲ್ಲಿದ್ದು, 2022ರ ಡಿಸೆಂಬರ್‌ವರೆಗೆ ಚಾಲ್ತಿಯಲ್ಲಿರಲಿದೆ. ಇಂಗ್ಲೆಂಡ್‌ನ 'ಕ್ಯಾಥೊಲಿಕ್ ಏಜೆನ್ಸಿ ಆ್ಯಂಡ್ ವೇಲ್ಸ್' ಎಂಬ ದತ್ತಿ ಸಂಸ್ಥೆ ಈ ಯೋಜನೆಗೆ ಧನಸಹಾಯ ಮಾಡುತ್ತಿದೆ. ಪ್ರಾಯೋಗಿಕ ಯೋಜನೆಯ ಫಲಿತಾಂಶ ಆಧರಿಸಿ ಇತರೆ ದೇಶಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಆಲೋಚನೆ ಇದೆ.

ಆಫ್ರಿಕಾದಲ್ಲೇ ಈ ಯೋಜನೆ ಏಕೆ?

“ಜಾಗತಿಕವಾಗಿ ಜನಸಂಖ್ಯೆ ಹೆಚ್ಚುತ್ತಿದ್ದು, ಕೀಟಗಳನ್ನು ಆಹಾರವಾಗಿಸಿಕೊಳ್ಳುವತ್ತ ಕೆಲವು ದೇಶಗಳು ಆಸಕ್ತಿ ತೋರಿಸುತ್ತಿವೆ. ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಕೀಟಗಳು ಸಾಂಪ್ರದಾಯಿಕ ಆಹಾರ ಪದ್ಧತಿಯ ಭಾಗವಾಗಿದ್ದು, ಇಲ್ಲಿ ತಿನ್ನಲು ಯೋಗ್ಯವಾದ 250ಕ್ಕೂ ಹೆಚ್ಚು ಕೀಟ ಪ್ರಭೇದಗಳಿವೆ. ಕೀಟಗಳು ಹೆಚ್ಚು ಪ್ರೋಟಿನ್ ಅಂಶ ಹೊಂದಿರುವ ಆಹಾರವಾಗಿದ್ದು, ಸುಲಭವಾಗಿ ಲಭ್ಯವಾಗುತ್ತವೆ. ಅಲ್ಲದೆ, ಅಗ್ಗದ ಆಹಾರ ಮೂಲವಾಗಿದ್ದು, ಆಹಾರದ ಭದ್ರತೆ ಒದಗಿಸುತ್ತವೆ,” ಎನ್ನುತ್ತದೆ ಯೋಜನಾ ವರದಿ.

ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ಸಂತಾನಹರಣ ಶಸ್ತ್ರಚಿಕಿತ್ಸೆ; ಹಳೇ ಪದ್ಧತಿಗೆ ಜೋತುಬಿದ್ದು ಮಹಿಳೆಯರ ಪ್ರಾಣಕ್ಕೆ ಕುತ್ತು ತಂದ ತೆಲಂಗಾಣ

ಆಫ್ರಿಕನ್ನರಲ್ಲಿ ಕೀಟಾಹಾರ ರೂಢಿ ಹೇಗಿದೆ?

ಆಫ್ರಿಕಾದ ದಕ್ಷಿಣ ಕಿವು ಪ್ರದೇಶದ ಜನ 23 ಬಗೆಯ ಕೀಟಗಳನ್ನು ತಿನ್ನುತ್ತಾರೆ. ಕಾಂಗೋಲಿಗಳು ಕೀಟಗಳನ್ನು ಉತ್ಪಾದಿಸುವುದಿಲ್ಲ; ಋತುಮಾನಕ್ಕೆ ತಕ್ಕಂತೆ ಸಿಗುವ ಹುಳುಗಳನ್ನು ಸಂಗ್ರಹಿಸುತ್ತಾರೆ. ಆಫ್ರಿಕನ್ ಕ್ಯಾಟರ್‌ ಪಿಲ್ಲರ್ಸ್‌ (Caterpillars), ವಲಸೆ ಮಿಡತೆಗಳು (Migratory Locusts), ಕಪ್ಪು ಸೈನಿಕ ಹುಳುಗಳು (Black Soldier Flies), ಪಾಮ್ ವೀವಿಲ್, ಜೀರುಂಡೆ, ಗೆದ್ದಲು ಹಾಗೂ ಮಿಡತೆಗಳು ಆಫ್ರಿಕನ್ನರು ಸಾಮಾನ್ಯವಾಗಿ ಸೇವಿಸುವ ಕೀಟಗಳಾಗಿವೆ.

ಕೀಟ ಕೃಷಿಯ ಅಗತ್ಯ ಏನಿದೆ?

ಆಫ್ರಿಕಾದ ಹಲವು ದೇಶದ ಜನರು ಸಾಂಪ್ರದಾಯಿಕ ಕೃಷಿ ನೆಚ್ಚಿಕೊಂಡಿದ್ದು, ಜಾನುವಾರು ಸಾಕಾಣಿಕೆಯನ್ನು ಅವಲಂಭಿಸಿದ್ದಾರೆ. ಹೆಚ್ಚು ನೀರು ಬೇಡುವ ದನದ ಮಾಂಸದ ವ್ಯಾಪಾರ ಇವರದ್ದಾಗಿದೆ. ಇದಕ್ಕಾಗಿ ಅವರಿಗೆ ಭೂಮಿ ಮತ್ತು ನೀರಿನ ಅವಶ್ಯಕತೆ ಹೆಚ್ಚಿದೆ. ಆದರೆ, ಕೀಟ ಕೃಷಿ ನೀರು ಮತ್ತು ಭೂಮಿಯನ್ನು ಕೇಳುವುದಿಲ್ಲ, ಹಾಗಾಗಿ ಅತ್ಯಂತ ಸುಲಭವಾದದ್ದು ಎಂದು ಹೇಳಲಾಗುತ್ತಿದೆ. ಆದರೆ, ಆಹಾರದ ಅಭಿರುಚಿ ಮತ್ತು ಸಾಂಸ್ಕೃತಿಕ ಹಿಂಜರಿಕೆಯು ಕೀಟಾಹಾರವನ್ನು ಅಭ್ಯಾಸ ಮಾಡಿಕೊಳ್ಳಲು ಜನರಿಗೆ ಕಷ್ಟ ತಂದಿಟ್ಟಿದೆ.

ಆಫ್ರಿಕಾದಲ್ಲಿ ಆಹಾರ ಅಭದ್ರತೆಯ ಸ್ಥಿತಿಗತಿ ಏನು?

ವಿಶ್ವ ಆಹಾರ ಸಂಸ್ಥೆ ಪ್ರಕಾರ, ಆಫ್ರಿಕಾದಲ್ಲಿ ಆಹಾರದ ಅಭದ್ರತೆ ಎದುರಿಸುತ್ತಿರುವ ಜನಸಂಖ್ಯೆ 2.20 ಕೋಟಿ. ಕೆನ್ಯಾ, ಸೊಮಾಲಿಯಾ ಹಾಗೂ ಇಥಿಯೋಪಿಯಾದಲ್ಲಿನ ಅಸಮರ್ಪಕ ಮಳೆಯಿಂದ, ಕಳೆದ 40 ವರ್ಷಗಳ ಅವಧಿಯ ಅತಿ ದೊಡ್ಡ ಬರಗಾಲ ಎದುರಾಗಿದೆ. ಈ ಭೀಕರ ಬರದ ಪರಿಸ್ಥಿತಿ ಇಲ್ಲಿನ ಜನರನ್ನು ಹಸಿವಿಗೆ ದೂಡಿದೆ. ಹಾಗಾಗಿಯೇ ಕೀಟ ಕೃಷಿ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್